ADVERTISEMENT

ಕ್ಲಬ್‌ ಹೌಸ್‌ನಲ್ಲಿ ಕೂತ ‘ಫಿಲ್ಮಿ’ ಮಂದಿ...

ಪದ್ಮನಾಭ ಭಟ್ಟ‌
Published 17 ಜೂನ್ 2021, 19:30 IST
Last Updated 17 ಜೂನ್ 2021, 19:30 IST
ಸಂಯುಕ್ತಾ ಹೊರನಾಡು
ಸಂಯುಕ್ತಾ ಹೊರನಾಡು   

‘ಕ್ಲಬ್‌ಹೌಸ್‌’ ಮಾತುಕತೆಯನ್ನೇ ಆಧರಿಸಿದ ಹೊಸ ಸಾಮಾಜಿಕ ಜಾಲತಾಣ. ಇತ್ತೀಚೆಗೆ ಟ್ರೆಂಡ್ ಅನಿಸುವಷ್ಟು ಜನಪ್ರಿಯವಾಗುತ್ತಿರುವ ಈ ವೇದಿಕೆ ಸಿನಿಮಾ ಕುರಿತ ಆರೋಗ್ಯಕರ ಚರ್ಚೆಗೂ ವೇದಿಕೆ ಕಲ್ಪಿಸುತ್ತಿರುವುದು ಕುತೂಹಲಕಾರಿ ವಿದ್ಯಮಾನ.

ಕಳೆದೊಂದು ವಾರದಿಂದ ಸೋಶಿಯಲ್‌ ಮೀಡಿಯಾಗಳಲ್ಲಿ ಕ್ಲಬ್‌ಹೌಸ್‌ನದ್ದೇ ಹವಾ. ಫೇಸ್‌ಬುಕ್‌ನ ಗದ್ದಲ, ಇನ್‌ಸ್ಟಾಗ್ರಾಮ್‌ನ ಚಿತ್ರಜಾತ್ರೆ, ಟ್ವಿಟರ್‌ನ ಸೆಲೆಬ್ರಿಟಿ ಸಮರಗಳಿಂದ ಹೊರತಾದ ಸೋಶಿಯಲ್‌ ಮೀಡಿಯಾ ಕ್ಲಬ್‌ ಹೌಸ್‌. ಇಲ್ಲಿ ನಿಮ್ಮ ಶಾರೀರವೇ ಶರೀರ. ಮಾತಿಗೇ ಮೀಸಲಾದ ವೇದಿಕೆಯಿದು. ಕಮೆಂಟ್‌ಗಳ ಗೊಡವೆಯಿಲ್ಲದೆ, ಲೈಕುಗಳ ಹಂಗಿಲ್ಲದೆ ಒಂದಿಷ್ಟು ಜನರು ಒಂದು ಜಾಗದಲ್ಲಿ ಕೂತು ಹರಟೆ ಹೊಡೆಯಬಹುದಾದ ವೇದಿಕೆಯನ್ನು ಕ್ಲಬ್‌ಹೌಸ್‌ ನಿರ್ಮಾಣಮಾಡಿದೆ.

ಕ್ಲಬ್‌ ಹೌಸ್‌ ಕನ್ನಡದಲ್ಲಿ ಜನಪ್ರಿಯವಾಗುವ ಹಂತದಲ್ಲಿ ಬೇರೆ ಯಾವ ಸಾಮಾಜಿಕ ಮಾಧ್ಯಮಗಳಿಗೂ ಇಲ್ಲದ ಒಂದು ವಿಶೇಷ ಗುಣ ಇಲ್ಲಿ ಎದ್ದು ಕಾಣುತ್ತಿದೆ. ಅದು ಸಿನಿಮಾ ಮಂದಿಯ ಚರ್ಚೆ. ಸೋಶಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳು ತಮ್ಮ ಸಿನಿಮಾಗಳ ಬಗ್ಗೆ ಪ್ರಚಾರ ಮಾಡುವುದು, ತಮ್ಮ ದಿನಚರಿಯ ವಿವರಗಳನ್ನು ಹಂಚಿಕೊಳ್ಳುವುದು, ಅಭಿಮಾನಿಗಳೊಂದಿಗೆ ಲೈವ್‌ನಲ್ಲಿ ಮಾತಾಡುವುದು ಎಲ್ಲವೂ ಹೊಸತೇನಲ್ಲ. ಹಾಗೆಯೇ ಪ್ರೇಕ್ಷಕರೂ ತಾವು ನೋಡಿದ ಸಿನಿಮಾಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಲೇ ಇರುವುದನ್ನು ನೋಡುತ್ತೇವೆ.

