ADVERTISEMENT

ಸ್ಯಾಂಡಲ್‌ವುಡ್‌ ಗ್ರ್ಯಾಂಡ್‌ ಎಂಟ್ರಿಗೆ ಅಂಜಲಿ ಅಣಿ

ಕೆ.ಎಂ.ಸಂತೋಷಕುಮಾರ್
Published 8 ಅಕ್ಟೋಬರ್ 2020, 16:17 IST
Last Updated 8 ಅಕ್ಟೋಬರ್ 2020, 16:17 IST
ಅಂಜಲಿ ಅನೀಶ್‌
ಅಂಜಲಿ ಅನೀಶ್‌   

ಸಿಲಿಕಾನ್‌ ಸಿಟಿಯ ಮತ್ತೊಬ್ಬ ಬೆಡಗಿ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡಲು ಅಣಿಯಾಗಿದ್ದಾರೆ. ಹೆಸರು ಅಂಜಲಿ ಅನೀಶ್‌. ಬೆಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿರುವ ಇವರು, ಯೋಗರಾಜ್‌ ಭಟ್ಟರ ಸಿನಿಮಾ ‘ಪದವಿ ಪೂರ್ವ’ದ ನಾಯಕಿ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಹರಿಪ್ರಸಾದ್ ಜಯಣ್ಣ.

‘ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020’ ಸ್ಪರ್ಧೆಯಲ್ಲಿ ವಿನ್ನರ್‌ ಆಗಿ, ‘ನ್ಯಾಷನಲ್ ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020' ಸ್ಪರ್ಧೆಯ ಮೊದಲ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಸುಂದರಿ ಇವರು.

ಮಾಡೆಲಿಂಗ್‌ ಮತ್ತು ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇದ್ದಿದ್ದರಿಂದ ಒಳ್ಳೆಯ ಬ್ಯಾನರ್, ಒಳ್ಳೆಯ ಕಥೆ‌ ಹಾಗೂ ಒಳ್ಳೆಯ ನಿರ್ದೇಶಕರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲು ಎರಡು ವರ್ಷಗಳಿಂದ ಕಾದಿದ್ದರಂತೆ ಅಂಜಲಿ.

ADVERTISEMENT

‘ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ‘ಪದವಿ ಪೂರ್ವ’ ಚಿತ್ರ ನನ್ನ ಕನಸು ನನಸಾಗಿಸುತ್ತಿದೆ’ ಎನ್ನುವ ಇವರು, ಶಿಕಾಗೋದ ಸೆಕೆಂಡ್ ಸಿಟಿ ಆ್ಯಕ್ಟಿಂಗ್ ಸ್ಕೂಲ್ ಹಾಗೂ ಅನುಪಮ್ ಖೇರ್ ಆ್ಯಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ಪಾಠ ಕಲಿತಿದ್ದಾರೆ. ‘ಅಂಬಿ ನಿಂಗ್‌ ವಯಸ್ಸಾಯ್ತೋ’ ಮತ್ತು ಬಾಲಿವುಡ್‌ನ ‘ಭೈಯಾಜಿ ಸೂಪರ್‌ ಹಿಟ್‌’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ.

ಚಿತ್ರದ ಶೀರ್ಷಿಕೆಯೇ ಧ್ವನಿಸುವಂತೆ ‘ಪದವಿ ಪೂರ್ವ’ಕಾಲೇಜು ದಿನಗಳ ಕಥೆ ಎನ್ನುವುದರಲ್ಲಿ ಅನುಮಾನವಿಲ್ಲ. ಗೆಳೆತನ, ಪ್ರೀತಿ, ಕೌಟುಂಬಿಕ ಸಂಬಂಧಗಳಸುತ್ತವೇ ಇದರ ಕಥೆ ಜೀಕಲಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ‘ಹದಿಹರೆಯದ ಮೋಜು– ಮಸ್ತಿ, ಮೋಹ– ಸ್ನೇಹ, ಕುಟುಂಬ ಕುರಿತಾದ ಕಥಾಹಂದರದ ಚಿತ್ರದಲ್ಲಿ ನನಗೆ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಇದು 90ರ ಮಧ್ಯದದಶಕದಲ್ಲಿ ನಡೆಯುವ ಕಥೆ. ನಾನು ಆಗಿನ್ನೂ ಹುಟ್ಟಿಯೇ ಇರಲಿಲ್ಲ. ಆಗಿನ ಶಾಲಾ– ಕಾಲೇಜು ದಿನಗಳ ಅನುಭವವನ್ನು ನನ್ನ ಸಹೋದರ ಮತ್ತು ಸ್ನೇಹಿತರ ಮೂಲಕ ತಿಳಿದುಕೊಳ್ಳುತ್ತಿರುವೆ. ರವಿಚಂದ್ರನ್‌ ಅವರ ಪ್ರೇಮಲೋಕ ಸಿನಿಮಾವನ್ನು ಇತ್ತೀಚೆಗಷ್ಟೇ ನೋಡಿದೆ’ ಎನ್ನುವ ಮಾತು ಸೇರಿಸಿದರು.

