ADVERTISEMENT

ಬ್ರಿಟಿಷ್‌ ಚೆಲುವೆಗೆ ‘ರಾಜ’ಬಲೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 20:00 IST
Last Updated 18 ಮಾರ್ಚ್ 2019, 20:00 IST
ಡೈಸಿ ಎಡ್ಗರ್‌ ಜೋನ್ಸ್‌
ಡೈಸಿ ಎಡ್ಗರ್‌ ಜೋನ್ಸ್‌   

ರಾಜಮೌಳಿಯ ಆರ್‌ಆರ್‌ಆರ್‌ ಚಿತ್ರಕ್ಕೆ ಲಂಡನ್‌ ಮೂಲದ ಪ್ರಬುದ್ಧ ನಟಿ ಡೈಸಿ ಎಡ್ಗರ್‌ ಜೋನ್ಸ್‌ ಸಹಿ ಹಾಕಿದ್ದಾರೆ. ಜೂನಿಯರ್‌ ಎನ್‌ಟಿಆರ್‌ ಮಾಡಲಿರುವ ಕೋಮರಂ ಭೀಮ್‌ಗೆ ಜೋಡಿಯಾಗಿ ಡೈಸಿ ನಟಿಸಬೇಕಿದೆ. ದೇಶಭಕ್ತಿಯನ್ನು ಬಿಟ್ಟರೆ ಬೇರಾವ ಆಕರ್ಷಣೆಗಳಿಗೂ ಮಣಿಯದ ಖಡಕ್‌ ವ್ಯಕ್ತಿತ್ವದ ಸ್ವಾತಂತ್ರ್ಯ ಹೋರಾಟಗಾರ ಭೀಮ್‌ನ ಬದುಕಿಗೆ ರಾಜಮೌಳಿ ರೊಮ್ಯಾನ್ಸ್‌ ಹೇಗೆ ತುಂಬುತ್ತಾರೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಡೈಸಿ–ತಾರಕ್‌ ರೊಮ್ಯಾನ್ಸ್‌ಗಾಗಿ ಕತೆಗೇ ಟ್ವಿಸ್ಟ್‌ ಕೊಡ್ತಾರಾ ರಾಜಮೌಳಿ?

ರಾಜಮೌಳಿ ಬಲೆ ಬೀಸಿದರೆ ದೊಡ್ಡ ಮೀನಿಗೇ ಎಂಬುದು ಈಗಾಗಲೇ ಸಾಬೀತಾಗಿರುವ ಸತ್ಯ. ‘#ಆರ್‌ಆರ್‌ಆರ್‌’ ಸಿನಿಮಾ ಮತ್ತೊಮ್ಮೆ ಅದನ್ನು ಪುಷ್ಟೀಕರಿಸಿದೆ.

ಚಿತ್ರ ತಂಡ, ಒಂದೆಳೆ ಕತೆ, ನಾಯಕ ನಾಯಕಿ, ಖಳ ನಟರು ಯಾರು ಅನ್ನೋ ಬೇಸಿಕ್‌ ಮಾಹಿತಿಗಳನ್ನಾದರೂ ಹಂಚಿಕೊಳ್ಳಿ ಎಂದುಹೆಚ್ಚು ಕಮ್ಮಿ ಒಂದು ವರ್ಷದಿಂದ ದಕ್ಷಿಣ ಭಾರತೀಯ ಚಿತ್ರರಂಗ ಮತ್ತು ಅಭಿಮಾನಿಗಳು ಹೆಚ್ಚು ಕಮ್ಮಿ ಒಂದು ವರ್ಷದಿಂದರಾಜಮೌಳಿ ಅವರ ಬೆನ್ನುಬಿದ್ದಿದ್ದರು. ಆದರೆ ಅವರು ಈ ಮಾಹಿತಿಗಳನ್ನು ಬಿಟ್ಟುಕೊಟ್ಟದ್ದು ತಾವು ಅಂದುಕೊಂಡ ಸಮಯಕ್ಕೇ. ತಾರಾಗಣದಲ್ಲಿ ಬಾಲಿವುಡ್‌ನ ಸೆಲೆಬ್ರಿಟಿಗಳು ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಯಾರು ಎಂಬ ಪ್ರಶ್ನೆಗೆ, ಅಲಿಯಾ ಭಟ್‌ ಮತ್ತು ಅಜಯ್ ದೇವಗನ್‌ ಎಂಬ ಉತ್ತರ ಸಿಕ್ಕಿದೆ. ಅಂದ ಹಾಗೆ, ರಾಜಮೌಳಿ ಪ್ರಕಟಿಸಿದ ಪಟ್ಟಿಯಲ್ಲಿ ಬ್ರಿಟನ್‌ನ ಒಬ್ಬ ಸುಂದರಿಯೂ ಸೇರಿದ್ದಾಳೆ.