ADVERTISEMENT

ಕ್ಲಬ್‌ಹೌಸ್‌ನಲ್ಲಿ ನಡೆಯುತ್ತಿರುವ ಸಿನಿಮಾ ಚರ್ಚೆ ಇವೆಲ್ಲಕ್ಕಿಂತ ಕೊಂಚ ಭಿನ್ನವಾದದ್ದು. ಇಲ್ಲಿ ಸಿನಿಮಾ ಮೇಕರ್‌ಗಳು ತಮ್ಮ ಸಿನಿಮಾ ಕುರಿತಾಗಿಯಷ್ಟೇ ಅಲ್ಲ, ಒಟ್ಟಾರೆ ಸಿನಿಮಾ ತಯಾರಿಕೆಯ ಬಗ್ಗೆ, ಅದರ ತಾಂತ್ರಿಕ, ಸೃಜನಶೀಲ ವಿಭಾಗಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಸಿನಿಮಾ ವಿಮರ್ಶಕರು, ನೋಡುಗರೂ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ಇದು ಹೊಸತಾಗಿ ಸಿನಿಮಾ ಮಾಧ್ಯಮವನ್ನು ಕಲಿಯುತ್ತಿರುವವರಿಗೆ ಪಾಠಶಾಲೆಯಾಗಿಯೂ, ಈಗಾಗಲೇ ಸಿನಿಮಾ ಮಾಧ್ಯಮದಲ್ಲಿ ಒಂದಿಷ್ಟು ಕೆಲಸ ಮಾಡಿರುವವರಿಗೆ ಅನುಭವ ಹಂಚಿಕೊಳ್ಳುವ, ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಕಾರ್ಯಾಗಾರವಾಗಿಯೂ ಕೆಲಸ ನಿರ್ವಹಿಸುತ್ತಿರುವುದು ವಿಶೇಷ.

ಕನ್ನಡ ಚಿತ್ರರಂಗದಲ್ಲಿ ಕ್ಲಬ್‌ ಹೌಸ್‌ ಬಗ್ಗೆ ಮೊದಲು ಮಾತಾಡಲು ಶುರುಮಾಡಿದ್ದು, ಅದರ ಸಾಧ್ಯತೆಗಳನ್ನು ಅಂದಾಜಿಸಿಕೊಂಡು ಸಕ್ರಿಯವಾಗಿದ್ದು ನಿರ್ದೇಶಕ ಪವನ್‌ಕುಮಾರ್. ತಮ್ಮ ಟ್ಟಿಟರ್ ಖಾತೆಯಲ್ಲಿ ಅವರು ಕ್ಲಬ್‌ಹೌಸ್‌ನಲ್ಲಿ ಸಿನಿಮಾ ಬಗ್ಗೆ ಆರೋಗ್ಯಕರ ಚರ್ಚೆ ಮಾಡೋಣ ಬನ್ನಿ ಎಂದು ಆಹ್ವಾನಿಸಿದ್ದರು.

