ADVERTISEMENT

ಮತ್ತೆ ಶೂಟಿಂಗ್‌ ಸೆಟ್‌ಗೆ ಬಂದ ಭಜರಂಗಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 19:30 IST
Last Updated 17 ಫೆಬ್ರುವರಿ 2020, 19:30 IST
‘ಭಜರಂಗಿ 2’ ಚಿತ್ರದ ಪೋಸ್ಟರ್‌
‘ಭಜರಂಗಿ 2’ ಚಿತ್ರದ ಪೋಸ್ಟರ್‌   

ಶಿ ವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಅಂದಹಾಗೆ ಇದರ ಶೇಕಡ 90ರಷ್ಟು ಭಾಗದ ಚಿತ್ರೀಕರಣ ನಡೆಯುತ್ತಿರುವುದು ಸೆಟ್‌ನಲ್ಲಿಯೇ.

ಎರಡು ಬಾರಿ ಸೆಟ್‌ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ₹ 1 ಕೋಟಿ ವೆಚ್ಚದಡಿ ನಿರ್ಮಿಸಿದ್ದ ಗುಹೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಕಾಣಿಸಿಕೊಂಡಿದ್ದ ಬೆಂಕಿ ಅವಘಡದಿಂದ ಕೂದಲೆಳೆಯ ಅಂತರದಲ್ಲಿ ಚಿತ್ರತಂಡ ಪವಾಡ ಸದೃಢವಾಗಿ ಪಾರಾಗಿತ್ತು. ಜೊತೆಗೆ, ಕಲಾವಿದರು ಪ್ರಯಾಣಿಸುತ್ತಿದ್ದ ಬಸ್‌ ಕೂಡ ಅಪಘಾತಕ್ಕೀಡಾಗಿತ್ತು. ಮತ್ತೆ ಸಿನಿಮಾದ ಶೂಟಿಂಗ್‌ ಆರಂಭಗೊಂಡಿದ್ದು, ಕಳೆದ ಮೂರು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ.

ಎ. ಹರ್ಷ ನಿರ್ದೇಶನದ ಈ ಚಿತ್ರ ಕುತೂಹಲವನ್ನು ಗರಿಗೆದರಿಸಿದೆ. ಈಗಾಗಲೇ, 65 ದಿನಗಳ ಶೂಟಿಂಗ್‌ ಪೂರ್ಣಗೊಂಡಿದೆ. ಇನ್ನು 25 ದಿನಗಳ ಶೂಟಿಂಗ್‌ ಅಷ್ಟೇ ಬಾಕಿ ಇದೆಯಂತೆ. ಒಟ್ಟಾರೆ ಶೇಕಡ 85ರಷ್ಟು ಶೂಟಿಂಗ್‌ ಪೂರ್ಣಗೊಂಡಿದೆ. ಮೇ ತಿಂಗಳಿನಲ್ಲಿ ‘ಭಜರಂಗಿ 2’ ಥಿಯೇಟರ್‌ಗೆ ಲಗ್ಗೆ ಇಡುವ ನಿರೀಕ್ಷೆಯಿದೆ.

ADVERTISEMENT

‘ಭಜರಂಗಿ ಚಿತ್ರದ ಕಥೆಗೂ ಮತ್ತು ಈ ಕಥೆಗೂ ಯಾವುದೇ ಸಂಬಂಧವಿಲ್ಲ. ಇದು ವಿಭಿನ್ನವಾದ ಕಥೆ. ಇದು ನನ್ನ ಡ್ರೀಮ್‌ ಪ್ರಾಜೆಕ್ಟ್‌. ಶಿವಣ್ಣ ಅವರನ್ನು ವಿಭಿನ್ನ ಗೆಟಪ್‌ನಲ್ಲಿ ತೋರಿಸಲಿದ್ದೇನೆ. ನನ್ನ ಹಳೆಯ ಸಿನಿಮಾಗಳಿಗೂ, ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ಹರ್ಷ.

ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ನಡಿ ನಿರ್ಮಾಣವಾಗುತ್ತಿರುವ ಸಿನಿಮಾ ಇದಾಗಿದೆ. ‘ಇದು ಪ್ರೇಕ್ಷಕರಿಗೆ ಬೇರೆಯದೆ ಜಗತ್ತನ್ನು ಪರಿಚಯಿಸಲಿದೆ. ನಗರಕೇಂದ್ರಿತ ಕಥೆ ಆಧರಿಸಿದ ಸಿನಿಮಾವಲ್ಲ. ಶಿವಣ್ಣ ಅವರ ಇಮೇಜ್‌ನಲ್ಲಿ ಕಥೆ ಹೆಣೆಯಲಾಗಿದೆ. ಆ್ಯಕ್ಷನ್‌, ಎಮೋಷನ್‌, ಪ್ರೀತಿ, ಕಾಮಿಡಿಯೂ ಇದೆ. ಪಕ್ಕಾ ಕಮರ್ಷಿಯಲ್‌ ಚಿತ್ರ ಇದು’ ಎನ್ನುತ್ತಾರೆ ಅವರು.

‘ಟಗರು’ ಚಿತ್ರದಲ್ಲಿ ಶಿವಣ್ಣಗೆ ಜೋಡಿಯಾಗಿದ್ದ ಭಾವನಾ ಮೆನನ್‌ ಅವರೇ ಇದರ ನಾಯಕಿ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಕಳೆದ ತಿಂಗಳು ಚಿತ್ರತಂಡಫಸ್ಟ್‌ಲುಕ್‌ ಅನ್ನು ಬಿಡುಗಡೆಗೊಳಿಸಿತ್ತು. ‘ಎಲ್ಲಾ ಕಣ್ಣುಗಳಿಂದ ಪ್ರಪಂಚ ಕಂಡರೆ ಕೆಲವು ‘ಕಣ್ಣುಗಳಲ್ಲೇ’ ಪ್ರಪಂಚ ಕಾಣ್ಸಿಬಿಡುತ್ತೆ! ಕಾಣದ್ದು ಕಂಡುಹಿಡಿಯಲು ಕಂಡದ್ದು ಕಾಯಲು ಭಜರಂಗಿ ಮತ್ತೆ ಬರುತ್ತಿದ್ದಾನೆ’ ಎಂದು ಹೇಳಿ ಕುತೂಹಲ ಕೆರಳಿಸಿತ್ತು. ಫಸ್ಟ್‌ಲುಕ್‌ಗೆ ಜನರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಗೆ ಚಿತ್ರತಂಡ ಖುಷಿಯಲ್ಲಿ ಮುಳುಗಿದೆ. ಜಯಣ್ಣ–ಭೋಗೇಂದ್ರ ಇದಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಸ್ವಾಮಿ ಜಿ. ಗೌಡ ಅವರದು. ದೀಪು ಎಸ್‌. ಕುಮಾರ್‌ ಸಂಕಲನ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.