ADVERTISEMENT

‘ಸಿಂಗ’ ಚಿತ್ರದ ಸನ್ನಿವೇಶಗಳಿಗೂ, ಚಿರು ಬದುಕಿಗೂ ಸಾಮ್ಯತೆ ಇತ್ತು: ಅದಿತಿ ನೆನಪು

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 6:57 IST
Last Updated 9 ಜೂನ್ 2020, 6:57 IST
‘ಸಿಂಗ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ಚಿರಂಜೀವಿ ಸರ್ಜಾ
‘ಸಿಂಗ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ಚಿರಂಜೀವಿ ಸರ್ಜಾ   

‘ಸಿಂಗ’ಸಿನಿಮಾದ ಕೆಲವು ತುಣುಕುಗಳಿಗೂ ಚಿರಂಜೀವಿ ಸರ್ಜಾ ಅವರಬದುಕಿಗೂ ಸಾಕಷ್ಟು ಸಾಮತ್ಯೆ ಇತ್ತಂತೆ. ಇದನ್ನು ಸ್ವತಃ ಚಿರು ಅವರೇ ಹಲವು ಬಾರಿ ಹೆಮ್ಮೆಯಿಂದ ಹೇಳಿಕೊಂಡಿಯೂ ಇದ್ದರು. ಚಿತ್ರದ ಪಾತ್ರದಲ್ಲಿಎಷ್ಟೇ ಒರಟನಾದರೂ ತುಂಬಾ ಎಥಿಕ್‌ ಮತ್ತು ಆದರ್ಶಗಳನ್ನು ಇಟ್ಟುಕೊಂಡು ಬದುಕುವವ ಈ ‘ಸಿಂಗ’. ಹಾಗಾಗಿಯೇ ಆತ ಚಿತ್ರದಲ್ಲೂ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ನಿಜ ಜೀವನದಲ್ಲೂ ಸ್ನೇಹಿತರು, ಪರಿಚಿತರು ಹಾಗೂ ತನ್ನೊಂದಿಗೆ ನಟಿಸುವ ಸಹ ಕಲಾವಿದರು, ತಂತ್ರಜ್ಞರಿಗೂ ಚಿರು ಅಂದರೆ ಇಷ್ಟವೇ. ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಗುಣವೇ ಅವರ ಸ್ನೇಹ–ಆತ್ಮೀಯರ ಬಳಗವನ್ನು ದೊಡ್ಡದು ಮಾಡಿತ್ತು. ಅವರ ಸ್ನೇಹ, ಸರಳತೆ ಮತ್ತು ಎಲ್ಲರೊಂದಿಗೂ ಬೆರೆಯುವ ಗುಣವನ್ನು ನೆನೆದು ಈಗ ಎಲ್ಲರೂ ಮರುಗುವವರೇ.

‘ಸಿಂಗ’ ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ನಟಿಸಿದ್ದ ಅದಿತಿ ಪ್ರಭುದೇವ ಅವರು ಕೂಡ, ಚಿರು ಅಕಾಲಿಕ ಸಾವಿಗೆ ತುತ್ತಾದ ಆಘಾತದಿಂದ ಹೊರಬಂದಿಲ್ಲ. ಚಿರು ಜತೆಗೆ ‘ಸಿಂಗ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ಕ್ಷಣಗಳನ್ನು ಮತ್ತು ಚಿರು ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಸನ್ನಿವೇಶಗಳನ್ನು ನೆನೆದು ಅದಿತಿ ಭಾವುಕರಾದರು. ಈ ಚಿತ್ರದಲ್ಲಿ ಚಿರು ಮತ್ತು ಅದಿತಿ ಜೋಡಿಯ ಅಭಿನಯ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈ ಚಿತ್ರದ ‘ಶ್ಯಾನೆ ಟಾಪ್ ಆಗವ್ಳೆ ನಮ್ ಹುಡುಗಿ’ ಹಾಡು ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು. ಈ ಹಾಡಿಗಂತು ಚಿರು– ಅದಿತಿ ಸಖತ್‌ ಸ್ಟೆಪ್‌ ಹಾಕಿದ್ದರು. ಈ ಹಾಡನ್ನು ಗುನುಗದ ಸಿನಿ ಪ್ರೇಕ್ಷಕನೇ ವಿರಳ ಎನ್ನುವಂತೆ, ಈ ಹಾಡು ಸಖತ್‌ ಹಿಟ್‌ ಆಗಿತ್ತು.

