ADVERTISEMENT

ವಿಶ್ವ ಸಿನಿಮೋತ್ಸವ | ‘ಅಮೃತಮತಿ’ ಹರಿಪ್ರಿಯಾ ಶ್ರೇಷ್ಠನಟಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 4:56 IST
Last Updated 10 ಮಾರ್ಚ್ 2020, 4:56 IST
ಹರಿಪ್ರಿಯಾ
ಹರಿಪ್ರಿಯಾ    

‘ಅಮೃತಮತಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟಿ ಹರಿಪ್ರಿಯಾ ಅವರು ನೋಯ್ಡಾದಲ್ಲಿ ನಡೆದ ನಾಲ್ಕನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿ ‘ಶ್ರೇಷ್ಠ ನಟಿ’ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ವಿಶ್ವ ಸಿನಿಮೋತ್ಸವದ ಸ್ಪರ್ಧಾ ವಿಭಾಗಕ್ಕೆಅಮೃತಮತಿ ಸಿನಿಮಾ ಆಯ್ಕೆಯಾಗಿತ್ತು. ಈ ವಿಭಾಗದಲ್ಲಿ ಭಾರತೀಯ ಭಾಷಾ ಸಿನಿಮಾಗಳಲ್ಲದೇ, ಬ್ರೆಜಿಲ್‌, ಬ್ರಿಟನ್‌, ಚೀನಾ, ಕೊರಿಯಾ, ಅರ್ಜೆಂಟೈನಾ, ಆಲ್ಚೀರಿಯಾ, ಸ್ಪೇನ್, ಟರ್ಕಿ ಮತ್ತಿತರ ದೇಶಗಳ ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಇವುಗಳಲ್ಲಿ ಟರ್ಕಿಯ ಸಿನಿಮಾದಲ್ಲಿನ ಅಭಿನಯಕ್ಕಾಗಿ ಆ ಸಿನಿಮಾದ ನಾಯಕ ನಟ ‘ಶ್ರೇಷ್ಠನಟ’ ಪ್ರಶಸ್ತಿಗೆ ಆಯ್ಕೆಯಾದರೆ, ಕನ್ನಡದ ‘ಅಮೃತಮತಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಹರಿಪ್ರಿಯಾ ಅವರು ‘ಶ್ರೇಷ್ಠ ನಟಿ’ ಪ್ರಶಸ್ತಿಗೆ ಭಾಜನರಾದರು.

13ನೇ ಶತಮಾನದ ಜನ್ನಕವಿ ರಚಿತ ‘ಯಶೋಧರ ಚರಿತೆ’ ಆಧರಿಸಿದ ಈ ಸಿನಿಮಾವನ್ನು ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದಾರೆ. ‘ಅನ್ಯಪುರುಷನ ಸಂಬಂಧ ಮತ್ತು ಮಹಿಳಾ ಮನಸ್ಸಿನ ತಲ್ಲಣಗಳ ಸೂಕ್ಷ್ಮ ಸಂದರ್ಭಗಳನ್ನು ಹರಿಪ್ರಿಯಾ ಅವರು ಅಷ್ಟೇ ಸೂಕ್ಷ್ಮವಾಗಿ ಈ ಚಿತ್ರದಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ಶ್ರೇಷ್ಠನಟಿ ಪ್ರಶಸ್ತಿ ಲಭಿಸಿದೆ’ ಎನ್ನುತ್ತಾರೆ ಸಿನಿಮಾ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ.

ADVERTISEMENT

ಈ ಸಿನಿಮಾದಲ್ಲಿ ಯಶೋಧರ ಪಾತ್ರಧಾರಿಯಾಗಿ ಕಿಶೋರ್ ಅಭಿನಯಿಸಿದ್ದಾರೆ. ಸುಂದರರಾಜ್‌, ಪ್ರಮೀಳಾ ಜೋಷಾಯ್‌, ಸುಪ್ರಿಯಾ ರಾವ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸುರೇಶ್ ಅರಸು ಅವರ ಸಂಕಲನ, ನಾಗರಾಜ್ ಅವಧಾನಿಯವರ ಛಾಯಾಗ್ರಹಣ ಮತ್ತು ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.