
ಬೆಳಗಾವಿ: ಗಡಿ ಕನ್ನಡಿಗರ ರಂಜಿಸಿದ 'ಸ್ಟಾರ್' ಗಳು
ಬೆಳಗಾವಿ: ಚಿತ್ರನಟರಾದ ಡಾಲಿ ಧನಂಜಯ, ನೀನಾಸಂ ಸತೀಶ್, ವಶಿಷ್ಠ ಸಿಂಹ ಜಾಗೂ ನಟಿ ಸಪ್ತಮಿಗೌಡ ನಗರದಲ್ಲಿ ಶನಿವಾರ ಸಿನಿ ಅಭಿಮಾನಿಗಳ ಮನಸೂರೆಗೊಂಡರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ 'ಬೆಳಗಾವಿ ಉತ್ಸವ'ದಲ್ಲಿ ಪಾಲ್ಗೊಳ್ಳಲು ನಟ- ನಟಿಯರನ್ನು ಸಂಘಟನೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕರೆತಂದರು.
ನಗರದ ಚನ್ನಮ್ಮ ವೃತ್ತಕ್ಕೆ ಬಂದ ನಟ- ನಟಿಯರನ್ನು ಅಭಿಮಾನಿಗಳು ಜೈಕಾರ ಹಾಕಿ ಬರಮಾಡಿಕೊಂಡರು. ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದಾಗ ಸಿಳ್ಳೆ, ಕೇಕೆಗಳ ಮೂಲಕ ಅಭಿನಂದಿಸಿದರು.
ಬೆಳಗಾವಿ ಉತ್ಸವ ಅಂಗವಾಗಿ ನಗರದ ಸರ್ದಾರ್ಸ್ ಮೈದಾನದಲ್ಲಿ ಸಂಜೆ ನಡೆದ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡರು. ಈ ವೇಳೆ ಅವರನ್ನು ನೋಡಲು ಅಪಾರ ಸಂಖ್ಯೆಯ ಜನ ಮುಗಿಬಿದ್ದರು.
ಸ್ಟಾರ್- ವಾರ್ ಬೇಡ
ಮಾಧ್ಯಮಗಳ ಜೊತೆಗೆ ಮಾತನಾಡಿದ ನಟ ಡಾಲಿ ಧನಂಜಯ, 'ಅಭಿಮಾನಿಗಳು ಎಲ್ಲ ಕನ್ನಡ ಸಿನಿಮಾಗಳನ್ನೂ ನೋಡಿರಿ. ಎಲ್ಲಕ್ಕಿಂತ ದೊಡ್ಡದು ನಿಮ್ಮ ಬದುಕು. ನಿಮ್ಮ ಬದುಕು ಕಟ್ಟಿಕೊಂಡರೆ ನಿಮ್ಮ ಸ್ಟಾರ್ ಗಳಿಗೆ ಅದಕ್ಕಿಂತಲೂ ದೊಡ್ಡ ಖುಷಿ ಏನೂ ಇರುವುದಿಲ್ಲ. ನಿಮ್ಮ ಬದುಕು, ತಂದೆ- ತಾಯಿ, ಕುಟುಂಬದ ಬಗ್ಗೆಯೂ ಗಮನ ಇಟ್ಟುಕೊಳ್ಳಿ. ಹಾಗಾಗಿ, ನೆಚ್ಚಿನ ನಟರಿಗಾಗಿ ಅಭಿಮಾನಿಗಳು ಹೊಡೆದಾಡುವ ಅವಶ್ಯಕತೆ ಇಲ್ಲ' ಎಂದು ಕಿವಿಮಾತು
'ಬೆಳಗಾವಿಗೆ ಬರುವುದು ದೊಡ್ಡ ಖುಷಿ. ನಾಡು, ನುಡಿ ವಿಚಾರದಲ್ಲಿ ನಾವು ಏನು ಮಾಡಬೇಕಾದರೂ ಮಾಡುತ್ತೇವೆ. ನಮ್ಮ ಜೀವನವೇ ಕನ್ನಡ ಭಾಷೆ ಮೇಲೆ ನಿಂತಿದೆ ಅಲ್ಲವೇ. ಅದೇ ನಮ್ಮ ಉಸಿರು' ಎಂದರು.
