ADVERTISEMENT

‘ಕೇಸ್‌ ನಂ: 130/2016’ ಕಳಕಳಿಯ

ಜಾಗೃತಿ

ರಮೇಶ ಕೆ
Published 29 ಅಕ್ಟೋಬರ್ 2018, 19:30 IST
Last Updated 29 ಅಕ್ಟೋಬರ್ 2018, 19:30 IST
ಖುಷಿ
ಖುಷಿ   

ಬಾಲ್ಯವಿವಾಹದಂಥ ಸಾಮಾಜಿಕ ಪಿಡುಗನ್ನು ಸಮಾಜದಿಂದಲೇ ತೊಡೆದುಹಾಕಲು ಕಠಿಣ ಕಾನೂನುಗಳಿದ್ದರೂ ಇಂದಿಗೂ ನಮ್ಮ ನಡುವೆ ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಿವೆ. ತಿಳಿದೊ ತಿಳಿಯದೆಯೋ ಬಾಲ್ಯವಿವಾಹ ಆದವರು ಏನೆಲ್ಲಾ ಸಂಕಷ್ಟ ಅನುಭವಿಸುತ್ತಾರೆ ಎಂಬುದನ್ನು ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ ಮೈಸೂರಿನವರೇ ಆದ ನಿರ್ದೇಶಕ ಸುನಿಲ್‌ ಡಿ'ಸೋಜ.

ಈ ಸಿನಿಮಾಕ್ಕೆ ನಟರು, ತಂತ್ರಜ್ಞರು ಎಲ್ಲರೂ ಮೈಸೂರಿನವರು ಎಂಬುದು ವಿಶೇಷ. ‘ನಮ್ಮದೇ ಚಿತ್ರ’ ಹಾಗೂ ‘24 ಫ್ರೇಮ್‌ ಮೀಡಿಯಾ ಹೌಸ್‌’ ಬ್ಯಾನರ್‌ನಡಿ ಬರುತ್ತಿರುವ ‘ಕೇಸ್‌ ನಂ 130/2016’ ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ.

ಚಂದನವನದಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ನಿರ್ದೇಶಕರು ಹೊಸ ಹೊಸ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ. ಆ ನಿಟ್ಟಿನಲ್ಲಿ ಇದೊಂದು ಭಿನ್ನ ಪ್ರಯೋಗ ಎನ್ನಬಹುದು.

ADVERTISEMENT

ತಂದೆ ತಾಯಿ ಇಲ್ಲದ ಅಪ್ರಾಪ್ತೆಯನ್ನು ವಿವಾಹವಾಗುವ ಯುವಕ. ಇವರಿಗೆ ಒಂದು ಮಗುವೂ ಆಗುತ್ತದೆ. ಬಾಲಕಿ ಎಂಬ ಕಾರಣಕ್ಕೆ ಯುವಕ ಜೈಲು ಪಾಲಾಗುತ್ತಾನೆ. ಪತಿಯ ಬಿಡುಗಡೆಗಾಗಿ ಆಕೆ ನ್ಯಾಯಾಲಯದ ಮೊರೆ ಹೋಗುತ್ತಾಳೆ. ಗಂಡನಿಲ್ಲದೇ ಮಗುವನ್ನು ಪಾಲನೆ ಮಾಡಿಕೊಂಡು ಹೇಗೆ ಜೀವನ ನಡೆಸುತ್ತಾಳೆ ಎಂಬುದು ಕಥೆಯ ಸಾರ.

‘ಬಾಲ್ಯವಿವಾಹ ತಡೆ ಕಾನೂನಿನ ಬಗ್ಗೆ ಅರಿವಿಲ್ಲದೇ ಯುವಜನಾಂಗ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತದೆ. ವಂಚನೆಗೊಳಗಾದ ಹೆಣ್ಣು, ಗಂಡನನ್ನು ಬಿಡುಗಡೆ ಮಾಡಿಸಲು ಹೋರಾಟ ನಡೆಸಿದರೂ ಪ್ರಾಯೋಜನವಾಗುವುದಿಲ್ಲ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೈಸೂರಿನ ನ್ಯಾಯಾಲಯದಲ್ಲಿಯೇ ತಿಂಗಳಿಗೆ ಏನಿಲ್ಲವೆಂದರೂ 15ರಿಂದ 20 ಬಾಲ್ಯವಿವಾಹ ಪ್ರಕರಣಗಳು ವಿಚಾರಣೆಗೆ ಬರುತ್ತಿವೆ. ನೈಜ ಘಟನೆಯನ್ನು ಆಧರಿಸಿ ಚಿತ್ರ ಮಾಡಿದ್ದೇವೆ. ಪೋಕ್ಸೊ ಕಾಯ್ದೆ ಬಗ್ಗೆ ಅಧ್ಯಯನ ಮಾಡಿ, ವಕೀಲರೊಂದಿಗೆ ಚರ್ಚಿಸಿ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಸುನಿಲ್‌ ಡಿಸೋಜಾ.

‘ನಟಿ ಖುಷಿ 10ನೇ ತರಗತಿ ಓದುತ್ತಿದ್ದು, ಕಥೆಗೆ ಸೂಕ್ತವೆನಿಸಿದರು. ಚಿತ್ರ ಬಿಡುಗಡೆಯ ನಂತರ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರದರ್ಶನ ನೀಡಿ ಅರಿವು ಮೂಡಿಸುವ ಯೋಜನೆಯಿದೆ’ ಎಂದು ಹೇಳುತ್ತಾರೆ ಸುನಿಲ್‌.

ಮೈಸೂರು, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆದಿದೆ. ಸದ್ಯ ಸೆನ್ಸಾರ್‌ ಮಂಡಳಿಯಲ್ಲಿದೆ.

ಸಿನಿಮೋತ್ಸವದಲ್ಲಿ ಪ್ರದರ್ಶನ: ದೆಹಲಿಯಲ್ಲಿ ಈಚೆಗೆ ನಡೆದ 7ನೇ ಅಂತರರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನ ಪ್ರಾದೇಶಿಕ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನ ಕಂಡಿದೆ. 49 ಸಿನಿಮಾಗಳಲ್ಲಿ ಕನ್ನಡದಿಂದ ಆಯ್ಕೆಯಾದ ಏಕೈಕ ಚಿತ್ರವಿದು.

ರಂಗಾಯಣದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಟನ ತಂಡದ ಖುಷಿ ಮತ್ತು ಮಂಜುನಾಥ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಷಕ ನಟರಾಗಿ ನಾಗರತ್ನಾ, ಯಶೋದಾ, ಗಿರೀಶ್‌ ಚಂದ್ರ, ಆನಂದ ಬಾಬು, ಶ್ರೇಯಾ ಹಾಗೂ ಉಮೇಶ್‌ ಕಾಣಿಸಿಕೊಂಡಿದ್ದಾರೆ.

ಸ್ಥಳೀಯ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಂಡಿದ್ದರಿಂದ ಹೆಚ್ಚು ಖರ್ಚಾಗಲಿಲ್ಲ. ₹18 ಲಕ್ಷ ಖರ್ಚಾಗಿದೆ. ಮಲ್ಟಿಫ್ಲೆಕ್ಸ್‌ಗಳು ಹಾಗೂ ರಂಗಾಯಣದಲ್ಲಿ ಪ್ರದರ್ಶನ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಗೆ ತಂದಿರುವ ಪೋಕ್ಸೊ ಕಾಯ್ದೆ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಸಿಗಲಿದೆ ಎನ್ನುತ್ತಾರೆ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಭಾಷಣೆ ಬರೆದಿರುವ ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.