ADVERTISEMENT

ಕುಸ್ತಿಗಿಳಿದ ಭೂಮಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 4:41 IST
Last Updated 27 ಜನವರಿ 2023, 4:41 IST
ಭೂಮಿ ಶೆಟ್ಟಿ
ಭೂಮಿ ಶೆಟ್ಟಿ   

ಬಣ್ಣದ ಬದುಕಿಗೆ ಕಾಲಿಟ್ಟದ್ದು ಹೇಗೆ?

ಬಾಲ್ಯದಲ್ಲಿ ಭರತನಾಟ್ಯ, ಯಕ್ಷಗಾನ ನನ್ನ ಬದುಕಿನ ಭಾಗವೇ ಆಗಿತ್ತು. ಜೊತೆಗೆ ಸಾಕಷ್ಟು ಬರೆಯುತ್ತಿದ್ದೆ. ಪ್ರಬಂಧ, ಪತ್ರ ಬರಹ ನನಗೆ ಇಷ್ಟ. ಧಾರಾವಾಹಿ, ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಭಿನ್ನವಾಗಿಯೇ ನನ್ನ ಬದುಕು ಇದೆ. ಸಹಜವಾಗಿ ಮನೆಯಲ್ಲಿ ಈ ಲೋಕಕ್ಕೆ ಬರಲು ಪ್ರೋತ್ಸಾಹ ಇರಲಿಲ್ಲ. ಕುಂದಾಪುರ ತಾಲ್ಲೂಕಿನ ಅಂಬಾಗಿಲು ಸಮೀಪ ಗಂಟಿಹೊಳೆ ನಮ್ಮ ಊರು. ಪಿಯು ತನಕ ಊರಿನಲ್ಲಿಯೇ ಓದಿದೆ. ಮುಂದೆ ಎಂಜಿನಿಯರಿಂಗ್‌ ಓದಲು ಬೆಂಗಳೂರಿಗೆ ಬಂದೆ. ಆದರೆ, ಹೋಗಿದ್ದು ಎರಡೇ ವರ್ಷ. ಬಣ್ಣದ ಲೋಕ ನನ್ನನ್ನು ಪ್ರಬಲವಾಗಿ ಸೆಳೆಯಿತು. ಕಿನ್ನರಿ ಧಾರಾವಾಹಿಯಲ್ಲಿ ಅವಕಾಶ ಬಂದಿತು. ಮುಂದೆ ತೆಲುಗು ಅವಕಾಶಗಳೂ ಬಂದವು. ಹೀಗೆ ನಿರಂತರ ಶೂಟಿಂಗ್‌, ಅಭಿನಯ ಇತ್ಯಾದಿಯಿಂದಾಗಿ ಎಂಜಿನಿಯರಿಂಗ್‌ಗೆ ಬಾಯ್‌ ಬಾಯ್‌ ಹೇಳಬೇಕಾಯಿತು. ಈಗ ಟಿವಿ, ಸಿನಿಮಾದಲ್ಲಿ ನೋಡಿದ ನನ್ನ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಬಂಧುಗಳು ಖುಷಿಪಡುತ್ತಿದ್ದಾರೆ. ಈಗ ಕನ್ನಡ ಸಾಹಿತ್ಯದಲ್ಲಿ ಬಿಎ ಪದವಿ ಓದುತ್ತಿದ್ದೇನೆ.

ಸಿನಿಮಾ ಪ್ರಯಾಣ ಹೇಗೆ ಸಾಗಿದೆ?

ADVERTISEMENT

ಕೋವಿಡ್‌ ಕಾಲದಲ್ಲಿ ‘ಇಕ್ಕಟ್‌’ ಚಿತ್ರ ಒಂದಿಷ್ಟು ಹೆಸರು, ಖ್ಯಾತಿ ತಂದು ಕೊಟ್ಟಿತು. ಹಾಗೆ ನೋಡಿದರೆ ಒಟ್ಟಾರೆ ಸಿನಿಮಾ ಪಯಣ ತುಂಬಾ ನಿಧಾನವಾಗಿಯೇ ಇದೆ. ಅವಕಾಶಗಳು ಬಂದದ್ದೂ ನಿಧಾನವಾಗಿಯೇ. ಸದ್ಯ ಅನ್‌ಲಾಕ್‌ ರಾಘವ ಮತ್ತು ತೆಲುಗಿನ ಒಂದು ಚಿತ್ರ ಕೈಯಲ್ಲಿವೆ.

ಧಾರಾವಾಹಿ – ಸಿನಿಮಾ ಯಾವುದು ಹೆಚ್ಚು ಇಷ್ಟ?

ಎರಡೂ ತುಂಬಾ ಇಷ್ಟವೇ. ಎರಡೂ ಪ್ರಕಾರಗಳಲ್ಲಿ ಕಥೆ ಹೇಳುವ ರೀತಿ ಸ್ವಲ್ಪ ಬೇರೆ ಬೇರೆ. ಧಾರಾವಾಹಿಗಳು ನನ್ನನ್ನು ಇಲ್ಲಿಗೆ ಪರಿಚಯಿಸಿವೆ. ಕನ್ನಡ ಧಾರಾವಾಹಿಯ ಅಭಿನಯ ನೋಡಿ ತೆಲುಗಿನಲ್ಲಿಯೂ ಅವಕಾಶ ಸಿಕ್ಕಿತು. ಸಿನಿಮಾ ಅಭಿನಯ ಸಹಜವಾಗಿ ನನ್ನ ಆಸೆಯೂ ಆಗಿತ್ತು. ಅದೂ ಈಡೇರಿದೆ.

ಏನಿದು ‘ಕೆಂಡದ ಸೆರಗು’?

