ADVERTISEMENT

Kannada Movies | ಸೆಟ್ಟೇರುತ್ತಿದೆ ‘ಚಿ ಸೌಜನ್ಯ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಇತ್ತೀಚೆಗೆ ಮತ್ತೆ ಸದ್ದು ಮಾಡುತ್ತಿದೆ. ಸಮಾಜದಲ್ಲಿ ಸದ್ದುಗದ್ದಲ ಸೃಷ್ಟಿಸಿದ ಪ್ರಕರಣಗಳು ತಕ್ಷಣ ಸಿನಿಮಾವಾಗಿ ಸೆಟ್ಟೇರುವುದು ಹೊಸತೇನಲ್ಲ. ಇತ್ತೀಚೆಗಷ್ಟೇ ಘೋಷಣೆಗೊಂಡಿರುವ ‘ಚಿ ಸೌಜನ್ಯ’ ಚಿತ್ರ ಕೂಡ ಇದೇ ಸಾಲಿಗೆ ಸೇರುವ ಚಿತ್ರವೇ ಎಂಬ ಅನುಮಾನ ಮೂಡಿದೆ.

ನಟಿ ಹರ್ಷಿಕಾ ಪೂಣಚ್ಚ ಈ ಚಿತ್ರದೊಂದಿಗೆ ನಿರ್ದೇಶಕಿಯಾಗುತ್ತಿದ್ದಾರೆ. ಕಂಸಾಳೆ ಫಿಲ್ಮ್ಸ್‌ ಹಾಗೂ ಭುವನ್ ಎಂಟರ್‌ಟೈನ್‌ಮೆಂಟ್‌ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 

‘ಹೆಣ್ಣುಮಕ್ಕಳ ಶೋಷಣೆಯ ಬಗ್ಗೆ ನಾನು ಹಾಗೂ ನನ್ನ ಪತಿ ಭುವನ್ ಸಾಕಷ್ಟು ಹೋರಾಟ ಮಾಡಿದ್ದೇವೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಮಾಡಬೇಕೆಂದು ಆಸೆಯಿತ್ತು. ಹೆಣ್ಣುಮಕ್ಕಳ ನೋವು ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಜಾಸ್ತಿ ಗೊತ್ತಿರುತ್ತದೆ. ಹಾಗಾಗಿ ಈ ಚಿತ್ರವನ್ನು ನೀವೇ ನಿರ್ದೇಶನ ಮಾಡಿ ಎಂದು ನಿರ್ಮಾಪಕರು ಹೇಳಿದರು. ಇದು ಯಾವುದೇ ಒಂದು ಘಟನೆಯ ಕುರಿತಾದ ಚಿತ್ರವಲ್ಲ. ದೇಶದಲ್ಲಿ ನಡೆದಿರುವ ಅಮಾನುಷ ಘಟನೆಗಳನ್ನಿಟ್ಟುಕೊಂಡು ಮಾಡುತ್ತಿರುವ ಚಿತ್ರ. ನಮ್ಮ ಚಿತ್ರದ ನಾಯಕಿ ಹೆಸರು ಸೌಜನ್ಯ’ ಎಂದು ಸಮಜಾಯಿಷಿ ನೀಡಿದ್ದಾರೆ ಹರ್ಷಿಕಾ. ‌

ADVERTISEMENT

ಚಿತ್ರಕ್ಕೆ ‘ಒಂದು ಹೆಣ್ಣಿನ ಕಥೆ’ ಎಂಬ ಅಡಿಬರಹವಿದೆ. ಚಿತ್ರತಂಡ ಮಾತ್ರ ಇದು ಹಲವು ಹೆಣ್ಣುಮಕ್ಕಳ ಕಥೆ ಎನ್ನುತ್ತಿದೆ! ಪ್ರಮುಖಪಾತ್ರದಲ್ಲಿ ನಟ ಕಿಶೋರ್ ಕಾಣಿಸಿಕೊಳ್ಳುತ್ತಿದ್ದಾರೆ. ಉಗ್ರಂ ಮಂಜು, ಕಾಕ್ರೋಜ್ ಸುಧೀ , ಯಶ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಚಿತ್ರಗ್ರಹಣವಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.