‘ನನ್ನ ಜೀವನದಲ್ಲಿ ಇಂಥ ಆಘಾತವನ್ನು ನಾನೆಂದು ಅನುಭವಿಸಿರಲಿಲ್ಲ. ನಮ್ಮೊಂದಿಗೆ ನಗುನಗುತ್ತಾ, ನಮ್ಮನ್ನು ನಗಿಸುತ್ತಿದ್ದ ನಿನ್ನೆಮೊನ್ನೆಯವರೆಗೂ ಇದ್ದವರು, ‘ಅದು ಆಗಲ್ಲಮ್ಮಾ... ಹೀಗಲ್ಲಮ್ಮಾ....’ ಎಂದುನಮಗೂ ಮಾರ್ಗದರ್ಶನ ಮಾಡುತ್ತಿದ್ದವರು ಹೀಗೆ ದಿಢೀರ್‌ ಬಾರದ ಲೋಕಕ್ಕೆಹೊರಟು ಹೋಗುತ್ತಾರೆಂದರೆ ಹೇಗೆ? ಜೀವನ ಎಂದರೇ ಇಷ್ಟೇನಾ? ಎನಿಸುವಷ್ಟರ ಮಟ್ಟಿಗೆ ಜಿಗುಪ್ಸೆ, ಸಂಕಟವಾಗುತ್ತಿದೆ. ಮೇಘನಾ ಅವರು ಸಿಕ್ಕಾಗ ‘ಮೇಡಂ ಸರ್‌ ಹೇಗಿದ್ದಾರೆ ಎಂದರೆ, ಅವರಿಗೇನಮ್ಮ ಗುಂಡುಕಲ್ಲಿನಂತಿದ್ದಾರೆ’ ಎಂದು ತಮಾಷೆ ಮಾಡುತ್ತಿದ್ದರು.ನಮ್ಮೊಂದಿಗೆ ನಟಿಸಿದ ನಟನನ್ನು ಕಳೆದುಕೊಂಡು ನಾವಿಷ್ಟು ಸಂಕಟಪಡುತ್ತಿದ್ದೇವೆ. ಇನ್ನು ಚಿರು ಸರ್‌ ಪತ್ನಿ ಮೇಘನಾ ರಾಜ್‌ ಸಂಕಟವನ್ನು ಊಹಿಸಲು ಆಗದು’ ಎಂದು ಕ್ಷಣ ಮೌನವಾದರು.

ADVERTISEMENT

‘2020 ವರ್ಷ ಯಾಕಾದರೂ ಇಷ್ಟೊಂದು ಖರಾಬು ಆಯಿತೋ ಗೊತ್ತಿಲ್ಲ. ಯಾವ ಕಡೆಯಿಂದಲೂ ಒಳ್ಳೆಯ ಸುದ್ದಿಗಳು ಕೇಳಲು ಆಗುತ್ತಿಲ್ಲ. ಕೊರೊನೊ, ಲಾಕ್‌ಡೌನ್‌, ಜತೆಗೆ ಆತ್ಮಿಯರ ಅಕಾಲಿಕ ಸಾವು ಇವೆಲ್ಲಾ ಜೀವನವೇ ನಶ್ವರ ಎನಿಸುವಷ್ಟರ ಮಟ್ಟಿಗೆ ರೇಜಿಗೆ ಹುಟ್ಟಿಸಿಬಿಟ್ಟಿದೆ. ನಮ್ಮಂತಹ ಮಧ್ಯಮವರ್ಗದಿಂದ ಬಂದ ಕಲಾವಿದರಿಗೂ ಕೊರೊನಾ ಕಷ್ಟಕಾಲ ತಂದೊಡ್ಡಿದೆ. ನಾವು ದಿನ ದುಡಿದರಷ್ಟೇ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಮಗೆ ಗಾಡ್‌ಫಾದರ್‌ಗಳೆನ್ನುವವರು ಇಲ್ಲ, ನಮ್ಮ ಕೆಲಸಗಳೇ ನಮಗೆ ಗಾಡ್‌ಫಾದರ್‌. ಆದಷ್ಟು ಬೇಗ ಕೊರೊನಾ ಕರಾಳಛಾಯೆ ಮರೆಯಾಗಿ ಚಿತ್ರರಂಗ ಮತ್ತೆ ಮೈಕೊಡವಿ ಎದ್ದುನಿಲ್ಲಬೇಕು. ಎಲ್ಲರ ಬದುಕು ಹಳಿಗೆ ಮರಳಬೇಕು’ ಎನ್ನುವ ಮಾತು ಹೇಳಲು ಅದಿತಿ ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.