ADVERTISEMENT

15ಕ್ಕೆ ಥಿಯೇಟರ್‌ ಪುನರಾರಂಭ; ಚಿತ್ರರಂಗದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 14:41 IST
Last Updated 1 ಅಕ್ಟೋಬರ್ 2020, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳ ಬಾಗಿಲು ತೆರೆಯಲು ಸರ್ಕಾರ ಹಸಿರು ನಿಶಾನೆ ತೋರಿರುವುದಕ್ಕೆ ಚಿತ್ರೋದ್ಯಮದ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.ಒಮ್ಮೆ ಚಿತ್ರಮಂದಿರಗಳ ಬಾಗಿಲು ತೆರೆದರೆ ಸಾಕು ಚಿತ್ರೋದ್ಯಮದ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಬಹುದು ಎನ್ನುವುದು ಸಿನಿಮಾಮಂದಿಯ ಆಶಾಭಾವನೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಚಿತ್ರಮಂದಿರಗಳ ಬಾಗಿಲು ಸಹ ಮುಚ್ಚಿಸಿತ್ತು.ಕಳೆದ ಏಳು ತಿಂಗಳುಗಳಿಂದ ಚಿತ್ರೋದ್ಯಮದ ಚಟುವಟಿಕೆಗಳು ಸ್ತಬ್ದಗೊಂಡಿದ್ದವು.ಬಹುತೇಕ ನಟ–ನಟಿಯರು, ನಿರ್ದೇಶಕರು, ಸಹಕಲಾವಿದರು, ತಂತ್ರಜ್ಞರು, ದಿನಗೂಲಿ ಕಾರ್ಮಿಕರು ಕೈಯಲ್ಲಿ ಕೆಲಸವಿಲ್ಲದೆ ಕಾಲಿ ಕುಳಿತ್ತಿದ್ದರು. ಚಿತ್ರೀಕರಣ ಪೂರ್ಣಗೊಂಡು ತೆರೆಕಾಣಲು ಸಜ್ಜಾಗಿದ್ದ ಚಿತ್ರಗಳೂ ಚಿತ್ರಮಂದಿರಗಳ ಬಾಗಿಲು ತೆರೆಯುವುದನ್ನು ಎದುರು ನೋಡುತ್ತಿದ್ದವು. ಚಿತ್ರಮಂದಿರಗಳ ಬಾಗಿಲು ತೆರೆದರೆ ಸಾಲು ಸಾಲು ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ತುದಿಗಾಲ ಮೇಲೆ ನಿಂತಿದ್ದಾರೆ.

‘ಇದು ಸಿಹಿ ಸುದ್ದಿ. ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸಂತೋಷ ತಂದಿದೆ.ಸುರಕ್ಷತೆಯನ್ನು ಕಡೆಗಣಿಸದೆ ಇರೋಣ, ಆದಷ್ಟು ಬೇಗ ಥಿಯೇಟರ್‌ಗಳಲ್ಲಿ ಭೇಟಿಯಾಗೋಣ’ ಎಂದು ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಸಂತಸ ವ್ಯಕ್ತ‍ಪಡಿಸಿ, ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಅಂತೂ ಇಂತೂ ಕೇಂದ್ರ ಸರ್ಕಾರ ನಮ್ ಕಡೆನೂ ಕೃಪೆ ತೋರಿದೆ. ಅಕ್ಟೋಬರ್ 15ಕ್ಕೆ ಥೀಯೇಟರ್ ಓಪನ್ ಆಗ್ತಿರೋದ್ರಿಂದ ಅದನ್ನೇ ನಂಬಿ ಬದುಕುತ್ತಿದ್ದ ಎಲ್ಲರಿಗೂ ಜೀವ ಬಂದಂತಾಗಿದೆ. ಮತ್ತೆಂದೂ ಇಂತಹ ಪರಿಸ್ಥಿತಿ ಬಾರದಿರಲಿ. ಎಂದಿನಂತೆ ಥೀಯೇಟರ್‌ಗಳು ತುಂಬಿ ತುಳುಕಲಿ. ನಿರ್ದೇಶಕರ ಹೊಸ ಕನಸುಗಳೆಲ್ಲ ಬೆಳ್ಳಿ ಪರದೆಯಲ್ಲಿ ರಾರಾಜಿಸಲಿ’ ಎಂದು ನಿರ್ದೇಶಕ ಎ.ಪಿ. ಅರ್ಜುನ್‌ ಟ್ವೀಟ್ ಮಾಡಿದ್ದಾರೆ.

‘ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿರುವುದು ಸಂತಸದ ಸಂಗತಿ. ಎಲ್ಲ ಉದ್ಯಮಗಳು ಕಾರ್ಯಾರಂಭಿಸಿದ್ದವು. ಆದರೆ, ಚಿತ್ರೋದ್ಯಮ ಮಾತ್ರ ಸಂಪೂರ್ಣ ಕಾರ್ಯಾರಂಭ ಮಾಡಿರಲಿಲ್ಲ. ಮತ್ತೆ ಎಂದಿನಂತೆ ಚಿತ್ರೋದ್ಯಮದಲ್ಲಿ ಸಂಭ್ರಮ ಕಾಣಬೇಕು. ನಮ್ಮೆಲ್ಲರ ಸುರಕ್ಷತೆಗಾಗಿ ಶೇ 50 ರಷ್ಟು ಸೀಟುಗಳು ಮಾತ್ರ ಚಿತ್ರಮಂದಿರದಲ್ಲಿ ಭರ್ತಿ ಇರಬೇಕೆಂದು ಸರ್ಕಾರ ನಿಗದಿಪಡಿಸಿರುವ ನಿಯಮವನ್ನು ಪಾಲಿಸಬೇಕು. ನಾನು ಸಹ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಕಾಯುತ್ತಿರುವೆ. ಬಿಡುಗಡೆಯಾಗುವ ಮೊದಲ ಸಿನಿಮಾವನ್ನು ಪ್ರೇಕ್ಷಕರ ಜತೆ ಕುಳಿತು ನೋಡುವೆ. ಜಾತಿ, ಮತ, ಧರ್ಮ ಹಾಗೂ ಅಂತಸ್ತು ಬಿಟ್ಟು ಎಲ್ಲರೂ ಒಟ್ಟಿಗೆ ಸೇರುವುದು ಚಿತ್ರಮಂದಿರಗಳ ಒಳಗಡೆ ಮಾತ್ರ. ಅಂತಹ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಿರುವುದು ಖುಷಿಯ ವಿಚಾರ’ ಎಂದುನಟ ನೀನಾಸಂ ಸತೀಶ್‌ ಸಂತಸ ವ್ಯಕ್ತಪಡಿಸಿ,ವಿಡಿಯೋ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.