ಈಗ ಕ್ಲಬ್‌ಹೌಸ್‌ನಲ್ಲಿ ಕನ್ನಡ ಸಿನಿಮಾ ಚರ್ಚೆಗೇ ಮೀಸಲಾಗಿರುವ ಹಲವು ‘ರೂಮ್‌’ಗಳಿವೆ. ಸಿನಿಮಾ ಬರವಣಿಗೆ, ಧ್ವನಿ ವಿನ್ಯಾಸ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಮಾರುಕಟ್ಟೆ, ಇಂಡಿಪೆಂಡೆಂಟ್ ಸಿನಿಮಾಗಳ ಸವಾಲುಗಳು ಈ ರೀತಿಯ ಸಿನಿಮಾ ತಯಾರಿಕೆಗೆ ಸಂಬಂಧಿಸಿದ ಚರ್ಚೆಗಳು ಒಂದೆಡೆ ನಡೆಯುತ್ತಿವೆ. ಹಾಗೆಯೇ, ‘ಇತ್ತೀಚೆಗೆ ನೋಡಿದ ಅತ್ಯುತ್ತಮ ಚಿತ್ರ’, ‘ಇತ್ತೀಚೆಗೆ ನೋಡಿದ ಅತ್ಯಂತ ಕೆಟ್ಟ ಸಿನಿಮಾ’, ಒಟಿಟಿಯಲ್ಲಿ ನೋಡಿದ ಒಳ್ಳೆಯ ಸಿನಿಮಾ, ರಾಜ್‌ಕುಮಾರ್ ಅವರು ನಟಿಸಿದ ನಿಮ್ಮ ನೆಚ್ಚಿನ ಚಿತ್ರ ಹೀಗೆ ಹತ್ತು ಹಲವು ಬಗೆಯ ಚರ್ಚೆಗಳೂ ನಡೆಯುತ್ತಿವೆ. ಹೀಗಾಗಿ ಕ್ಲಬ್‌ ಹೌಸ್ ಒಂದು ಬಗೆಯಲ್ಲಿ ಸಿನಿಮಾ ಹಬ್ ಆಗಿ ರೂಪುಗೊಂಡಿರುವುದು ನಿಜ.

ಪವನ್‌ ಕುಮಾರ್, ಶ್ರುತಿ ಹರಿಹರನ್, ಅಭಯ ಸಿಂಹ, ಯೋಗರಾಜ್‌ ಭಟ್, ಮಾನ್ವಿತಾ ಕಾಮತ್, ಸಂಯುಕ್ತಾ ಹೊರನಾಡು, ಬಿ. ಸುರೇಶ್‌, ವಸಿಷ್ಠ ಸಿಂಹ ಸೇರಿದಂತೆ ಹಲವು ಹಿರಿ–ಕಿರಿಯ ನಿರ್ದೇಶಕರು, ನಟರು, ತಂತ್ರಜ್ಞರು ಈ ವೇದಿಕೆಯಲ್ಲಿದ್ದಾರೆ.

ಕನ್ನಡದ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುವುದಷ್ಟೇ ಅಲ್ಲದೆ ಮಲಯಾಳಂ, ತಮಿಳು, ತೆಲುಗು, ಇಂಗ್ಲಿಷ್‌ ಭಾಷೆಯ ಸಿನಿಮಾಗಳ ಚರ್ಚೆಗಳೂ ಇಲ್ಲಿ ನಡೆಯುತ್ತಿರುವುದರಿಂದ ಜಗತ್ತಿನ ಬೇರೆ ಭಾಷೆಗಳ ಚಿತ್ರರಂಗದ ಕುರಿತೂ ತಿಳಿದುಕೊಳ್ಳಲು ಇದು ವೇದಿಕೆ ಕಲ್ಪಿಸುತ್ತಿದೆ. ಈ ಸಿನಿಮಾ ಜಾತ್ರೆಯಲ್ಲಿ ನೂರಾರು ಅಂಗಡಿಗಳಿವೆ. ನಿಮಗೆ ಇಷ್ಟವಾದ, ನಿಮ್ಮ ಅಭಿರುಚಿಗೆ ಹೊಂದುವ ಅಂಗಡಿಗೆ ಹೋಗಿ ನೀವು ಚರ್ಚೆಯನ್ನು ಕೇಳಬಹುದು, ಭಾಗವಹಿಸಬಹುದು.