‘ಅಲ್ಲದೆ, 90ರ ಕಾಲಘಟ್ಟದ ಕಥೆಯ ಪಾತ್ರದ ಸಂಭಾಷಣೆಯ ಉಚ್ಛಾರಣೆ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕಾಗಿ ಕನ್ನಡ ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಓದುತ್ತಿರುವೆ. ಈಗಾಗಲೇ ವರ್ಕ್‌ಶಾಪ್‌ ನಡೆಯುತ್ತಿದ್ದು, ಪಾತ್ರಕ್ಕಾಗಿ ತಯಾರಿ ನಡೆಸುತ್ತಿರುವೆ’ ಎಂದು ಮಾತು ವಿಸ್ತರಿಸಿದರು.

ಈ ಚಿತ್ರದಲ್ಲಿನಾಯಕನಾಗಿ ಪೃಥ್ವಿ ಶಾಮನೂರ್ ನಟಿಸುತ್ತಿದ್ದು, ಇವರಿಗೂ ಇದು ಮೊದಲ ಚಿತ್ರ. ಅರ್ಜುನ್ ಜನ್ಯ ‌ಸಂಗೀತವಿದ್ದು, ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿರಲಿದೆ. ಮಲೆನಾಡಿನ ರಮ್ಯತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.

‘ನಾನು ಸುಶಿಕ್ಷಿತ ಕುಟುಂಬದಿಂದ ಬಂದಿದ್ದು, ಅಪ್ಪ, ಅಮ್ಮ ಹಾಗೂ ಅಣ್ಣ ಮೂವರೂ ವಕೀಲರು. ಈ ಚಿತ್ರ ಪೂರ್ಣವಾಗುವಷ್ಟರಲ್ಲಿ ನನ್ನ ಕಾನೂನು ಶಿಕ್ಷಣವು ಪೂರ್ಣವಾಗಲಿದೆ. ನನಗೆ ಎಂತೆಂಥದ್ದೋ ಸಿನಿಮಾ ಮಾಡಲು ಇಷ್ಟವಿಲ್ಲ.ಪಾತ್ರಗಳ ಆಯ್ಕೆಯಲ್ಲಿ ನಾನು ತುಂಬಾ ಚ್ಯೂಸಿ. ಮೊದಲೇ ಹೇಳಿದಂತೆ ಡೆಬ್ಯು ಸಿನಿಮಾಕ್ಕಾಗಿ ಒಳ್ಳೆಯ ಕಥೆ, ಒಳ್ಳೆಯ ನಿರ್ದೇಶಕ ಮತ್ತು ಬ್ಯಾನರ್‌ಗಾಗಿ ಎರಡು ವರ್ಷದಿಂದ ಕಾದಿದ್ದೆ. ಮುಂದೆಯೂ ಅಷ್ಟೇ, ಒಳ್ಳೆಯ ಸ್ಕ್ರಿಪ್ಟ್, ಒಳ್ಳೆಯ ನಿರ್ದೇಶಕರು ಹಾಗೂ ಒಳ್ಳೆಯ ಬ್ಯಾನರ್‌ ಸಿಕ್ಕರೆ ಮಾತ್ರ ಅಂಥ ಸಿನಿಮಾಗಳಲ್ಲಿ ನಟಿಸುವೆ’ ಎನ್ನಲು ಅಂಜಲಿ ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.