ADVERTISEMENT

ಕಡಲ ತಟದಲ್ಲಿ ಹುಟ್ಟಿದ ಕಥೆ

ಕೆ.ಎಚ್.ಓಬಳೇಶ್
Published 22 ಆಗಸ್ಟ್ 2019, 19:30 IST
Last Updated 22 ಆಗಸ್ಟ್ 2019, 19:30 IST
ಚೇತನ್‌ ಕುಮಾರ್
ಚೇತನ್‌ ಕುಮಾರ್   

‘ಚೆನ್ನೈನ ಮರೀನಾ ಬೀಚ್‌ನಲ್ಲಿ ಕುಳಿತಿದ್ದಾಗ ಹುಟ್ಟಿದ ಕಥೆ ಇದು’

‘ಭರಾಟೆ’ ಸಿನಿಮಾದ ಕಥೆ ಹುಟ್ಟಿದ್ದು ಹೇಗೆ ಎನ್ನುವ ಪ್ರಶ್ನೆಗೆ ನಿರ್ದೇಶಕ ಚೇತನ್‌ ಕುಮಾರ್‌ ಒಂದೇ ಸಾಲಿನಲ್ಲಿ ಉತ್ತರ ನೀಡಿದ್ದು ಹೀಗೆ. ಕಡಲಿನ ಅಗಾಧತೆ ಮತ್ತು ಅಲೆಗಳ ಆರ್ಭಟದ ಮುಂದೆ ಮೂಕವಾಗಿ ಕುಳಿತಿದ್ದ ಅವರ ಮನಸ್ಸಿನ ಬಾಗಿಲು ತೆರೆಯಿತಂತೆ ‘ಭರಾಟೆ’ಯ ಕಥೆ.
‘ನನ್ನೊಳಗೆ ಕಥೆಗಳು ಹೇಗೆ ಜನಿಸುತ್ತವೆ ಎನ್ನುವುದು ನನಗೆ ಗೊತ್ತಿಲ್ಲ. ಕಥೆಯ ಎಳೆಯೊಂದು ಮೂಡುತ್ತದೆ. ಅದರ ಜಾಡು ಹಿಡಿದು ಸಾಗುತ್ತೇನೆ. ಅದು ‘ಬಹದ್ದೂರ್‌’ ಚಿತ್ರದ ಶೂಟಿಂಗ್‌ ಸಂದರ್ಭ. ಬೀಚ್‌ನಲ್ಲಿ ಕುಳಿತಿದ್ದಾಗ ಮನದಲ್ಲಿ ಕಥೆಯ ಒಂದು ಎಳೆ ಹೊಳೆಯಿತು. ಜತನದಿಂದ ಅದನ್ನು ಕಾಪಿಟ್ಟುಕೊಂಡಿದ್ದೆ’ ಎಂದರು.
ನಟ ಶ್ರೀಮುರಳಿ ಅವರಿಗೆಯೇ ಈ ಕಥೆಯನ್ನು ನಿರ್ದೇಶಿಸಬೇಕೆಂದು ಅನಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು; ‘ಬಹದ್ದೂರ್‌’, ‘ಭರ್ಜರಿ’ ಸಿನಿಮಾದ ಬಳಿಕ ಶ್ರೀಮುರಳಿ ಸರ್‌ಗೆ ಸಿನಿಮಾ ಮಾಡಬೇಕೆಂದು ನಿರ್ಧರಿಸಿದೆ. ಅವರ ಬಳಿ ಕಥೆಯ ಎಳೆ ಹೇಳಿದೆ. ಅವರು ಒಪ್ಪಿದ ನಂತರವೇ ಕಮರ್ಷಿಯಲ್ ದಾಟಿಗೆ ಚಿತ್ರಕಥೆ ಹೊಸೆದೆ’ ಎಂದು ವಿವರಿಸಿದರು.
ಪ್ರಸ್ತುತ ಸಮಾಜದಲ್ಲಿ ಕೌಟುಂಬಿಕ ಸಂಬಂಧಗಳು ಹಳಿ ತಪ್ಪಿವೆ. ಮಕ್ಕಳು ಮಾನವೀಯ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ ಎಂಬುದು ಅವರ ನೋವು. ‘ಭರಾಟೆ’ ಕಥೆ ಇದರ ಸುತ್ತವೇ ಸಾಗಲಿದೆಯಂತೆ. ‘ತಾತ– ಮೊಮ್ಮಗ, ಅಪ್ಪ– ಮಗನ ಸಂಬಂಧ ಕುರಿತು ಈ ಸಿನಿಮಾ ಮಾತನಾಡುತ್ತದೆ. ಇಂದಿನ ಮಕ್ಕಳು, ಯುವಜನರು ಕಳೆದುಕೊಳ್ಳುತ್ತಿರುವ ಬಾಂಧವ್ಯದ ಮಹತ್ವವನ್ನೂ ಸಾರುತ್ತದೆ. ಮನೆಮಂದಿಯಲ್ಲಾ ಕುಳಿತು ನೋಡುವ ಚಿತ್ರವಿದು. ಭಾವನಾತ್ಮಕ ಅಂಶಗಳಿವೆ’ ಎನ್ನುತ್ತಾರೆ.
‘ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡುತ್ತಾರೆ. ಆ ಹಣ ವಾಪಸ್‌ ಬರಬೇಕಲ್ಲವೇ? ಹಾಗಾಗಿ, ಕಥೆ ಬರೆಯುವಾಗ ಕಮರ್ಷಿಯಲ್‌ ಅಂಶಗಳು, ಲೊಕೇಷನ್‌, ನಟ, ನಟಿಯರ ಇಮೇಜ್‌ ಅನ್ನು ಗಮನದಲ್ಲಿಟ್ಟ ಕೊಂಡು ಕಥೆ ಹೊಸೆಯುತ್ತೇನೆ’ ಎನ್ನುವುದು ಅವರ ವಿವರಣೆ.
‘ಬಹದ್ದೂರ್‌ ಮತ್ತು ಭರ್ಜರಿ ಸಿನಿಮಾಗಳಿಗೆ ಕೌಟುಂಬಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಬಹದ್ದೂರ್‌ನಲ್ಲಿ ಅಪ್ಪ –ಮಗಳ ಕಥನ ಇತ್ತು. ಸಾಕಷ್ಟು ತಂದೆ– ತಾಯಂದಿರಿಗೆ ಇದು ಇಷ್ಟವಾಯಿತು. ‘ಭರ್ಜರಿ’ಯಲ್ಲಿ ತಾಯಿ ಮತ್ತು ಮಗಳ ಎಮೋಷನ್‌ ಇತ್ತು. ಭರಾಟೆಯಲ್ಲೂ ಭಿನ್ನವಾದ ಸಂದೇಶ ಇದೆ. ನವಸರ ಕಡೆದುಕೊಟ್ಟಿರುವೆ. ‘ಚಂದ್ರ ಚಕೋರಿ’ ಸಿನಿಮಾದಲ್ಲಿ ಶ್ರೀಮುರಳಿ ಕೌಟುಂಬಿಕ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದರು. ‘ಭರಾಟೆ’ಯಲ್ಲೂ ಆ ಯಶಸ್ಸು ಸಿಗಲಿದೆ’ ಎನ್ನುವುದು ಅವರ ವಿಶ್ವಾಸ. ಪಂಚಿಂಗ್‌ ಡೈಲಾಗ್‌ ಬರೆಯುವುದರಲ್ಲಿ ಚೇತನ್‌ ಕುಮಾರ್‌ ಸಿದ್ಧಹಸ್ತರು. ಅದಕ್ಕೆ ಅವರ ಸಿನಿಮಾ ಗುರುತುಷಾರ್‌ ರಂಗನಾಥ್‌ ಅವರೇ ಪ್ರೇರಣೆಯಂತೆ. ‘ಹತ್ತು ಸಾಲಿನಲ್ಲಿ ಹೇಳುವ ಸಂಭಾಷಣೆಯನ್ನು ಮೂರೇ ಪದದಲ್ಲಿ ಕಟ್ಟಿಕೊಟ್ಟರೆ ಪ್ರೇಕ್ಷಕರ ಹೃದಯಕ್ಕೆ ನಾಟುತ್ತದೆ. ಪ್ರಾಸಬದ್ಧ ಡೈಲಾಗ್‌ಗಳಲ್ಲಿ ಸೌಂಡಿಂಗ್‌ ಜೊತೆಗೆ ಪ್ರೇಕ್ಷಕರಿಗೆ ರಂಜನೆಯೂ ಸಿಗುತ್ತದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT