ADVERTISEMENT

ಲಾಸ್‌ ಏಂಜಲಿಸ್‌ ಚಿತ್ರೋತ್ಸವಕ್ಕೆ ‘ತಾಯಿ ಕಸ್ತೂರ್‌ ಗಾಂಧಿ’ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 8:52 IST
Last Updated 9 ಫೆಬ್ರುವರಿ 2022, 8:52 IST
ಗಾಂಧೀಜಿ ಪಾತ್ರದಲ್ಲಿ ನಟ ಕಿಶೋರ್‌
ಗಾಂಧೀಜಿ ಪಾತ್ರದಲ್ಲಿ ನಟ ಕಿಶೋರ್‌   

ಬೆಂಗಳೂರು: ಕಸ್ತೂರ್‌ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರವು ಲಾಸ್‌ ಏಂಜಲಿಸ್‌ ಸನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.

ಕಸ್ತೂರ್‌ ಬಾ ಪಾತ್ರದಲ್ಲಿ ನಟಿ ಹರಿಪ್ರಿಯಾ

ಬರಗೂರು ಅವರೇ ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರೆದ ‘ಕಸ್ತೂರ್ ಬಾ Vs ಗಾಂಧಿ’ ಕಾದಂಬರಿಯನ್ನು ಆಧರಿಸಿದ ಈ ಚಿತ್ರವು ಇತ್ತೀಚೆಗೆ ಸೆನ್ಸಾರ್‌ ಆಗಿದೆ. ‘ಗಾಂಧೀಜಿ ಕುರಿತು ಸಿನಿಮಾಗಳು ಬಂದಿದ್ದರೂ ಭಾರತದಲ್ಲಿ ಕಸ್ತೂರ್‌ ಬಾ ಅವರನ್ನೇ ಮುಖ್ಯಪಾತ್ರವನ್ನಾಗಿಸಿಕೊಂಡ ಸಿನಿಮಾಗಳು ಇಲ್ಲ. ಕನ್ನಡದಲ್ಲಿ ಇಂಥದೊಂದು ಪ್ರಯತ್ನ ಆಗಿದೆ. ಕಸ್ತೂರ್‌ ಬಾ ಅವರ ಬದುಕಿನ ಕೆಲವು ಪ್ರಮುಖ ಘಟನೆಗಳ ಮೂಲಕ ಆದರ್ಶ ಮತ್ತು ಕಟು ವಾಸ್ತವಗಳ ದ್ವಂದ್ವವನ್ನು ಕಟ್ಟಿಕೊಡಲಾಗಿದೆ. ದ್ವಂದ್ವವನ್ನು ಎದುರಿಸುತ್ತಲೇ ಅದನ್ನು ಮೀರುವ ವ್ಯಕ್ತಿತ್ವಗಳಾಗಿ ಕಸ್ತೂರ್‌ ಬಾ ಮತ್ತು ಗಾಂಧೀಜಿಯವರನ್ನು ಚಿತ್ರಿಸಲಾಗಿದೆ. ಮುಖ್ಯವಾಗಿ ಕಸ್ತೂರ್‌ ಬಾ ಅವರು ತಾಯಿ ಮತ್ತು ಪತ್ನಿ ಎರಡೂ ನೆಲೆಗಳಲ್ಲಿ ಬದುಕನ್ನು ನಿಭಾಯಿಸಿದ ಚರಿತೆಯು ಈ ಚಿತ್ರದ ಕೇಂದ್ರವಾಗಿದೆ’ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ.

ಕಸ್ತೂರ್‌ ಬಾ ಮತ್ತು ಗಾಂಧೀಜಿಯವರ ಯೌವನ ಮತ್ತು ಮುಪ್ಪಿನ ಘಟನೆಗಳನ್ನು ಈ ಚಿತ್ರವು ಹೊಂದಿದೆ. ಕಸ್ತೂರ್‌ ಬಾ ಪಾತ್ರದಲ್ಲಿ ನಟಿ ಹರಿಪ್ರಿಯಾ ಹಾಗೂ ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಅಭಿನಯಿಸಿದ್ದಾರೆ. ಖ್ಯಾತ ನಟರಾದ ಶ್ರೀನಾಥ್‌, ಸುಂದರರಾಜ್‌, ನಟಿ ಪ್ರಮೀಳಾ ಜೋಷಾಯ್‌ ಅವರಲ್ಲದೆ ರೇಖಾ, ಸುಂದರರಾಜ ಅರಸು, ವೆಂಕಟರಾಜು, ರಾಘವ್‌, ವತ್ಸಲಾ ಮೋಹನ್‌ ಮುಂತಾದವರು ತಾರಾಗಣದಲ್ಲಿದ್ದಾರೆ. ಮಾಸ್ಟರ್‌ ಆಕಾಂಕ್ಷ್‌ ಬರಗೂರ್‌ ಬಾಲಕ ಗಾಂಧಿಯಾಗಿ, ಕುಮಾರಿ ಸ್ಪಂದನ ಬಾಲಕಿ ಕಸ್ತೂರ್‌ ಬಾ ಆಗಿ ನಟಿಸಿದ್ದಾರೆ.

ADVERTISEMENT

ಬರಗೂರು ಅವರೇ ಚಿತ್ರಕಥೆ, ಸಂಭಾಷಣೆ, ಗೀತರಚನೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸುರೇಶ್‌ ಅರಸು ಸಂಕಲನ, ನಾಗರಾಜ್‌ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್‌ ಸಂಗೀತ, ಮೈತ್ರಿ ಬರಗೂರು ಅವರ ಕಲಾ ನಿರ್ದೇಶನ ಇದೆ.

ಪ್ರೊ.ಬರಗೂರು ರಾಮಚಂದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.