ADVERTISEMENT

‘ಬುದ್ಧಿವಂತ’ ನಿರ್ದೇಶಕನ ಹೊಸ ಚಿತ್ರಕಥೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 25 ಮೇ 2020, 19:30 IST
Last Updated 25 ಮೇ 2020, 19:30 IST
ಮೌರ್ಯ ಬಿ.ಎನ್‌.
ಮೌರ್ಯ ಬಿ.ಎನ್‌.   

ಉಪೇಂದ್ರ ನಟನೆಯ ‘ಬುದ್ಧಿವಂತ 2’ ಚಿತ್ರದಿಂದ ಹೊರಬಂದ ಮೇಲೆನಿರ್ದೇಶಕ ಬಿ.ಎನ್‌. ಮೌರ್ಯ ಮತ್ತೊಂದು ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸದ್ದಿಲ್ಲದೇ ಅವರು ಚಿತ್ರಕಥೆಯೊಂದನ್ನು ಸಿದ್ಧಪಡಿಸಿದ್ದಾರೆ.

ಬ್ರಿಟಿಷರ ಆಡಳಿತ ಅವಧಿಯಲ್ಲಿದ್ದ ಒಂದು ಕ್ರೂರ ಪದ್ಧತಿ ಆಧರಿಸಿ ಅವರು ತಮ್ಮ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್‌ ಬರೆದಿದ್ದಾರೆ. ಈ ಸ್ಕ್ರಿಪ್ಟ್‌ ಅನ್ನು ಅವರು 14 ಬಗೆಯಲ್ಲಿ ಬರೆದಿಟ್ಟಿದ್ದಾರಂತೆ. ‘ಲಾಕ್‌ಡೌನ್‌ ಅವಧಿ ನನ್ನ ಪಾಲಿಗೆವ್ಯರ್ಥವಾಗಲು ಬಿಡಲಿಲ್ಲ. ಚಿತ್ರಕಥೆಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾಗಲೇ ಕಥೆಯ ಒಂದು ಎಳೆ ಹೊಳೆದಿತ್ತು. ಆಪ್ತರ ಬಳಿ ಚರ್ಚಿಸಿದಾಗ ಉತ್ತಮ ಸಿನಿಮಾ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ಚಿತ್ರಕಥೆ ಹೆಣೆಯುವಂತೆ ಹುರಿದುಂಬಿಸಿದ್ದರು. ಈ ಮೂರು ತಿಂಗಳಅವಧಿಯನ್ನು ಹೊಸ ಚಿತ್ರದ ಕಥೆ ಮತ್ತು ಚಿತ್ರಕಥೆ ಹೆಣೆಯಲು ಬಳಸಿಕೊಂಡೆ. ಒಂದು ಒಳ್ಳೆಯ ಸ್ಕ್ರಿಪ್ಟ್‌ ಸಿದ್ಧಪಡಿಸಿದ ತೃಪ್ತಿಯೂ ಸಿಕ್ಕಿದೆ’ ಎಂದು ಮಾತು ವಿಸ್ತರಿಸಿದರು ಮೌರ್ಯ.

‘ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ, ಮನುಕುಲವೇ ಬೆಚ್ಚಿಬೇಳುವಂತೆ ಇದ್ದ ಆ ಪದ್ಧತಿ ಕಾಲಾನಂತರ ಕಾನೂನಿನ ವ್ಯಾಪ್ತಿಯಿಂದ ತೆಗೆದು ಹಾಕಲ್ಪಟ್ಟಿದೆ. ಆದರೆ, ಆ‍ಪದ್ಧತಿ ಒಂದು ವೇಳೆ ಈಗ ಅನಧಿಕೃತವಾಗಿ ಆಚರಣೆಯಲ್ಲಿದ್ದರೆ ಹೇಗಿರುತ್ತೆಂದು ಕಲ್ಪಿಸಿಕೊಂಡು ಈ ಕಾಲಘಟ್ಟಕ್ಕೆ ಅನ್ವಯಿಸಿ ಕಥೆ ಹೇಳಲು ಹೊರಟಿದ್ದೇನೆ. ಆ ಕ್ರೂರ ಪದ್ಧತಿಯ ಸಾರಾಂಶ ವಿಸ್ತರಿಸಿ ಹೇಳಿದರೆ, ಇಡೀ ಕಥೆಯ ಕುತೂಹಲ ಹೊರಟುಹೋಗುತ್ತದೆ’ ಎನ್ನುವ ಅವರು ಕಥೆಯ ಗುಟ್ಟು ಕಾಯ್ದುಕೊಳ್ಳುವ ಜಾಣ್ಮೆ ತೋರಿದರು.

ADVERTISEMENT

‘ಸ್ಟಾರ್‌ ನಟರು ಮತ್ತು ನಿರ್ಮಾಪಕರೊಂದಿಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಹೊಸ ಚಿತ್ರವನ್ನು ಘೋಷಣೆ ಮಾಡಲಿದ್ದೇನೆ. ಇದೊಂದು ಬಿಗ್‌ ಬಜೆಟ್‌ ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲ’ ಎನ್ನುವ ಮಾತು ಸೇರಿಸಿದರು.

ಸೃಜನ್‌ ಲೋಕೇಶ್‌ ನಟನೆಯ ‘ಟಿಪಿಕಲ್‌ ಕೈಲಾಸ್‌’ ಚಿತ್ರವನ್ನು ನಿರ್ದೇಶಿಸಿದ್ದ ಮೌರ್ಯ ಅವರಿಗೆ ‘ಬುದ್ಧಿವಂತ 2’ ಚಿತ್ರ ಎರಡನೇ ಚಿತ್ರ ಆಗಬೇಕಿತ್ತು. ಈ ಚಿತ್ರದ ಕಥೆ ಮತ್ತು ಚಿತ್ರಕಥೆ ಮೌರ್ಯ ಅವರದ್ದೇ. ಕಥೆ– ಚಿತ್ರಕಥೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿಕೊಳ್ಳಬೇಕೆಂಬ ಒತ್ತಡ ಬಂದಿದ್ದಕ್ಕೆ ಚಿತ್ರತಂಡದಿಂದಲೇ ಹೊರ ನಡೆದಿದ್ದಕ್ಕೆ ಅವರಲ್ಲಿ ಬೇಸರವಿಲ್ಲ. ‘ಕಥೆಗಾರ– ನಿರ್ದೇಶಕನಿಗೆ ಸ್ವಾಭಿಮಾನ ಬಹಳ ಮುಖ್ಯ. ನಮ್ಮ ಮಾತು–ಕೃತಿಯಲ್ಲಿ ರಾಜೀಮಾಡಿಕೊಳ್ಳಬಾರದು’ ಎನ್ನುವ ಮಾತು ಹೇಳಲು ಅವರು ಮರೆಯಲಿಲ್ಲ.

‘ಬುದ್ಧಿವಂತ 2’ ಚಿತ್ರಕ್ಕೆ ಈಗ ನಿರ್ದೇಶಕ ಭದ್ರಾವತಿಯ ಜಯರಾಮ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.