ADVERTISEMENT

ಡೈಸಿ ಎಡ್ಗರ್‌ ಜೋನ್ಸ್‌!

ಹೌದು, ಇನ್ನೂ ಚಿತ್ರದ ಶೀರ್ಷಿಕೆಯೂ ಗೌಪ್ಯವಾಗಿದ್ದರೂ ‘#ಆರ್‌ಆರ್‌ಆರ್‌’ ಎಂದೇ ಗುರುತಿಸಿಕೊಳ್ಳುವ ರಾಜಮೌಳಿ ಸಿನಿಮಾದಲ್ಲಿ ಮೊದಲ ನಾಯಕಿಯಾಗಿ ಆಯ್ಕೆಯಾಗಿರುವವರು ಬ್ರಿಟಿಷ್‌ ಚೆಲುವೆ ಡೈಸಿ. ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳ ಮೂಲಕ ತಮ್ಮ ನಟನೆಯ ಕೌಶಲದಿಂದ ಹೆಸರಾಗಿರುವ ಪ್ರಬುದ್ಧ ನಟಿ.

ರಾಜಮೌಳಿ ತಮ್ಮ ತಾರಾಗಣವನ್ನು ಪ್ರಕಟಿಸಿದಾಗಿನಿಂದಲೂ ಸಿನಿಪ್ರಿಯರು ಡೈಸಿ ಪೂರ್ವಾಪರ ತಿಳಿದುಕೊಳ್ಳಲು ಅಂತರ್ಜಾಲ ತಾಣಗಳನ್ನು ಜಾಲಾಡುತ್ತಿರುವುದು ಕುತೂಹಲಕಾರಿ ಸಂಗತಿ.

ಯಾರೀಕೆ?

ಹದಿನಾಲ್ಕರ ಹರೆಯದಲ್ಲೇ ನಟನೆಯ ಆಸೆ ಚಿಗುರಿದಾಗ ಡೈಸಿ ಆಯ್ಕೆ ಮಾಡಿಕೊಂಡದ್ದುರಂಗಭೂಮಿಯನ್ನು. ಬ್ರಿಟಿಷ್‌ ರಂಗಭೂಮಿಯ ದಿಗ್ಗಜರ ಆಡುಂಬೊಲವಾಗಿದ್ದ ಬ್ರಿಟನ್‌ನ ವಿಶ್ವವಿಖ್ಯಾತ ನ್ಯಾಷನಲ್‌ ಯೂತ್‌ ಥಿಯೇಟರ್‌ನಲ್ಲಿ ಡೈಸಿ ರಂಗಶಿಕ್ಷಣ ಪಡೆದು ರಂಗಭೂಮಿಯಲ್ಲೇ ಪರಿಣತಿ ಪಡೆದವರು. ಹಾಗಾಗಿ ಸಣ್ಣ ವಯಸ್ಸಿಗೇ ರಂಗಭೂಮಿ ಆಳ ವಿಸ್ತಾರಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಯಿತು.

ಡೈಸಿ, ಮನೋಜ್ಞ ನಟನೆಯಿಂದ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾಳೆ ಎಂಬುದು ಬ್ರಿಟಿಷ್‌ ರಂಗವಿಮರ್ಶಕರು ಮೆಚ್ಚಿ ನುಡಿದಿದ್ದಾರೆ. ಈ ಮಾತು ನಾಟಕಗಳಿಗಷ್ಟೇ ಸೀಮಿತವಾಗಿಲ್ಲ. ಕಿರುತೆರೆಯ ಧಾರಾವಾಹಿಗಳಾದ ವಾರ್‌ ಆಫ್‌ ವರ್ಲ್ಡ್‌, ಕೋಲ್ಡ್‌ ಫೀಟ್‌, ಔಟ್‌ ನಂಬರ್ಡ್‌, ಸೈಲೆಂಟ್‌ ವಿಟ್ನೆಸ್‌ ಅವರ ಶಕ್ತಿಯನ್ನು ಸಾಬೀತಪಡಿಸಿವೆ.ತೀರಾ ಇತ್ತೀಚಿನ ಧಾರಾವಾಹಿ ‘ಪಾಂಡ್‌ ಲೈಫ್‌’ ಪ್ರಸಾರ ಇಷ್ಟರಲ್ಲೇ ಆರಂಭವಾಗಲಿದೆ. ಕೇವಲ ಐದು ಸಂಚಿಕೆಗಳುಳ್ಳ ಮಿನಿ ಧಾರಾವಾಹಿ ಇದು. 2012ರಲ್ಲಿ ಕಿರುತೆರೆಯಲ್ಲಿ ಭಾರಿ ಮೆಚ್ಚುಗೆ ಗಳಿಸಿದ್ದ ಈ ಧಾರಾವಾಹಿ ಮತ್ತೊಮ್ಮೆ ಪ್ರಸಾರವಾಗಲಿದೆ.

