ADVERTISEMENT

ಅಣ್ಣಾವ್ರ ನೆನಪುಗಳು.. | ಟೊಕಿಯೊದಲ್ಲಿ ದಾರಿ ತಪ್ಪಿದ ರಾಜ್‌

ಭಗವಾನ್‌
Published 24 ಏಪ್ರಿಲ್ 2020, 8:03 IST
Last Updated 24 ಏಪ್ರಿಲ್ 2020, 8:03 IST
   
"ದೊರೆ ಭಗವಾನ್‌"

ಡಾ. ರಾಜ್‌ ಎಂದಾಕ್ಷಣ ಇಂದಿಗೂ ಅವರು ಟೊಕಿಯೊದಲ್ಲಿ ಕಳೆದುಹೋದ ಪ್ರಸಂಗ ಕಣ್ಮುಂದೆ ಬರುತ್ತದೆ. ಅದು 70ರ ದಶಕದ ಮಾತು. ಅಣ್ಣಾವ್ರ ಕುಟುಂಬದ ಜತೆ ನಾವೊಂದಿಷ್ಟು ಜನ ವರ್ಲ್ಡ್‌ ಟೂರ್‌ ಹೋಗಿದ್ದೆವು. ಪಾರ್ವತಮ್ಮ, ಅಳಿಯ ಗೋವಿಂದರಾಜು ಮತ್ತು ತಮ್ಮ ತಾಯಿಯನ್ನು ರಾಜ್‌ ತಮ್ಮೊಂದಿಗೆ ಕರೆತಂದಿದ್ದರು.

ಸಂಜೆ ಏಳಾಯಿತು ಎಂದರೆ ಸಾಕು ಅಣ್ಣಾವ್ರು ವಾಯು ವಿಹಾರಕ್ಕೆ ಹೊರಡುತ್ತಿದ್ದರು. ಎಲ್ಲೆ ಇದ್ದರೂ ಈಹವ್ಯಾಸ ಮಾತ್ರ ತಪ್ಪಿಸುತ್ತಿರಲಿಲ್ಲ. ಅಂದು ಕೂಡ ಎಂದಿನಂತೆ ಟೊಕಿಯೊದಲ್ಲಿ ಉಳಿದಕೊಂಡಿದ್ದ ಹೋಟೆಲ್‌ನಿಂದವಾಯು ವಿಹಾರಕ್ಕೆ ಹೊರಟಿದ್ದಾರೆ.

ನಾವು ಉಳಿದುಕೊಂಡಿದ್ದ ಹೋಟೆಲ್‌ ಮುಂದಿನ ರಸ್ತೆಯಗುಂಟ ಒಂದು ಸುತ್ತು ಹಾಕಿ ವಾಪಸ್‌ ಬಂದರೆ ಆಯ್ತು ಎಂದು ಹೊರಟ ಅವರು ಅಂಗಡಿಗಳನ್ನು ನೋಡುತ್ತ ಮೈಮರೆತು ಹಾಗೆಯೇ ಹೊರಟು ಹೋಗಿದ್ದಾರೆ. ‘ವಿಂಡೊ ಶಾಪಿಂಗ್‌’ ಅವರ ಮೆಚ್ಚಿನ ಹವ್ಯಾಸವಾಗಿತ್ತು. ಅಂಗಡಿಗಳನ್ನು ಹೊರಗಿನಿಂದ ಬಹಳ ಹೊತ್ತು ನೋಡುತ್ತ ನಿಂತಲ್ಲೇ ನಿಂತು ಬಿಡುತ್ತಿದ್ದರು.

ADVERTISEMENT

ಹಾಗೆಯೇ ಅಂಗಡಿಗಳನ್ನು ನೋಡುತ್ತ ಹೊರಟ ಅವರು ಜನಜಂಗುಳಿಯಲ್ಲಿ ಕಳೆದು ಹೋಗಿದ್ದಾರೆ. ಅರ್ಧ ಗಂಟೆಯಾದ ಮೇಲೆ ಹೋಟೆಲ್‌ಗೆ ಮರಳುವ ದಾರಿ ಮರೆತು ಹೋಗಿದೆ. ಇತ್ತ ಹೋಟೆಲ್‌ನಲ್ಲಿ ಗಂಟೆಯಾದರೂ ರಾಜ್‌ ಸುಳಿವಿಲ್ಲ.ಎಲ್ಲರಲ್ಲೂ ಆತಂಕ ಶುರುವಾಯಿತು. ನಾವೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರಿಂದ ತೊಂದರೆ ಕೊಡುವುದು ಬೇಡ ಎಂದು ಯಾರಿಗೂ ತಿಳಿಸದೆ ಅವರು ವಾಯು ವಿಹಾರಕ್ಕೆ ತೆರಳಿದ್ದರು. ನಾವೆಲ್ಲರೂ ಅವರನ್ನು ಹುಡುಕಲು ಆರಂಭಿಸಿದೆವು. ಹೋಟೆಲ್‌ ಸುತ್ತಮುತ್ತ ವಿಚಾರಿಸಿದೆವು. ಎಲ್ಲಿಯೂ ಅಣ್ಣಾವ್ರ ಸುಳಿವಿಲ್ಲ. ಎಲ್ಲರಿಗೂ ಗಾಬರಿಯಾಗಿತ್ತು.

