ADVERTISEMENT

ಎಲ್ಲಿಯೂ ನಿಲ್ಲದ ಪಯಣಿಗ: ಕಾಮಿಡಿ ನಟ ಪ್ರಶಾಂತ್ ಸಿದ್ಧಿ

ಕೆ.ಎಚ್.ಓಬಳೇಶ್
Published 18 ಮಾರ್ಚ್ 2020, 19:30 IST
Last Updated 18 ಮಾರ್ಚ್ 2020, 19:30 IST
ಪ್ರಶಾಂತ್‌ ಸಿದ್ಧಿ
ಪ್ರಶಾಂತ್‌ ಸಿದ್ಧಿ   

‘ಬಣ್ಣದಲೋಕದಲ್ಲಿ ಜರ್ನಿ ಆರಂಭಿಸಿದ ದಿನದಿಂದಲೂ ನಾನು ಎಲ್ಲಿಯೂ ನಿಂತಿಲ್ಲ’

–ಕಾಮಿಡಿ ನಟ ಪ್ರಶಾಂತ್‌ ಸಿದ್ಧಿ ಒಂದು ದಶಕದ ವೃತ್ತಿಬದುಕನ್ನು ಒಂದೇ ಸಾಲಿನಲ್ಲಿ ಅರ್ಥೈಸಿದ್ದು ಹೀಗೆ. ‘ಹಾಗೆಂದು ಜೀವನದಲ್ಲಿ ಕಷ್ಟವನ್ನು ಎದುರಿಸಿಲ್ಲ ಎಂದರ್ಥವಲ್ಲ. ಎಲ್ಲಾ ಎಡರುತೊಡರುಗಳನ್ನು ಈಜಿಕೊಂಡೇ ಸಾಗುತ್ತಿರುವೆ. ಚಿತ್ರರಂಗದಲ್ಲಿ ಪೋಕಸ್‌ ಆಗಿರುವುದಿಂದ ನನಗೆ ಹೆಚ್ಚಿನ ತೊಂದರೆಯಾಗಿಲ್ಲ’ ಎಂದು ಮಾತು ವಿಸ್ತರಿಸಿದರು.

ರಂಗಭೂಮಿ ಹಿನ್ನೆಲೆಯ ಪ್ರಶಾಂತ್‌ ಚಿತ್ರರಂಗಕ್ಕೆ ಕಾಮಿಡಿಯನ್ ಆಗಿ ಕಾಲಿಟ್ಟರು. ಹಲವು ಸಿನಿಮಾಗಳಲ್ಲಿ ನಾಯಕನ ಸ್ನೇಹಿತನ ಪಾತ್ರಕ್ಕೂ ಜೀವ ತುಂಬಿರುವ ಅವರು, ಈಗೀಗ ವಿಲನ್‌ ಪಾತ್ರಗಳತ್ತಲೂ ನೋಟ ಹರಿಸಿದ್ದಾರೆ. ಇತ್ತೀಚೆಗೆ ಪಾತ್ರಗಳ ಆಯ್ಕೆಯಲ್ಲಿಯೂ ಸಾಕಷ್ಟು ಚ್ಯೂಸಿಯಾಗಿದ್ದಾರಂತೆ.

ADVERTISEMENT

‘ವೃತ್ತಿಬದುಕಿನ ಆರಂಭದಲ್ಲಿ ಯಾವುದಾದರೊಂದು ಪಾತ್ರ ಸಿಕ್ಕಿದರೆ ಸಾಕೆಂದುಕೊಳ್ಳುತ್ತಿದ್ದೆ. ಆಗ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲವಿತ್ತು. ಈಗ ಒಳ್ಳೆಯ ಕಥೆ, ಪಾತ್ರಗಳಿಗಷ್ಟೇ ನನ್ನ ಆದ್ಯತೆ’ ಎನ್ನುತ್ತಾರೆ. ಪ್ರಸ್ತುತ ಕನ್ನಡ ಚಿತ್ರರಂಗ ದೇಸಿತನವನ್ನು ಮರೆತಿದೆ ಎನ್ನುವ ಬೇಸರ ಅವರಿಗಿದೆ. ಹಳೆಯ ಕಾಲದ ಸಿನಿಮಾಗಳಲ್ಲಿ ಜನಪದದ ಸತ್ವವಿತ್ತು. ಅದು ಪ್ರೇಕ್ಷಕರ ಹೃದಯಕ್ಕೆ ತಟ್ಟುತ್ತಿತ್ತು. ಮತ್ತೆ ಅಂತಹ ವಾತಾವರಣ ಸೃಷ್ಟಿಯಾಗಬೇಕೆಂಬುದು ಅವರ ಹಂಬಲ.