‘#ಆರ್‌ಆರ್‌ಆರ್‌’ನಲ್ಲಿ ಡೈಸಿ ಜೊತೆಯಾಗಲಿರುವುದು ಜೂನಿಯರ್‌ ಎನ್‌ಟಿಆರ್ ಯಾನೆ ನಂದಮೂರಿ ತಾರಕ ರಾಮ ರಾವ್‌ ಯಾನೆ ತಾರಕ್ ಅವರಿಗೆ. ಒಂದು ಶತಮಾನದ ಹಿಂದಿನ, ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕತೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಕೋಮರಂ ಭೀಮ್‌ ಪಾತ್ರದಲ್ಲಿ ತಾರಕ್‌ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗಾಗಲೇ ಗೊತ್ತಾಗಿದೆ. ಭೀಮ್‌, ಅವಿವಾಹಿತ. ದೇಶಭಕ್ತಿಯನ್ನು ಬಿಟ್ಟರೆ ಬೇರಾವ ಆಕರ್ಷಣೆಗಳಿಗೂ ಮಣಿಯದ ಖಡಕ್‌ ವ್ಯಕ್ತಿತ್ವದ ಭೀಮ್‌ನ ಬದುಕಿಗೆ ರಾಜಮೌಳಿ ರೊಮ್ಯಾನ್ಸ್‌ ಹೇಗೆ ತುಂಬುತ್ತಾರೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ಒಂದು ಮೂಲದ ಪ್ರಕಾರ, ವಸಾಹತುಶಾಹಿ ಬ್ರಿಟಿಷ್ ಯುವತಿಯಾಗಿ ಡೈಸಿ ನಟಿಸಲಿದ್ದು, ಇಬ್ಬರು ಪರಮ ವಿರೋಧಿಗಳ ನಡುವೆ ಪ್ರೇಮಾಂಕುರವಾಗುವ ದೃಶ್ಯವನ್ನು ರಾಜಮೌಳಿ ಹೆಣೆಯಲಿದ್ದಾರೆ.

ಐರಿಶ್‌, ಸ್ಕಾಟಿಶ್‌ ಭಾಷೆಗಳಲ್ಲಿ ಪಳಗಿರುವ ಡೈಸಿ, 100 ವರ್ಷ ಹಳೆಯ ಬ್ರಿಟಿಷ್‌ ವಸಾಹತುಶಾಹಿಳ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದು ರಾಜಮೌಳಿ ಲೆಕ್ಕಾಚಾರ. ಡೈಸಿಗೆ ಅಮೆರಿಕನ್‌ ಶೈಲಿಯ ಇಂಗ್ಲಿಷ್‌ ಕೂಡಾ ಸುಲಲಿತವಂತೆ. ಬ್ರಿಟನ್ ಮೂಲದ ಹತ್ತಾರು ನಟಿಯರನ್ನು ಸಂಪರ್ಕಿಸಿ ಮಾತುಕತೆ ಕೂಡಾ ನಡೆಸಿದ್ದ ಈ ದಿಗ್ಗಜ ನಿರ್ದೇಶಕ, ರಂಗಭೂಮಿ ಮತ್ತು ಕಿರುತೆರೆಯ ಅನುಭವದೊಂದಿಗೆ ಭಾಷಾ ಸಾಮರ್ಥ್ಯದ ಕಾರಣಕ್ಕೆ ಡೈಸಿಯೇಸೂಕ್ತ ಎಂದು ತೀರ್ಮಾನಿಸಿದರಂತೆ.

ಡೈಸಿ, ರಾಜಮೌಳಿ ಕ್ಯಾಂಪ್‌ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಅವರ ನುರಿತ ನಟನೆಗೆ ಇನ್ನಷ್ಟು ಅವಕಾಶಗಳು ಹುಡುಕಿ ಬರಲಿವೆ ಎಂಬುದು ಚಿತ್ರರಂಗದ ಪರಿಣತರ ಅಂದಾಜು. ಡೈಸಿ, ಭಾರತೀಯ ವೀಕ್ಷಕರನ್ನೂ ಆವರಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಅಂತಹ ದಿನಗಳೂ ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.