ನಾವು ಉಳಿದಿದ್ದ ಹೋಟೆಲ್‌ ಹೆಸರು ಕೂಡ ಅಣ್ಣಾವ್ರಿಗೆ ಗೊತ್ತಿರಲಿಲ್ಲ. ಹೋಟೆಲ್‌ ಇದ್ದ ರಸ್ತೆಯೂ ಗೊತ್ತಿರಲಿಲ್ಲ. ಅಲ್ಲಿಯ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ‘ಇದೊಳ್ಳೆ ಪಜೀತಿ ಆಯ್ತುಲ್ಲಪ್ಪ...ಹೇಗೆ ಹೋಟೆಲ್‌ ತಲುಪುವುದು. ಮನೆಯವರು, ಸ್ನೇಹಿತರು ಎಷ್ಟು ಗಾಬರಿಯಾಗಿರುತ್ತಾರೋ ಏನೋ...’ ಎಂದು ರಾಜ್‌ ಹೋಟೆಲ್‌ ಹುಡುಕುತ್ತಿದ್ದರು.

ಬಿಳಿ ಪಂಜೆ ಮತ್ತು ಅಂಗಿಯಲ್ಲಿ ವಾಕ್‌ಗೆ ಹೋಗಿದ್ದ ಅವರ ಬಳಿ ಹಣ ಕೂಡ ಇರಲಿಲ್ಲ. ಕೊನೆಗೆ ಜೇಬು ತಡಕಾಡಿದಾಗ ಹೋಟೆಲ್‌ ವಿಸಿಟಿಂಗ್‌ ಕಾರ್ಡ್‌ ದೊರೆತಿದೆ. ಅದನ್ನು ಜನರಿಗೆ ತೋರಿಸುತ್ತಾ ‘ದಿಸ್‌ ಹೋಟೆಲ್‌ ಪ್ಲೀಸ್‌’ ಎಂದು ಕೇಳುತ್ತಾ ಗಂಟೆಯ ನಂತರ ಹೋಟೆಲ್‌ಗೆ ಬಂದರು.

ದೊರೆ ಭಗವಾನ್‌

ಅವರಿಗಾಗಿ ದಾರಿ ಕಾಯುತ್ತಾ ನಾವೆಲ್ಲ ಹೋಟೆಲ್‌ ಲಾಬಿಯಲ್ಲಿ ಕುಳಿತಿದ್ದೆವು. ಮರಳಿ ಬಂದ ಅವರನ್ನು ಕಂಡ ನಮಗೆಲ್ಲಾ ಹೋದ ಜೀವ ಮರಳಿ ಬಂದಂತಾಯ್ತು. ಅಣ್ಣಾವ್ರ ತಾಯಿ, ಗೋವಿಂದರಾಜು ತುಂಬಾ ಗಾಬರಿಯಾಗಿದ್ದರು. ಪಾರ್ವತಮ್ಮ ಅವರ ಕಣ್ಣಂಚಿನಲ್ಲಿ ನೀರಿತ್ತು. ‘ರೀ ನಿಮ್ಮ ದಮ್ಮಯ್ಯ ಎನ್ನುತ್ತೇನೆ. ನೀವು ಹೀಗೆ ಹೇಳದೆ, ಕೇಳದೆ ಎಲ್ಲಿಗೂ ಹೋಗಬೇಡಿ. ಹೋಗುವುದಾದರೆ ಯಾರನ್ನಾದರೂ ಜತೆಗೆ ಕರೆದುಕೊಂಡು ಹೋಗಿ’ ಎಂದು ಪ್ರೀತಿಯಿಂದ ಗದರಿದರು. ‘ಅಯ್ಯೋ ನನ್ನಿಂದಾಗಿ ನಿಮಗೆಲ್ಲ ಇಷ್ಟೊಂದು ತೊಂದರೆ ಆಯ್ತಲ್ಲಾ. ನನ್ನನ್ನು ಕ್ಷಮಿಸಿ ಬಿಡಿ’ ಎಂದು ಅಣ್ಣಾವ್ರು ಬೇಜಾರು ಮಾಡಿಕೊಂಡರು.

‘ಹಾಳಾದದ್ದು ಆ ದೊಡ್ಡ ಅಂಗಡಿಗಳನ್ನು ನೋಡಿ ಒಂದು ಕ್ಷಣ ಮೈಮರೆತೆ ನೋಡಿ. ಎಲ್ಲಿಗೆ ಹೋದೆ ಎಂದು ಗೊತ್ತೆ ಆಗಲಿಲ್ಲ. ಇಲ್ಲಿ ಯಾರಿಗೂ ನಮ್ಮ ಭಾಷೆ ಬೇರೆ ಗೊತ್ತಿಲ್ಲ. ಅವರ ಭಾಷೆ ನಮಗೆ ಗೊತ್ತಿಲ್ಲ. ತುಂಬಾ ಪಜೀತಿ ಆಯ್ತು’ ಎಂದು ರಾಜ್ ತಮ್ಮ ಎಂದಿನ ಶೈಲಿಯಲ್ಲಿ ಜೋಕ್‌ ಮಾಡಿದಾಗ, ನಾವು ನಕ್ಕು ನಿರಾಳರಾದೆವು.

(ನಿರೂಪಣೆ: ಗವಿ ಬ್ಯಾಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.