ADVERTISEMENT

ಮಾದಪ್ಪನ ಭಕ್ತರ ಕ್ಷಮೆಯಾಚಿಸಿದ ಗಾಯಕ ಚಂದನ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 8:54 IST
Last Updated 25 ಆಗಸ್ಟ್ 2020, 8:54 IST
‘ಕೋಲುಮಂಡೆ’ ಹಾಡಿನ ಪೋಸ್ಟರ್‌
‘ಕೋಲುಮಂಡೆ’ ಹಾಡಿನ ಪೋಸ್ಟರ್‌   

ರ‍್ಯಾಪರ್‌ ಚಂದನ್‌ ಶೆಟ್ಟಿ ಬಿಡುಗಡೆ ಮಾಡಿದ್ದ ‘ಕೋಲುಮಂಡೆ ಜಂಗಮ ದೇವರು’ ಎಂಬ ರ‍್ಯಾಪ್ ಸಾಂಗ್ ಈಗ ವಿವಾದಕ್ಕೆ ಕಾರಣವಾಗಿದೆ. ಮೂರು ದಿನಗಳ ಹಿಂದೆ ಆನಂದ್‌ ಆಡಿಯೊದ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡನ್ನು ಚಂದನ್‌ ಶೆಟ್ಟಿ ಅವರೇ ಬಿಡುಗಡೆ ಮಾಡಿದ್ದರು.

ಈ ಹಾಡಿನಲ್ಲಿ ಶಿವಶರಣೆ ಸಂಕಮ್ಮ ಅವರಿಗೆ ಅವಮಾನ ಮಾಡಲಾಗಿದೆ. ಭಕ್ತಿಗೀತೆಯನ್ನು ತಿರುಚುವ ಮೂಲಕ ಮಾದಪ್ಪನ ಭಕ್ತರ ಮನಸ್ಸಿಗೆ ನೋವುಂಟು ಮಾಡಲಾಗಿದೆ ಎಂದು ಫೇಸ್‌ಬುಕ್‌ನ ಶ್ರೀಮಲೆಮಹದೇಶ್ವರ ಸ್ವಾಮಿ ಗ್ರೂಪ್‌ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಆಕ್ರೋಶ ಮೊಳಗಿಸಿದ್ದಾರೆ.

ಫೇಸ್‌ಬುಕ್‌ನ ಶ್ರೀಮಲೆಮಹದೇಶ್ವರ ಸ್ವಾಮಿ- ದಕ್ಷಿಣ ದ್ವಾರ ಹನೂರು ಕ್ಷೇತ್ರದ ಪೇಜ್‌ನಲ್ಲಿ ಚಂದನ್‌ ಶೆಟ್ಟಿ ಅವರನ್ನು ಕುರಿತು ಬರೆದಿರುವ ಸಾರಾಂಶ ಇಂತಿದೆ: ‘ಚಂದನ್‌ ಶೆಟ್ಟಿ, ನೀವು ಮಹಾ ಕಲಾವಿದರು. ಆದರೆ, ನಮ್ಮ ಜಾನಪದದಲ್ಲಿ ನಾವು ಶಿವಶರಣೆ ಶಂಕಮ್ಮ ಅವರನ್ನೂ ಪೂಜಿಸುತ್ತೇವೆ. ಆದರೆ, ನಿಜವಾಗಲೂ ನೀಲೇಗೌಡ ಆಕೆಯನ್ನು ಅನುಮಾನಿಸಲಿಲ್ಲ. ಯಾರಾದರೂ ಮರುಳು ಮಾಡಿ ತನ್ನಿಂದ ದೂರ ಆಗಬಾರದೆಂದು ಆಕೆಗೆ ಕಷ್ಟಕೋಟಲೆ ಕೊಟ್ಟು ಹೆಜ್ಜೇನು ಬೇಟೆಗೆ ಹೋರಡುತ್ತಾನೆ. ಆದರೆ, ಈ ರೀತಿ ಮಾದಕವಾಗಿ ತೋರಿಸುವ ಅವಶ್ಯಕತೆ ಏನಿತ್ತು?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಮುತ್ತೈದೆಯ ಕೂಗು ಕೇಳಿ ಸ್ವತಃ ಶ್ರೀಮಲೆ ಮಹದೇಶ್ವರ ಸ್ವಾಮಿಯು ಭಕ್ತಿಗೆ ಒಲಿದು ಭಾಗ್ಯ ಕೊಟ್ಟಿದ್ದೂ ಇದೆ. ನಮ್ಮ ಜನಪದ, ನಮ್ಮ ಹೆಮ್ಮೆಯನ್ನು ದಯವಿಟ್ಟು ನಮ್ಮವರೇ ಈ ರೀತಿ ಪ್ರತಿಬಿಂಬಿಸುವುದು ಎಷ್ಟು ಸರಿ’ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೊಳಗೊಂಡನಹಳ್ಳಿಯ ಶ್ರೀಮಲೈಮಹದೇಶ್ಟರಸ್ಟಾಮಿ ನೀಲಗಾರರ ಸಂಘ ಪ್ರಶ್ನಿಸಿದೆ.

ಕ್ಷಮೆಯಾಚಿಸಿದ ಚಂದನ್‌ ಶೆಟ್ಟಿ

‘ಮಲೆಮಹಹೇಶ್ವರ ಸ್ವಾಮಿಯ ಭಕ್ತರಿಗೆ ಅವಮಾನ ಮಾಡುವ ಉದ್ದೇಶ ನನಗಿಲ್ಲ. ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ. ಶೀಘ್ರವೇ, ಈ ಹಾಡನ್ನು ಹಿಂತೆಗೆದುಕೊಳ್ಳಲಾಗುವುದು’ ಎಂದು ಚಂದನ್‌ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.