ADVERTISEMENT

ವಸಿಷ್ಠ ಮತ್ತು ಕಿಶೋರ್‌ ಮಧ್ಯೆ ಶೀತಲ ಸಮರ!

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 5:30 IST
Last Updated 29 ನವೆಂಬರ್ 2020, 5:30 IST
ವಸಿಷ್ಠ ಸಿಂಹ
ವಸಿಷ್ಠ ಸಿಂಹ   

ಸ್ಯಾಂಡಲ್‌ವುಡ್‌ನ ಕಿಶೋರ್‌ ಮತ್ತು ವಸಿಷ್ಠ ಸಿಂಹ ಇಬ್ಬರೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪ್ರಯೋಗಶೀಲ ನಟರು. ಈ ಇಬ್ಬರ ನಡುವೆ ಈಗ ಶೀತಲ ಸಮರ! ಹಾಗಂತ ಇಬ್ಬರೂ ವೃತ್ತಿ ಬದುಕಿನಲ್ಲಿ ಶೀತಲ ಸಮರ ನಡೆಸುತ್ತಿಲ್ಲ. ಇನ್ನೂ ಶೀರ್ಷಿಕೆ ಇಡದ ಹೊಸ ಚಿತ್ರವೊಂದರಲ್ಲಿ ಈ ನಟರು ಪೊಲೀಸ್‌ ಅಧಿಕಾರಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತನಿಖಾ ಜಾಡಿನ ಕಥಾಹಂದರ ಕಥೆಯ ಈ ಚಿತ್ರದಲ್ಲಿ ಈ ಇಬ್ಬರು ನಿಭಾಯಿಸುವ ಪಾತ್ರಗಳ ನಡುವೆ ಶೀತಲ ಸಮರ ನಡೆಯಲಿದೆಯಂತೆ.

ಮಲ್ಲೇಶ್ವರದ ಮಹಾಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಜನರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಿಯಲ್ ಎಸ್ಟೆಟ್ ಉದ್ಯಮಿ ಜನಾರ್ಧನ್ ಬಂಡವಾಳ ಹೂಡುತ್ತಿದ್ದಾರೆ. ಜರ್ನಾಧನ್ ಅವರ ಸಹೋದರಿ ಲತಾ ಶಿವಣ್ಣ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಪುತ್ರಿ ಸ್ವೀಕೃತಿ ಕ್ಯಾಮೆರಾಕ್ಕೆ ಚಾಲನೆ ನೀಡಿದರು.

ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರು, ತುಮಕೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಹಾಗೂ ವಿದೇಶಗಳಲ್ಲಿಯೂ ಚಿತ್ರೀಕರಣ ನಡೆಸುವ ಯೋಜನೆ ಚಿತ್ರ ತಂಡದ್ದಾಗಿದೆ.

ADVERTISEMENT

ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ವಚನ್, ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

‘ಪವನ್ ಕುಮಾರ್‌ ಜತೆಗೆ ‘ಲೂಸಿಯಾ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆಗಲೇ ಈ ಚಿತ್ರದ ಕಥೆಯ ಬಗ್ಗೆ ಛಾಯಾಗ್ರಾಹಕ ನವೀನ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದೆ. ಅವರು ವಸಿಷ್ಠ ಅವರನ್ನು ಭೇಟಿ ಮಾಡಿಸಿದ್ದರು. ಅವರಿಂದಲೂ ಒಪ್ಪಿಗೆ ಸಿಕ್ಕಿದ ಮೇಲೆ ಜನಾರ್ಧನ ಅವರ ಪರಿಚಯವಾಯಿತು. ಇದೀಗ ಸಿನಿಮಾ ಸೆಟ್ಟೇರಿದೆ’ ಎಂದು ಮಾತಿಗಾರಂಭಿಸಿದರು ನಿರ್ದೇಶಕ ವಚನ್.

‘ನೈಜ ಘಟನೆಗಳನ್ನು ಆಧರಿಸಿರುವ ಈ ಚಿತ್ರದಲ್ಲಿ ಎರಡೂ ಪಾತ್ರಗಳು ಅಷ್ಟೇ ತೂಕದ್ದಾಗಿರಲಿದೆ. ಕೆಲವು ಪೊಲೀಸ್ ಅಧಿಕಾರಿಗಳನ್ನೂ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ, ಪಾತ್ರಗಳನ್ನು ಸೃಷ್ಟಿಸಿರುವೆ. ಈ ವರ್ಷದ ಜನವರಿಯಲ್ಲಿಯೇ ಈ ಸಿನಿಮಾ ಶುರುವಾಗಬೇಕಿತ್ತು. ಕೊರೊನಾದಿಂದಾಗಿ ಅದು ಸಾಧ್ಯವಾಗಲಿಲ್ಲ. ಸಂಕ್ರಾಂತಿ ಬಳಿಕ ಚಿತ್ರೀಕರಣ ಬಿರುಸಿನಿಂದ ಶುರುವಾಗಲಿದೆ’ ಎಂದು ಮಾತು ವಿಸ್ತರಿಸಿದರು.

‘ಸ್ನೇಹಿತ ಬಳಗವೆಲ್ಲ ಸೇರಿ ಒಂದೊಳ್ಳೆಯ ಪ್ರಾಡಕ್ಟ್ ಮಾಡಬೇಕೆಂದು ಹೊರಟಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಇಬ್ಬರ ನಡುವಿನ ಶೀತಲ ಯುದ್ಧ ಕುತೂಹಲ ಮೂಡಿಸುತ್ತದೆ. ಕಥೆಯ ನಿರೂಪಣೆ ಕೇಳಿದಾಗಲೇ ಚೆನ್ನಾಗಿದೆ ಎಂದೆನಿಸಿತ್ತು. ಹಾಗಾಗಿ ಸಿನಿಮಾ ಒಪ್ಪಿಕೊಂಡೆ. ಒಟಿಟಿ ವೇದಿಕೆ ಬಲಗೊಳ್ಳುತ್ತಿರುವಾಗ ಎಲ್ಲೆಡೆ ಸಲ್ಲುವಂತಹ ಸ್ಕ್ರಿಪ್ಟ್ ರೆಡಿಯಾಗುತ್ತಿದೆ. ನೈಜತೆಗೆ ಹೆಚ್ಚು ಗಮನ ಹರಿಸಿದ್ದೇವೆ’ ಎನ್ನುವುದು ನಟ ವಸಿಷ್ಠ ಸಿಂಹ ಅವರ ಮಾತು.

ಹಾಸ್ಯ ನಟರಾದ ಚಿಕ್ಕಣ್ಣ, ಕಡೂರು ಧರ್ಮಣ್, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರ್ಯ ಮತ್ತು ಮುತ್ತುರಾಜ್ ಹಾಗೂ ಸುಮನ್, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ರೋಚಿತ್ ಅವರ ತಾರಾಬಳಗ ಈ ಚಿತ್ರದಲ್ಲಿದೆ.

ನಾಲ್ಕು ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ನವೀನ್ ಕುಮಾರ್ ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸತೀಶ್ ಕಲಾ ನಿರ್ದೇಶನ, ಅರ್ಜುನ್ ಸಾಹಸ ನಿರ್ದೇಶನವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.