ಅರ್ಧದಷ್ಟು ಚಿತ್ರರಂಗ ಅಲ್ಲಿತ್ತು. ಕೆಲವಷ್ಟು ಚಿತ್ರತಂಡಗಳು ತಮ್ಮ ಹೊಸ ಸಿನಿಮಾ ಪ್ರಾರಂಭದ ಸಂಭ್ರಮದಲ್ಲಿದ್ದರು. ಕಾರಣವಾಗಿದ್ದು ಅಮೃತ ಸಿನಿ ಕ್ರಾಫ್ಟ್ ನಿರ್ಮಾಣ ಸಂಸ್ಥೆ ಪ್ರಾರಂಭ ಸಮಾರಂಭ. ವಿಜಯ್ ಟಾಟಾ ಒಡೆತನದ ಈ ಸಂಸ್ಥೆ ಆರು ಹೊಸ ಸಿನಿಮಾಗಳ ಘೋಷಣೆಯೊಂದಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ. ನಟ ರವಿಚಂದ್ರನ್, ಶ್ರೀಮುರಳಿ, ಶರಣ್, ಹಂಸಲೇಖ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಶಶಾಂಕ್, ಸಾಧು ಕೋಕಿಲ ಹೊಸ ಸಿನಿಮಾಗಳ ನಿರ್ದೇಶಕರು ಮತ್ತು ತಂಡದ ಹೆಸರನ್ನು ಘೋಷಿಸಿ ಶುಭ ಹಾರೈಸಿದರು.
ಕೃಷ್ಣ ಅಜಯ್ ರಾವ್ ನಾಯಕ ಮತ್ತು ನಿರ್ದೇಶಕನಾಗಿರುವ ಸಿನಿಮಾ ಈ ಸಂಸ್ಥೆಯಿಂದ ಮೊದಲು ಸೆಟ್ಟೇರಲಿದೆ. ಬಳಿಕ ಡಿ.ಎಸ್.ಪಿ ವರ್ಮ ನಿರ್ದೇಶನದಲ್ಲಿ ವಿನಯ್ ರಾಜಕುಮಾರ್ ನಟನೆಯ ಸಿನಿಮಾ ಪ್ರಾರಂಭಗೊಳ್ಳಲಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಒಂದು ಘೋಷಣೆಗೊಂಡಿದೆ. ನಟ ವಿಕ್ರಂ ರವಿಚಂದ್ರನ್‌ಗೆ ರಿಷಬ್ ಆರ್ಯ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಪ್ರಶಾಂತ್ ಸಿದ್ಧಿ ಕೂಡ ನಿರ್ದೇಶಕರಾಗುತ್ತಿದ್ದು, ವಿಕಿ ವರುಣ್ ಚಿತ್ರದ ನಾಯಕ. ಮಂಜು ಸ್ವರಾಜ್ ನಿರ್ದೇಶನದ ಸಿನಿಮಾವನ್ನೂ ಸಂಸ್ಥೆ ಘೋಷಿಸಿದೆ.
‘ನಮ್ಮ ಚಿತ್ರೋದ್ಯಮದಲ್ಲಿ ಉತ್ತಮ ಚಿತ್ರಗಳು ನಿರಂತರವಾಗಿ ಬರುತ್ತಿವೆ. ಎಲ್ಲೋ ಕೆಲವೊಮ್ಮೆ ಚಿತ್ರಗಳು ಸೋತಿರಬಹುದು. ಗೆಲುವಿನ ಹುಮ್ಮಸಿನಲ್ಲಿ ನಾವು ಸಾಗಬೇಕು. ಇವತ್ತು ವಿಜಯ್ ಟಾಟಾ ಒಟ್ಟುಗೆ ಆರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದು, ಇದು ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆ. ಇವತ್ತಿನ ಹೊಸ ಪೀಳಿಗೆಯ ನಿರ್ದೇಶಕರು, ನಟರು ಆಸಕ್ತಿಯಿಂದ ಕೆಲಸ ಮಾಡಿ. ಚಿತ್ರೀಕರಣ ಪ್ರಾರಂಭವಾಗಿ ಆರು ತಿಂಗಳಲ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಬೇಕು. ನಿರ್ಮಾಣ ಸಂಸ್ಥೆ ಸಾಲು ಸಾಲು ಚಿತ್ರಗಳನ್ನು ಮಾಡುವಂತಾಗಬೇಕು’ ಎಂದು ರವಿಚಂದ್ರನ್ ಕರೆ ನೀಡಿದರು.
‘ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ನಾವು ಇಷ್ಟೂ ಸಿನಿಮಾಗಳನ್ನು ಒಟ್ಟಿಗೆ ಘೋಷಿಸಿದ್ದೇವೆ. ಇದರ ಜತೆಗೆ ಅರ್ಧಕ್ಕೆ ನಿಂತಿರುವ ಕೆಲ ಸಿನಿಮಾಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತೇವೆ. ಒಂದಷ್ಟು ಸಿನಿಮಾ ಬಿಡುಗಡೆಗೂ ನಾವು ಸಹಾಯ ಮಾಡುತ್ತೇವೆ. ಪ್ರತಿ ವಾರ ನಮ್ಮ ಸಂಸ್ಥೆಯಿಂದ ಒಂದು ಸಿನಿಮಾ ತೆರೆಗೆ ತರುವ ಆಲೋಚನೆ ಇದೆ. ಹಂತಹಂತವಾಗಿ ಈ ಬಗ್ಗೆ ವಿವರ ನೀಡುತ್ತೇವೆ’ ಎಂದರು ವಿಜಯ್ ಟಾಟಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.