ಸೈಫ್ ಅಲಿ ಖಾನ್ ಅವರ ಹೊಸ ಚಿತ್ರ ‘ಭೂತ್ ಪೊಲೀಸ್’ನ ಪೋಸ್ಟರ್ ಈಗ ವಿವಾದಕ್ಕೊಳಗಾಗಿದೆ. ಈ ಪೋಸ್ಟರ್‌ನಲ್ಲಿ ಸೈಫ್ ಅಲಿ ಖಾನ್ ಅವರ ಹಿನ್ನೆಲೆಯಲ್ಲಿ ವಿಭೂತಿ ಬಳಿದುಕೊಂಡ ಸಾಧುಗಳು ಇದ್ದಾರೆ.
ಇದು ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ. ಇಲ್ಲಿ ಸಾಧುಗಳೇ ಏಕಿದ್ದಾರೆ? ಮುಸ್ಲಿಂ ಮೌಲ್ವಿ, ಮೌಲಾನಾ, ಮುಲ್ಲಾಗಳು ಏಕಿಲ್ಲ? ಪದೇ ಪದೇ ಹಿಂದೂ ಸಾಧು ಸಂತರನ್ನು ಬಾಲಿವುಡ್ ಸದಾ ಅಣಕಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. #ಬಾಯ್ಕಾಟ್ ಬಾಲಿವುಡ್ ಹೆಸರಿನಲ್ಲಿ ಈ ಆಕ್ರೋಶ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ‘ಭೂತ್ ಪೊಲೀಸ್’ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾಕ್ವೆಲಿನ್ ಫೆರ್ನಾಂಡಿಸ್, ಯಾಮಿ ಗೌತಮ್ ತಾರಾಗಣದಲ್ಲಿ ಇದ್ದಾರೆ.
ಸೈಫ್ ಅದ್ಯಾಕೋ ಆಗಾಗ ಇಂಥ ವಿವಾದ ಎದುರಿಸುತ್ತಲೇ ಇದ್ದಾರೆ. ಆದಿಪುರುಷ್ ಚಿತ್ರದಲ್ಲಿ ರಾವಣನನ್ನು ಒಳ್ಳೆಯವನು ಎಂದು ಹೇಳಲು ಹೊರಟು ಫಜೀತಿಗೊಳಗಾಗಿದ್ದರು. ಅವರು ನಟಿಸಿದ್ದ ತಾಂಡವ್ ವೆಬ್ ಸರಣಿಯೂ ಆಕ್ಷೇಪಕ್ಕೊಳಗಾಗಿತ್ತು.ಸೈಫ್ ಪತ್ನಿ ಕರೀನಾ ಕಪೂರ್ ಖಾನ್ ಅವರು ಚಿತ್ರವೊಂದರಲ್ಲಿ ಸೀತೆಯ ಪಾತ್ರ ನಿರ್ವಹಿಸಲು ಕೋಟಿಗಟ್ಟಲೆ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದ ಯಾವುದೇ ನಟಿಯಿಂದ ಸೀತೆಯ ಪಾತ್ರ ಮಾಡಿಸಬಾರದು ಎಂದು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಸದ್ಯ ಈ ವಿವಾದದ ಬಗ್ಗೆ ಸೈಫ್ ಅಂತೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಬಾಲಿವುಡ್ ಮಂದಿಯೂ ಮೌನವಾಗಿದ್ದಾರೆ. ನಕಾರಾತ್ಮಕವಾಗಿಯಾದರೂ ಸರಿ ಚಿತ್ರದ ಶೀರ್ಷಿಕೆ ಪ್ರಚಾರ ಪಡೆದುಕೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.