ಎಲ್ಲ ಸಾಮಾಜಿಕ ಜಾಲತಾಣಗಳೂ ಆರಂಭದ ಹಂತದಲ್ಲಿ ಆರೋಗ್ಯಕರವಾಗಿಯೂ ಹೊಸ ಸಂವೇದನೆಗಳಿಗೆ, ಬದಲಾವಣೆಗಳಿಗೆ ವೇದಿಕೆಯಾಗಿಯೇ ತೋರುತ್ತಿರುತ್ತವೆ. ಆದರೆ ಕಾಲಕ್ರಮೇಣ ಅವು ತಮ್ಮ ಹೂಮೊಗವಾಡವನ್ನು ಕಳಚಿ ಇರಿಯುವ ಮುಳ್ಳುಗಳನ್ನು ಹೊರಕಾಣಿಸತೊಡಗುವುದನ್ನು ನಾವು ನೋಡಿದ್ದೇವೆ. ಕ್ಲಬ್‌ಹೌಸ್‌ ಕೂಡ ಇದೇ ರೀತಿ ಬದಲಾದರೆ ಅಚ್ಚರಿಯೇನಿಲ್ಲ. ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಮಾತ್ರ ಕ್ಲಬ್‌ ಹೌಸ್‌ ಸಮಾನಮನಸ್ಕರ ವಿಚಾರ ಹಂಚಿಕೆ ವೇದಿಕೆಯಾಗಿ, ಹೊಸ ಪ್ರೇಕ್ಷಕವರ್ಗಕ್ಕೆ ಅಭಿರುಚಿಯನ್ನು ಬೆಳೆಸುವ ವಾಹಕವಾಗಿ ರೂಪುಗೊಳ್ಳುವ ಸಾಧ್ಯತೆಯನ್ನು ಕಾಣಿಸುತ್ತಿದೆ. ಮುಂದೆ ಇದೇ ಸಾಧ್ಯತೆಗಳು ವಿಸ್ತಾರವಾದರೆ ಖಂಡಿತವಾಗಿಯೂ ಚಿತ್ರರಂಗದ ಹೊಸ ಸಂವೇದನೆಯನ್ನು ರೂಪಿಸುವಲ್ಲಿ ಕ್ಲಬ್‌ಹೌಸ್‌ ಮುಖ್ಯಪಾತ್ರ ವಹಿಸುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಯಾವುದೇ ಮಾಧ್ಯಮದ ಭವಿಷ್ಯ ನಿಂತಿರುವುದು ಅದರ ಬಳಕೆದಾರರ ವರ್ತಮಾನದ ನಡವಳಿಕೆಯ ಮೇಲೆಯೇ ಅಲ್ಲವೇ?

**

ಕಾದು ಬೈಸಿಕೊಳ್ಳೋಣ!
ಕ್ಲಬ್‌ಹೌಸ್ ಮಜಾ ಇದೆ. ಹಳೇ ಕಾಲದ ‘ಸಂವಾದ ಕಾರ್ಯಕ್ರಮ’ ಇದ್ದ ಹಾಗೆ ಇರ್ತದೆ. ಒಂಥರಾ ಸಮಕಾಲೀನ, ಸಭ್ಯ, ‘ಆನ್ಲೈನ್‌ ಗುಂಪು ಗಲಭೆ’.

ಸಭೆ ಸಮಾರಂಭ ಇರಲ್ಲ, ವೇದಿಕೆ, ಮೈಕ್, ಅಹುಜಾ ಲೌಡ್‌ ಸ್ಪೀಕರ್, ಕುರ್ಚಿ, ಹಾರ ತುರಾಯಿ, ಗಂಧದ ಹಾರ, ಹಣ್ಣಿನ ಬುಟ್ಟಿ ಇತ್ಯಾದಿ ಇರಲ್ಲ. ಸಭಿಕರೂ ಕಾಣಿಸಲ್ಲ. ಯಾರೋ ಮಾತಾಡುವಾಗ ಕೇಳುಗರು ಇದಾರಾ ಓಡಿ ಹೋದ್ರಾ ಗೊತ್ತಾಗಲ್ಲ. ‘ಹೂಂ’ಅನ್ನುವ ವ್ಯಕ್ತಿ ಕಾಣಿಸಲ್ಲ. ಈ ಡಿಜಿಟಲ್ ವಿಪರ್ಯಾಸ, ಲೋಕದ ಜೊತೆ ಡೈರೆಕ್ಟ್ ಆಗಿ ಸಂವಾದಿಸಲು ಅವಕಾಶ ಕಲ್ಪಿಸಿದೆ.

