ADVERTISEMENT

ಬೆಂಗಳೂರು ಚಲನಚಿತ್ರೋತ್ಸವ: ಫೆಬ್ರುವರಿಯಲ್ಲಿ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 13:21 IST
Last Updated 17 ಡಿಸೆಂಬರ್ 2021, 13:21 IST
   

ಬೆಂಗಳೂರು: ಬೆಂಗಳೂರು 13ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಈ ಚಿತ್ರೋತ್ಸವ ನಡೆಯುತ್ತಿದೆ. ಈ ವರ್ಷವೇ ಚಿತ್ರೋತ್ಸವ ನಡೆಸಲು ಸಿದ್ಧತೆ ನಡೆದಿತ್ತಾದರೂ ಕೋವಿಡ್‌ ಕಾರಣದಿಂದಾಗಿ ಚಿತ್ರೋತ್ಸವ ಮುಂದಕ್ಕೆ ಹೋಗಿತ್ತು.

ಹೊಸ ವೇಳಾಪಟ್ಟಿಯಂತೆ ಚಲನಚಿತ್ರೋತ್ಸವದ ಸಿದ್ಧತೆಗಳು ಆರಂಭವಾಗಿದೆ. ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಚಲನಚಿತ್ರಗಳನ್ನು (ಫೀಚರ್‌ಫಿಲ್ಮ್‌) ಆಹ್ವಾನಿಸಲಾಗಿದೆ. ಏಷ್ಯಾದ ಎಲ್ಲ ಭಾಷೆ, ಉಪಭಾಷೆಗಳ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲು ಅವಕಾಶವಿದೆ. ವಿಜೇತ ಚಿತ್ರಗಳಿಗೆ ನಗದು ಬಹುಮಾನ, ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.

ADVERTISEMENT

ಅರ್ಹತೆ: ಚಿತ್ರಗಳು 2021ರ ಜ. 1ರಿಂದ ಇದೇ ವರ್ಷ ನ. 30ರ ಒಳಗೆ ನಿರ್ಮಾಣಗೊಂಡಿರಬೇಕು ಮತ್ತು 70 ನಿಮಿಷ ಅವಧಿಯದ್ದಾಗಿರಬೇಕು. ನಿರ್ಮಾಣ ದಿನಾಂಕವನ್ನು ಚಲನ ಚಿತ್ರ ಪ್ರಮಾಣೀಕರಣ ಮಂಡಳಿಯ ಪ್ರಮಾಣ ಪತ್ರದ ಆಧಾರದಲ್ಲಿ ಪರಿಗಣಿಸಲಾಗುತ್ತದೆ. ಡಿ. 27ರ ಒಳಗೆ ಚಿತ್ರಗಳನ್ನು ಸ್ಪರ್ಧಾ ವಿಭಾಗಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ Biffes.orgಗೆ ಭೇಟಿ ನೀಡಬಹುದು.

ಬೆಂಗಳೂರಿನ 4 ಕಡೆಗಳಲ್ಲಿ 14 ತೆರೆಗಳಲ್ಲಿ 200ರಷ್ಟು ಚಿತ್ರಗಳು ಪ್ರದರ್ಶನ ಕಾಣಲಿವೆ. ವಿವಿಧ ಚಿತ್ರಗಳ 400ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ ಎಂದು ಚಿತ್ರೋತ್ಸವದ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.