ADVERTISEMENT

ಶಿವರಾಜ್‌ಕುಮಾರ್‌ ಅಭಿನಯದ ಆಯುಷ್ಮಾನ್‍ಭವ ಕಥನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 8:55 IST
Last Updated 25 ಅಕ್ಟೋಬರ್ 2019, 8:55 IST
‘ಆಯುಷ್ಮಾನ್‌ಭವ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಮತ್ತು ರಚಿತಾ ರಾಮ್
‘ಆಯುಷ್ಮಾನ್‌ಭವ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಮತ್ತು ರಚಿತಾ ರಾಮ್   

ಅದು ‘ಆಯುಷ್ಮಾನ್‌ಭವ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ. ವೇದಿಕೆ ಮೇಲೆ ಸ್ಟಾರ್‌ ನಟರೇ ತುಂಬಿದ್ದರು. ಕೈಯಲ್ಲಿ ಮೈಕ್‌ ಕೈಗೆತ್ತಿಕೊಂಡ ಹಿರಿಯ ನಟ ದ್ವಾರಕೀಶ್‌, ‘ಶಿವಣ್ಣ ಲಕ್ಕಿ ಸ್ಟಾರ್. ಅವರ ಡೇಟ್ಸ್‌ಗಾಗಿ ಇಪ್ಪತ್ತು ವರ್ಷ ಕಾಯಬೇಕಾಯಿತು. ಇನ್ನು ಮುಂದೆ ನಮ್ಮದು ಅದೃಷ್ಟ’ ಎಂದು ಕುತೂಹಲದ ಬೀಜ ಬಿತ್ತಿದರು.

ದ್ವಾರಕೀಶ್‌ ಚಿತ್ರಾಲಯ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ‘ಆಯುಷ್ಮಾನ್‌ಭವ’ ಸಿನಿಮಾ ನವೆಂಬರ್‌ ಒಂದರಂದು ಬಿಡುಗಡೆಯಾಗುತ್ತಿದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಪಿ. ವಾಸು.‘ದ್ವಾರಕೀಶ್‌ ಸಂಸ್ಥೆಗೆ ಐವತ್ತು ವರ್ಷ ಸಂದಿವೆ. ಸಂಸ್ಥೆ ನಿರ್ಮಿಸುತ್ತಿರುವ 52ನೇ ಚಿತ್ರದ ನಿರ್ದೇಶನ ಮಾಡುತ್ತಿರುವುದು ನನ್ನ ಪುಣ್ಯ. ಸಿನಿಮಾವೇ ಅವರ ಫ್ಯಾಷನ್‍ ಆಗಿದೆ’ ಎಂದರು ನಿರ್ದೇಶಕ ವಾಸು.

ನಾಯಕ ನಟ ಶಿವರಾಜ್‌ಕುಮಾರ್‌, ‘ನಾನು ಅದೃಷ್ಟ ನಟ ಎಂದು ಎಲ್ಲರೂ ಹೇಳುತ್ತಾರೆ. ಉಪೇಂದ್ರ ಮತ್ತು ವಾಸು ಅವರ ಸಿನಿಮಾದಲ್ಲಿ ನಟಿಸಿದ್ದು ನನಗೆ ಒಲಿದ ಅದೃಷ್ಟ. ದ್ವಾರಕೀಶ್‌ ಸಂಸ್ಥೆಯಲ್ಲಿ ಅಭಿನಯಿಸುತ್ತಿರುವುದು ನನ್ನ ಸೌಭಾಗ್ಯ’ ಎಂದ ಅವರು, ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.

ADVERTISEMENT

ಹಿರಿಯ ನಟ ಅನಂತ್‍ನಾಗ್, ‘ಸಿನಿಮಾದ ಶೀರ್ಷಿಕೆಯಲ್ಲಿಯೇ ಚಿತ್ರತಂಡಕ್ಕೆ ಆಶೀರ್ವಾದ ಸಿಕ್ಕಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು.

ನಟ ರವಿಚಂದ್ರನ್, ‘ಬಹಳಷ್ಟು ಜನರು ಚಿತ್ರರಂಗಕ್ಕೆ ಬರಲು ಸ್ಪಿರಿಟ್ ಹೊಡೆಯುತ್ತಾರೆ. ಕೆಲವರಿಗೆ ಸಿನಿಮಾನೇ ಸ್ಪಿರಿಟ್. ಆ ಪೈಕಿ ದ್ವಾರಕೀಶ್‌ ಕೂಡ ಒಬ್ಬರು. ಕರ್ನಾಟಕದ ಭೂಪಟದಲ್ಲಿ ಈ ಮೂತಿ ತೋರಿಸಿ, ಜನರಿಗೆ ಇಲ್ಲಿಯವರೆಗೆ ಘರ್ಜನೆ ತೋರಿಸುತ್ತಲೇ ಇದ್ದಾರೆ. ನನ್ನ ಸಾಧನೆಗೂ ಅವರೇ ಸ್ಫೂರ್ತಿ’ ಎಂದು ಮೆಚ್ಚುಗೆ ಸೂಚಿಸಿದರು.

‘ಹದಿನೆಂಟು ಸಿನಿಮಾಗಳು ನೆಲ ಕಚ್ಚಿದರೂ ಹಿಂದಕ್ಕೆ ಹೋಗದೆ ದೇವರ ಮುಂದೆಯೇ ಚಾಲೆಂಜ್ ಮಾಡಿದರು. ‘ಆಪ್ತಮಿತ್ರ’ ಚಿತ್ರದ ಮೂಲಕ ಗೆದ್ದು ಬೀಗಿದರು. ಶಿವರಾಜ್‍ಕುಮಾರ್‌ಗೆ ವಯಸ್ಸೇ ಆಗುವುದಿಲ್ಲ. ನಾವಿಬ್ಬರು ಜೊತೆಗೆ ಹುಟ್ಟಿಲ್ಲ. ಹೆಚ್ಚಾಗಿ ಸ್ನೇಹಿತರಾಗಿಯೂ ಇರುವುದಿಲ್ಲ. ಆದರೂ, ಇಬ್ಬರ ನಡುವೆ ಗಾಢವಾದ ಸ್ನೇಹವಿದೆ. ಅವರ ನೋವು, ಸುಖದಲ್ಲಿ ಭಾಗಿಯಾಗಿದ್ದೇನೆ. ಪಿ. ವಾಸು ಮೊದಲು ನಟ; ನಂತರ ಅವರು ನಿರ್ದೇಶಕ. ಅವರು ನಟಿಸಿ, ತೋರಿಸಿದ್ದನ್ನು ಕಲಾವಿದರು ಮಾಡಿದರೆ ಸಿನಿಮಾ ಅರ್ಧ ಗೆದ್ದಂತೆ’ ಎಂದು ಗೆಲುವಿನ ಸೂತ್ರ ತೆರೆದಿಟ್ಟರು.

ನಟ ಉಪೇಂದ್ರ ಚಿತ್ರತಂಡಕ್ಕೆ ಶುಭ ಕೋರಿದರು. ರಚಿತಾ ರಾಮ್‌ ಈ ಚಿತ್ರದ ನಾಯಕಿ. ನಿಧಿ ಸುಬ್ಬಯ್ಯ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಗುರುಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ‍ಪಿ.ಕೆ.ಎಚ್. ದಾಸ್‌ ಅವರದು. ಯೋಗೀಶ್‍ ದ್ವಾರಕೀಶ್ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.