‘ಜನಪದ ಪರದೆ ಮೇಲೆ ಕಾಣಿಸಿಕೊಂಡಾಗ ಆ ಸಿನಿಮಾಕ್ಕೆ ತನ್ನತನದ ಜೊತೆಗೆ ಗಟ್ಟಿತನವೂ ದಕ್ಕುತ್ತದೆ. ತಮಿಳಿನಲ್ಲಿ ಜನಪದದ ಹಿನ್ನೆಲೆಯವರಿಗೆ ಪ್ರಾಧಾನ್ಯ ಹೆಚ್ಚು. ಆ ಸಿನಿಮಾಗಳಲ್ಲಿ ಜನಪದದ ಗಾನ ಇದ್ದೇ ಇರುತ್ತದೆ. ನಮ್ಮಲ್ಲಿ ಒಂದೂ ಜನಪದ ಹಾಡು ಇರುವುದಿಲ್ಲ. ಅದನ್ನು ಬಳಸಿಕೊಳ್ಳಲು ಹಿಂಜರಿಕೆ ಪಡುತ್ತಾರೆ. ಬೀದಿನಾಟಕ, ಜನಪದ ಸಾಹಿತ್ಯದಲ್ಲಿನ ಸತ್ವದ ಅರಿವಾದಾಗ ಯಶಸ್ಸು ಸುಲಭವಾಗಿ ಸಿಗುತ್ತದೆ’ ಎನ್ನುವುದು ಅವರ ನಂಬಿಕೆ.

ಸಿನಿಮಾ ನಿರ್ದೇಶನ ಮಾಡುವುದು ಅವರ ಕನಸಂತೆ. ಜನಪದ ಕಲಾವಿದರನ್ನು ಬಳಸಿಕೊಂಡೇ ಸಿನಿಮಾ ಮಾಡುವ ಇರಾದೆ ಅವರದ್ದು. ನವರಸಗಳು ತುಂಬಿರುವ ಪಾತ್ರ ಮಾಡಬೇಕೆಂಬ ಆಸೆಯೂ ಅವರಲ್ಲಿ ಜೀವಂತವಾಗಿದೆ. ‘ಆದರೆ, ಇಂದಿಗೂ ಅಂತಹ ಪಾತ್ರಗಳು ಹುಡುಕಿಕೊಂಡು ಬಂದಿಲ್ಲ. ತೆರೆಯ ಮೇಲೆ ಯಾವುದಾದರೊಂದು ಸಿನಿಮಾದ ಪಾತ್ರ ನೋಡಿದಾಗ ನಾನು ಆ ಪಾತ್ರವನ್ನೂ ಭಿನ್ನವಾಗಿ ಮಾಡುತ್ತಿದ್ದೆ ಎಂದು ಪ್ರತಿಯೊಬ್ಬ ನಟನಿಗೂ ಅನಿಸುತ್ತದೆ. ಎಲ್ಲರ ಅಂತರಂಗದಲ್ಲಿ ನಟನೆಯ ತುಡಿತ ಇರುತ್ತದೆ. ನಾನೂ ಅದರಿಂದ ಹೊರತಲ್ಲ’ ಎಂದು ವಿವರಿಸುತ್ತಾರೆ.

ದುನಿಯಾ ಸೂರಿ ನಿರ್ದೇಶಿಸಲಿರುವ ‘ಕಾಗೆ ಬಂಗಾರ’ ಸಿನಿಮಾದ ಮೇಲೆ ಅವರಿಗೆ ಭರವಸೆ ಹೆಚ್ಚಿದೆಯಂತೆ. ‘ನಾನು ಆ ಸಿನಿಮಾದಲ್ಲಿ ನಟಿಸಲು ಕಾತುರನಾಗಿದ್ದೇನೆ. ಮುಂದಿನ ತಿಂಗಳಿನಿಂದ ಶೂಟಿಂಗ್‌ ಆರಂಭಿಸೋಣವೆಂದು ಸೂರಿ ಹೇಳಿದ್ದರು. ಕೊರೊನಾ ಭೀತಿಯಿಂದ ವಿಳಂಬವಾಗಲಿದೆ. ಇನ್ನೂ ಸಿನಿಮಾದ ಕಥೆಯ ಬಗ್ಗೆ ನನಗೂ ಹೇಳಿಲ್ಲ. ‘ಪಾಪ್‌ಕಾರ್ನ್‌ ಮಂಕಿ ಟೈಗರ್’ ಚಿತ್ರದಲ್ಲಿ ಆ ಸಿನಿಮಾದ ಪಯಣದ ಹಾದಿಯನ್ನಷ್ಟೇ ತೋರಿಸಿದ್ದಾರೆ’ ಎಂಬುದು ಅವರ ವಿವರಣೆ.

‘ಮುಗಿಲ್‌ಪೇಟೆ’, ‘ಚಾಂಪಿಯನ್‌’ ಚಿತ್ರದಲ್ಲಿನ ತಮ್ಮ ಪಾತ್ರದ ಶೂಟಿಂಗ್‌ ಮುಗಿಸಿರುವ ಅವರು, ‘ಬ್ಲ್ಯಾಂಕ್‌’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದರಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರಂತೆ. ವಿ.ಆರ್‌. ಆದಿತ್ಯ ನಿರ್ದೇಶನದ ತೆಲುಗಿನ ‘ವಾಲಿದ್ದೆರಂ ಮಧ್ಯಂ’ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ತೆಲುಗು ಕಲಿತು ಅವರೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.