ನಟ ನೀನಾಸಂ ಸತೀಶ್ ಮಾತನಾಡಿ, 'ಇಲ್ಲಿನ ಕನ್ನಡಿಗರು ಬೆಳಗಾವಿಯನ್ನು ಸುರಕ್ಷಿತವಾಗಿ ಉಳಿಸಿಕೊಂಡಿದ್ದಾರೆ. ಗಡಿ ಭಾಗದಲ್ಲಿ ಕನ್ನಡಿಗರು ಗಟ್ಟಿಯಾಗಿದ್ದಾರೆ. ಡಾ.ರಾಜಕುಮಾರ್ ಅವರ ಕಾಲದಿಂದಲೂ ಚಿತ್ರರಂಗದವರು ಕನ್ನಡಿಗರ ಜೊತೆಗೆ ಇದ್ದಾರೆ. ಸುಮ್ಮನೇ ಚಿತ್ರರಂಗದವರ ಬಗ್ಗೆ ಗಾಸಿಪ್ ಹುಟ್ಟಿಸುತ್ತಾರೆ. ಇಲ್ಲಿ ಕನ್ನಡಿಗರು, ಮರಾಠಿಗರು ಒಂದಾಗಿ ಇದ್ದಾರೆ' ಎಂದರು.
'ಕಾಂತಾರ' ಖ್ಯಾತಿಯ ನಟಿ ಸಪ್ತಮಿ ಗೌಡ ಮಾತನಾಡಿ, 'ಸ್ಟಾರ್ ಅಭಿಮಾನಿಗಳ ಕಿತ್ತಾಟ ಬೇಡ.
ಅಭಿಮಾನಿಗಳು ಎಲ್ಲರ ಸಿನಿಮಾ ನೋಡಿರಿ. ಸಿನಿಮಾ ಮಾಡುತ್ತಿರುವುದೇ ಕನ್ನಡದಲ್ಲಿ. ಕನ್ನಡ ಸಿನಿಮಾಗಳೇ ಒಂದು ಹೋರಾಟ. ಕನ್ನಡ ಚಿತ್ರವನ್ನು ಬೆಂಬಲಿಸಿದರೆ ಕಲಾವಿದರ ಜೀವನ ನಡೆಯುತ್ತದೆ' ಎಂದರು.
ಈ ವೇಳೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, 'ಮಹಾರಾಷ್ಟ್ರದ ಶಿವಸೇನಾ ಸಂಸದನಿಗೆ ಎಚ್ಚರಿಕೆ ಕೊಡುತ್ತೇನೆ. ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಲೋಕಸಭೆ ಸ್ಪೀಕರ್ ಗೆ ದೂರು ಕೊಡುವ ಕೆಲಸ ಆಗಿದೆ. ಬೆಳಗಾವಿಯ ಹಿಡಿ ಮಣ್ಣನ್ನೂ ಮುಟ್ಟಲು ಸಾಧ್ಯವಿಲ್ಲ. ಇಲ್ಲಿ ಕನ್ನಡಿಗರು ಅಷ್ಟೊಂದು ಗಟ್ಟಿಯಾಗಿದ್ದಾರೆ. ಅನೇಕ ಸಂದರ್ಭದಲ್ಲಿ ನಾಡದ್ರೋಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದೇವೆ' ಎಂದರು.
'ಕನ್ನಡದ ವಿಚಾರದಲ್ಲಿ ಚಿತ್ರರಂಗ, ಸಾಹಿತಿಗಳು, ಕನ್ನಡದ ಅಧಿಕಾರಿಗಳು ಗಟ್ಟಿಯಾಗಿ ನಿಂತಿದ್ದಾರೆ. ನಾವು ಯಾರಿಗೂ ಕರ್ನಾಟಕಕ್ಕೆ ಬರಲು ಬೇಡ ಅಂದಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲರಿಗೂ ಬರಲು ಅವಕಾಶವಿದೆ. ಇಂತಹ ಸಂದರ್ಭಗಳಲ್ಲಿ ಒಬ್ಬ ಲೋಕಸಭೆ ಸದಸ್ಯ ಇಲ್ಲಿ ದ್ವೇಷ ಬಿತ್ತಲು ಬರುತ್ತೇನೆ ಅಂದರೆ ಅವರನ್ನು ತಡೆದು ಬೆಳಗಾವಿ ಜಿಲ್ಲಾಧಿಕಾರಿ ಉತ್ತಮ ಕೆಲಸ ಮಾಡಿದ್ದಾರೆ. ಕನ್ನಡಕ್ಕೆ ಏನೇ ತೊಂದರೆ ಆದರೂ ನಾವು ಸುಮ್ಮನೆ ಇರಿವುದಿಲ್ಲ. ಗಡಿ ಭಾಗದಲ್ಲಿ ಸರ್ಕಾರದ ಶೇ 60ರಷ್ಟು ಕನ್ನಡ ಕಡ್ಡಾಯ ಮಾಡಬೇಕು ಪೂರ್ಣಪ್ರಮಾಣದಲ್ಲಿ ಇದು ಜಾರಿ ಆಗಿಲ್ಲ' ಎಂದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಅಭಿಲಾಷ್ ನೇತೃತ್ವದಲ್ಲಿ ಶಿವಾನಂದ ನೀಲಣ್ಣವರ ಅವರು ಈ ಕಾರ್ಯಕ್ರಮ ಆಯೋಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.