ADVERTISEMENT

ನಿಜವಾದ ಖಿಲಾಡಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 19:46 IST
Last Updated 7 ನವೆಂಬರ್ 2018, 19:46 IST
   

ಅಕ್ಷಯ್ ಕುಮಾರ್‌ ಈಚೆಗೆ ಖಾನ್‌ಗಳನ್ನು ಹೊರತು ಪಡಿಸಿದರೆ ಬಾಲಿವುಡ್‌ ಗಗನದಲ್ಲಿ ಖ್ಯಾತಿ ಹಾಗೂ ಯಶಸ್ಸಿನ ತಾರೆಯೆಂದೇ ಹೇಳಬಹುದಾಗಿದೆ. ಅತಿ ಎಚ್ಚರಿಕೆಯಿಂದ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತ ತಮ್ಮ ತಾರಾ ವರ್ಚಸ್ಸಿಗೆ ಕುಂದು ಬರದಂತೆ ನೋಡಿಕೊಳ್ಳುತ್ತಿದ್ದಾರೆ ಅಕ್ಷಯ್‌.

ಕಳೆದ ವರ್ಷದಿಂದ ರುಸ್ತುಂ, ಏರ್‌ಲಿಫ್ಟ್‌, ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ, ಪ್ಯಾಡ್‌ಮನ್‌, ಗೋಲ್ಡ್‌ ಹೀಗೆ ಎಚ್ಚರಿಕೆಯ ಆಯ್ಕೆಗಳನ್ನು ಮಾಡಿಕೊಳ್ಳುತ್ತಿದ್ದ ಅಕ್ಷಯ್ ಏಕಾಏಕಿ ವಿಲನ್‌ ಪಾತ್ರಕ್ಕೂ ಜೈ ಎಂದರು. ವರ್ಷಾಂತ್ಯದ ಬಹುನಿರೀಕ್ಷಿತ ಚಿತ್ರ 2.0ನಲ್ಲಿ ರಜನಿಕಾಂತ್‌ ಎದುರು ಖಳ ಪಾತ್ರ ನಿರ್ವಹಿಸುತ್ತಿದ್ದಾರೆ.

1991ರ ಸೌಗಂಧ್‌ ಚಿತ್ರದಲ್ಲಿ ನಟನಾಗಿ ಗುರುತಿಸಿಕೊಂಡ ಅಕ್ಷಯ್‌ ಅದಕ್ಕೂ ಮೊದಲು ಮಹೇಶ್‌ ಭಟ್‌ ಅವರ ಆಜ್‌ ಎಂಬ ಚಿತ್ರದಲ್ಲಿ ಸಣ್ಣ ಪಾತ್ರ ಒಂದರಲ್ಲಿ ಮಿಂಚಿದ್ದರು. ನಂತರ ಖಿಲಾಡಿ ಸರಣಿ ಆರಂಭವಾಯಿತು. ಖಿಲಾಡಿ, ಮೈ ಖಿಲಾಡಿ, ತೂ ಅನಾಡಿ, ಖತರೋಂಕಾ ಖಿಲಾಡಿ, ಖಿಲಾಡಿ ಇಂಟರ್‌ನ್ಯಾಷನಲ್‌, ಖಿಲಾಡಿಯೊಂಕೆ ಖಿಲಾಡಿ ಹೀಗೆ ಸರಣಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಆ್ಯಕ್ಷನ್‌ ಹೀರೊ ಎಂಬ ಇಮೇಜ್‌ ಕ್ರಿಯೇಟ್‌ ಮಾಡಿಕೊಂಡರು. ಇನ್ನೇನು ಇದೇ ಚೌಕಟ್ಟಿನಲ್ಲಿ ಅಕ್ಕಿ ಮಿಂಚಲಿದ್ದಾರೆ ಎನ್ನುವಾಗಲೇ ಗೋಲ್‌ಮಾಲ್‌ನಂಥ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಂಡರು. ಹಾಸ್ಯಕ್ಕೂ ಸೈ ಎನಿಸಿದ್ದೇ ನಂತರದ ಹಾಸ್ಯಚಿತ್ರಗಳ ಸಾಲಿನಿಂದ.

ADVERTISEMENT

ಅಕ್ಷಯ್‌ಗೀಗ 51 ವರ್ಷ. ಬಾಲಿವುಡ್‌ ಪಡಸಾಲೆಯಲ್ಲಿ 27 ವರ್ಷ. ರಾಜೀವ್‌ ಹರಿ ಭಾಟಿಯಾ ಎಂಬ ಯುವಕನೊಬ್ಬ ಬಾಲಿವುಡ್‌ನ ಕಿಂಗ್‌ನಷ್ಟೇ ಮೆರೆದಿದ್ದು ಸುಲಭವಾಗಿರಲಿಲ್ಲ. ಅವರದ್ದೂ ಬಯೋ‍ಪಿಕ್‌ ಏನಾದರೂ ಆದರೆ ಯಾವ ಕಮರ್ಷಿಯಲ್‌ ಚಿತ್ರಗಳಿಗಿಂತಲೂ ಕಡಿಮೆ ಇರುವುದಿಲ್ಲ.