ಇದು ತುಂಬಾ ಸೂಕ್ಷ್ಮವಾದ ಆದರೆ, ಗಟ್ಟಿಯಾದ ಕಥಾವಸ್ತುವುಳ್ಳ ಚಿತ್ರ. ವೇಶ್ಯೆಯನ್ನು ಬೇರೆಯೇ ರೀತಿ ನೋಡುವ ಸಮಾಜ, ಅವಳ ಮಗಳನ್ನೂ ಅದೇ ದೃಷ್ಟಿಯಿಂದ ನೋಡುತ್ತದೆ. ಬದುಕಿನ ಹೋರಾಟದಲ್ಲಿ ಅವಳೇಕೆ ವೇಶ್ಯೆಯಾದಳು ಎಂಬ ಬಗೆಗೂ ಇಲ್ಲೊಂದು ಕಥೆ ಇದೆ. ವೇಶ್ಯೆಯ ಮಗಳು ಬದಲಾಗಬಾರದೇ? ಅವಳ ಹೋರಾಟ ಎಂಥಹದ್ದು? ಅವಳು ಪುರುಷರ ಅಧಿಪತ್ಯದಲ್ಲಿರುವ ಕುಸ್ತಿ ಕ್ಷೇತ್ರಕ್ಕೆ ಕಾಲಿಟ್ಟು ಬೆಳೆದು ದೊಡ್ಡ ಕುಸ್ತಿಪಟುವಾಗುವ ಕಥೆಯಿದೆ. ಜೊತೆಗೆ ತಾಯಿಯನ್ನು ಆ ಕೂಪದಿಂದ ಹೊರತಂದಳೇ? ಎಂಬುದನ್ನು ಹೇಳಿದ್ದೇವೆ. ಒಟ್ಟಿನಲ್ಲಿ ಹಲವಾರು ಪ್ರಶ್ನೆಗಳಿಗೆ ಈ ಚಿತ್ರ ಉತ್ತರ ನೀಡಿದೆ. ಮನುಷ್ಯರನ್ನು ಮನುಷ್ಯರಾಗಿಯೇ ನೋಡಬೇಕು ಎಂದು ಹೇಳುವ ಗಂಭೀರ ವಸ್ತುವುಳ್ಳ ಚಿತ್ರವಿದು. ತುಂಬಾ ಸವಾಲಿನದ್ದೂ ಹೌದು.

ಬೈಕ್‌ ಸವಾರಿ, ಯಕ್ಷಗಾನದ ಹೆಜ್ಜೆಗಳು ಹೇಗಿವೆ?

ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ರೈಡರ್‌ ನಾನು. ಶಾಲಾ ದಿನಗಳಲ್ಲಿಯೂ ಕ್ರೀಡೆಯಲ್ಲಿ ಮುಂದಿದ್ದೆ. ಈಗ ಎನ್‌ಫೀಲ್ಡ್‌ ಬೈಕ್‌ನಲ್ಲೇ ಬೆಂಗಳೂರಿನಿಂದ ಊರಿನವರೆಗೆ ಬರುತ್ತೇನೆ. ಪ್ರಯಾಣವನ್ನು ತುಂಬಾ ಆನಂದಿಸುತ್ತೇನೆ. ಹಲವು ಸಾಹಸ ಯಾತ್ರೆಗಳನ್ನು ಮಾಡಿದ್ದೇನೆ. ಯಕ್ಷಗಾನವನ್ನು ಈಗ ನಿರಂತರವಾಗಿ ಮಾಡುತ್ತಿಲ್ಲ. ವರ್ಷಕ್ಕೊಮ್ಮೆ ನಡೆಯುವ ನಮ್ಮೂರಿನ ಹಬ್ಬದಲ್ಲಿ ಯಕ್ಷಗಾನದ ವೇಷ ಕಟ್ಟಿ ಕುಣಿಯುತ್ತೇನೆ.

ತುಂಬಾ ಇಷ್ಟಪಡುವ, ಮಾದರಿ ಎಂದು ಭಾವಿಸಿರುವ ಸ್ಫೂರ್ತಿ ಯಾರು?

ರಾಜ್‌ ಬಿ. ಶೆಟ್ಟಿ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಸಿನಿಮಾ ಬದುಕಿನಲ್ಲಿ ತುಂಬಾ ಒತ್ತಡಗಳಾದಾಗ, ಸಂದಿಗ್ದಗಳು ಎದುರಾದಾಗ ಎಷ್ಟೋ ವಿಷಯಗಳನ್ನು ಹಂಚಿಕೊಂಡು ಹಗುರಾಗಿದ್ದು ಇದೆ. ಅವರದು ಸಕಾರಾತ್ಮಕತೆ ತುಂಬುವ ವ್ಯಕ್ತಿತ್ವ.

ಮುಂದಿನ ಕನಸು?

ತುಂಬಾ ಇವೆ. ಸಿನಿಮಾ ಪಯಣವನ್ನೇ ಇನ್ನೂ ಚೆನ್ನಾಗಿ ಮುಂದುವರಿಸಬೇಕು. ಸದ್ಯ ಓದುತ್ತಿರುವ ಕನ್ನಡ ಸಾಹಿತ್ಯ ಪದವಿಯನ್ನು ಅತ್ಯುತ್ತಮವಾಗಿ ಮುಗಿಸಬೇಕು. ಮತ್ತೆ ಬರೆಯಬೇಕು ಇತ್ಯಾದಿ ಇತ್ಯಾದಿ. ಮಾತಿನಲ್ಲಿ ಹೇಳುವುದಕ್ಕಿಂತ ಬರೆದೇ ಹೇಳುವುದು ನನಗಿಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.