ಇದು ದುರುಪಯೋಗ ಆಗುವ ಸಾಧ್ಯತೆಗಳೇನೂ ಕಮ್ಮಿಯಿಲ್ಲ. ಸಮಯ ಹಾಳು ಮಾಡುವ ಹೊಸ ಮಾರ್ಗವೊಂದು ಇದೀಗ ಓಪನ್ ಆಗಿದೆ. ಒಂದು ವರ್ಷದಲ್ಲಿ ಬಾಯಿ ನೋವು, ಕಿವಿ ನೋವು ಬರಿಸಿಕೊಳ್ಳುವ ಮಂದಿ ತಯಾರಾಗಿದ್ದಾರೆ. ಇದೆಲ್ಲ ಬೆಳವಣಿಗೆಗೆ ಯಾವ ರೀತಿ ಬೈಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಉಗಿಬೇಕು ಎಂದು ಹಿರಿಯರಿಗೆ ತಕ್ಷಣ ಗೊತ್ತಾಗುವುದಿಲ್ಲ. ಕಾದು ಬೈಸಿಕೊಳ್ಳೋಣ.

–ಯೋಗರಾಜ್‌ ಭಟ್, ನಿರ್ದೇಶಕ

**

ಮೂರು ಮುಖಗಳು
ಕ್ಲಬ್ ಹೌಸ್ ಹೊಸ ಅರಳೀಕಟ್ಟೆ ಅಥವಾ ಸೋಮಾರಿ ಕಟ್ಟೆ ಅಥವಾ ಹರಟೆ ಜಗುಲಿ... ಹೀಗೆ ಮೂರು ಹೆಸರುಗಳ ಮೂಲಕ ಗಮನಿಸಿದಾಗಲೇ ಇಂತಹ ಒಂದು ಹೊಸ ಮಾಧ್ಯಮದ ಗುಣ ಅವಗುಣಗಳ ಸ್ಪಷ್ಟ ಅರಿವು ಮೂಡುತ್ತದೆ. ಕ್ಲಬ್‌ಹೌಸ್ ಕೇವಲ ಶ್ರವ್ಯ ವೇದಿಕೆ. ಆಡುವ ಮಾತುಗಳನ್ನು ಕೇಳುವ ಅವಕಾಶ. ಹೀಗೆ ಆಡಿದ ಮಾತು ಮನಸ್ಸನ್ನು ಅರಳಿಸಿದರೆ, ಬೆಳೆಸಿದರೆ ಆಗ ಅದನ್ನು ಅರಳೀಕಟ್ಟೆ ಅನ್ನಬಹುದು.

ಕೇವಲ ಹೊತ್ತು ಕಳೆಯುವ (ಟೈಂಪಾಸ್) ಮಾತಾದರೆ ಅದನ್ನು ಸೋಮಾರಿ ಕಟ್ಟೆ ಅನ್ನಬಹುದು. ವಿಶೇಷ ವಿಷಯ ಇಲ್ಲದೆ ಕೇವಲ ಕಾಲಹರಣ ಎಂಬಂತೆ ಮಾತುಗಳು ನಡೆದಾಗ ಹರಟೆ ಕಟ್ಟೆ ಅನ್ನಬಹುದು. ಈ ನಿರ್ವಚನವೇ ಇಂತಹ ಹೊಸ ವೇದಿಕೆಯ ವಿಶ್ವರೂಪ ದರ್ಶನ ಮಾಡಿಸೀತು.

ಸದ್ಯಕ್ಕಂತೂ, ಅದು ಈ ಕೊರೊನಾ ಕಾಲದಲ್ಲಿ ಲಾಕ್‌ಡೌನ್ ಕಾರಣಕ್ಕೆ ಬಂದಿಗಳಾಗಿರುವ ಜನರಿಗೆ ಇದು ಮಾತಿನ ತಾಣವಾಗಿ ಉಪಯುಕ್ತ ಆಗಿದೆ. ಮುಂಬರುವ ಕಾಲದಲ್ಲಿ ಇದೇ ವೇದಿಕೆ ಮತ್ತಷ್ಟು ಸ್ಪಷ್ಟ ಆಕಾರ ಪಡೆದುಕೊಂಡೀತು. ಆಗ ಈ ವೇದಿಕೆ ಅಪರೂಪದ ಹಾಗೂ ಸಾರ್ಥಕ ಕೆಲಸಗಳಿಗೆ ಬಳಕೆಯಾದೀತು ಎನಿಸುತ್ತದೆ. ಹಾಗೆನ್ನುವಾಗ, ಈಗ ಆ ವೇದಿಕೆ ಅನುಪಯುಕ್ತ ಎಂದು ಅರ್ಥೈಸಬೇಕಿಲ್ಲ. ಈಗಲೂ ಹಲವು ಮಾತುಗಳ ನಡುವೆ ಅಪರೂಪದ ಅನುಭವ ದಾಟಿಸುವ, ಮುತ್ತಿನಂತಹ ವಿವರಗಳು ಸಿಗುತ್ತವೆ. ಅದು ಮುಂಬರುವ ಕಾಲದಲ್ಲಿ ಮತ್ತಷ್ಟು ಹೆಚ್ಚಾಗಲಿ ಎಂಬ ಹಾರೈಕೆ ನನ್ನದು.