ಸಮರ ಕಲೆ ಕಲಿಯಲು ವಿದೇಶಕ್ಕೆ ಹೋಗಿದ್ದು, ವಿದೇಶದಲ್ಲಿ ಹೋಟೆಲ್‌ ಒಂದರಲ್ಲಿ ದುಡಿದಿದ್ದು, ಅವಕಾಶಗಳಿಲ್ಲದೇ ಮುಂಬೈನಲ್ಲಿ ಅಲೆದಾಡಿದ್ದು, ಫೋಟೊ ಶೂಟ್‌ ಮಾಡಿಸಲು ಒಂದು ಮನೆಯ ಮುಂದೆ ನಿಂತಾಗ ಆ ಮನೆಯ ಸೆಕ್ಯುರಿಟಿ, ಗದರಿ ಅಟ್ಟಿದ್ದು, ಮುಂದೆ ಅಕ್ಷಯ್‌ ಕುಮಾರ್‌ ಅದೇ ಮನೆಯನ್ನು ಖರೀದಿಸಿದ್ದು.. ಹೀಗೆ ಹತ್ತಾರು ಫಿಲ್ಮಿ ಅಂಶಗಳಂತೂ ಸಿಕ್ಕೇಸಿಗುತ್ತವೆ.

ಈಗ 2.0 ತೆರೆ ಕಾಣಲು ಸಿದ್ಧವಾಗಿದ್ದರೆ ಕೇಸರಿ ಮುಂದಿನ ವರ್ಷ ತೆರೆ ಕಾಣುವುದು.

ವಿಲನ್ ಆಯ್ಕೆ ಗುಟ್ಟು ರಟ್ಟು
‘ಟೀಸರ್‌’ ಬಿಡುಗಡೆಗೊಂಡ ಬಳಿಕ ಭಾರಿ ನಿರೀಕ್ಷೆ ಮೂಡಿಸಿರುವ ನಟ ರಜನೀಕಾಂತ್ ಅಭಿನಯದ ‘2.0’ ಚಿತ್ರದ ‘ವಿಲನ್’ ಪಾತ್ರದ ಆಯ್ಕೆಯ ಹಿಂದಿನ ಗುಟ್ಟನ್ನು ಚಿತ್ರದ ನಿರ್ದೇಶಕ ಶಂಕರ್ ಬಹಿರಂಗಗೊಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಅರ್ನಾಲ್ಡ್ ಅವರನ್ನು ಸಿನಿಮಾದ ‘ವಿಲನ್’ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದೆವು. ಆದರೆ, ಅವರು ‘ನಾನು ವಿಲನ್ ಪಾತ್ರದಲ್ಲಿ ನಟಿಸುವುದಿಲ್ಲ’ ಎಂದು ಹೇಳಿ ನಯವಾಗಿ ತಿರಸ್ಕರಿಸಿದ್ದರು. ಆದಾದ, ಬಳಿಕ ಕಮಲ್ ಹಾಸನ್ ಅವರ ಬಳಿಗೆ ಹೋದೆವು. ಆದರೆ, ಅವರು ಸಹ ತನ್ನದೇ ನಿರ್ದೇಶನದ ಇಂಡಿಯನ್-2 ಸಿನಿಮಾಗೆ ಸಿದ್ಧತೆ ನಡೆಸುತ್ತಿರುವುದರಿಂದ 2.0 ದಲ್ಲಿ ಅಭಿನಯಿಸಲು ನಿರಾಕರಿಸಿದರು’ ಎಂದು ಹೇಳಿಕೊಂಡಿದ್ದಾರೆ.

‘ಕ್ರಮೇಣ, ಆ್ಯಕ್ಷನ್ ಕಿಂಗ್ ಅಕ್ಷಯ್‌ ಕುಮಾರ್ ಅವರತ್ತ ನಮ್ಮ ಚಿತ್ತ ಹರಿಯಿತು. ನಮ್ಮ ಬೇಡಿಕೆಗೆ ಅಕ್ಷಯ್ ಒಪ್ಪಿಕೊಂಡು ಅದ್ಭುತವಾಗಿ ನಟಿಸಿದ್ದಾರೆ. ವಿಲನ್ ಜೊತೆಗೆ ವಿವಿಧ ಆಯಾಮಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವೀಕ್ಷಕರಿಗೆ ಅವರ ಪಾತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಅವರು. ಅಂದಾಜು ₹ 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಇದೇ 29ರಂದು ವಿಶ್ವದಾದ್ಯಂತಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.