- ಬಿ.ಸುರೇಶ, ರಂಗಕರ್ಮಿ/ಚಲನಚಿತ್ರ ನಿರ್ಮಾಪಕ, ನಿರ್ದೇಶಕ

**
ಹೊಸ ಪ್ರೇಕ್ಷಕರನ್ನು ಬೆಳೆಸುವ ಅವಕಾಶ
ಕ್ಲಬ್‌ ಹೌಸ್‌ನಲ್ಲಿ ಕನ್ನಡ ಸಿನಿಮಾ ಬಗ್ಗೆ ತುಂಬ ಚರ್ಚೆ ನಡೆಯುತ್ತಿದೆ. ಒಟಿಟಿ ಪ್ಲಾಟ್‌ಫಾರಂ ಬಗ್ಗೆ, ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಯಾಕೆ ಇನ್ನೂ ವೆಬ್‌ ಸಿರೀಸ್‌ಗಳು ಅಷ್ಟೊಂದು ಜನಪ್ರಿಯ ಆಗಿಲ್ಲ ಎನ್ನುವುದರ ಬಗ್ಗೆಯೆಲ್ಲ ಒಳ್ಳೆಯ ಚರ್ಚೆ ನಡೆಯುತ್ತಿದೆ. ‘ಚಂದನವನ’ ಎನ್ನುವ ಒಂದು ಗುಂಪಿನವರು ಪ್ರತಿದಿನ ಸಿನಿಮಾ ಬಗ್ಗೆ ಚರ್ಚೆ ಏರ್ಪಡಿಸುತ್ತಿದ್ದಾರೆ. ಇದರಿಂದ ಕನ್ನಡ ಪ್ರೇಕ್ಷಕರನ್ನು ಬೆಳೆಸಬಹುದು. ಇದು ತುಂಬ ಮುಖ್ಯ. ಯಾಕೆಂದರೆ ಮಲಯಾಳಂ, ತಮಿಳು ಚಿತ್ರರಂಗಕ್ಕೆ ಸಂಬಂಧಿಸಿದ ಕ್ಲಬ್‌ಗಳು ತುಂಬ ಸಕ್ರಿಯರಾಗಿದ್ದಾರೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅಷ್ಟೊಂದು ಇಲ್ಲ. ಈ ವೇದಿಕೆಯ ಮೂಲಕ ಜನರಿಗೆ ನಾವು ಕನ್ನಡ ಸಿನಿಮಾಗಳ ಕುರಿತು ನಂಬಿಕೆಯನ್ನು ಬೆಳೆಸುತ್ತಿದ್ದೇವೆ. ಹಾಗಾಗಿಯೇ ನಾನು ಕ್ಲಬ್‌ಹೌಸ್‌ನಲ್ಲಿ ಸಿನಿಮಾ ಕುರಿತ ಚರ್ಚೆ, ನಿಧಿ ಸಂಗ್ರಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ತುಂಬ ಜನ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞರು, ವಿತರಕರು ಎಲ್ಲರೂ ಕ್ಲಬ್‌ಹೌಸ್‌ನಲ್ಲಿದ್ದಾರೆ. ಇದೇ ರೀತಿ ಪ್ರಯತ್ನ ಮುಂದುವರಿಸಿದರೆ ಖಂಡಿತ ಚಿತ್ರರಂಗಕ್ಕೆ ಒಳಿತಾಗುತ್ತದೆ.

–ಸಂಯುಕ್ತಾ ಹೊರನಾಡು, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.