ADVERTISEMENT

ಸಂದರ್ಶನ | ಕಾಮಿಡಿ ಬಿಡಲಾರೆ ಎನ್ನುವ ಶರಣ್‌

ಕೆ.ಎಂ.ಸಂತೋಷ್‌ ಕುಮಾರ್‌
Published 23 ಏಪ್ರಿಲ್ 2020, 19:45 IST
Last Updated 23 ಏಪ್ರಿಲ್ 2020, 19:45 IST
ಶರಣ್‌
ಶರಣ್‌   

‘ಅಧ್ಯಕ್ಷ ಇನ್‌ ಅಮೆರಿಕಾ’ ಸಿನಿಮಾ ಯಶಸ್ಸಿನ ನಂತರ ಶರಣ್‌ ನಟಿಸಿರುವ ಬಹು ನಿರೀಕ್ಷೆಯ ಚಿತ್ರ ‘ಅವತಾರ ಪುರುಷ’. ಈ ಚಿತ್ರಕ್ಕೆ ಸಿಂಪಲ್‌ ಸುನಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.ಈ ಚಿತ್ರ ಬಹುತೇಕ ಪೂರ್ಣಗೊಂಡಿದೆ. ಈ ಚಿತ್ರದ ಬಗ್ಗೆ ಶರಣ್‌ಗೂಸಾಕಷ್ಟು ನಿರೀಕ್ಷೆಗಳಿವೆ. ಸದಾ ಬ್ಯುಸಿ ಇರುವ ಶರಣ್‌ ಈ ಚಿತ್ರದ ಬೆನ್ನಲ್ಲೇ ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಸದ್ದಿಲ್ಲದೆ ತಯಾರಿಯನ್ನೂನಡೆಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲೂ ಪ್ರಯೋಗಶೀಲರಾಗಿರುವ ಅವರು ‘ಸಿನಿಮಾ ಪುರವಣಿ’ ನಡೆಸಿದ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಹೋಂಕ್ವಾರಂಟೈನ್‌ ಹೇಗೆ ಕಳೆಯುತ್ತಿದ್ದೀರಿ?

ಮನೆಯಲ್ಲೇ ಇದ್ದು, ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದೇನೆ. ಇದೊಂದು ಅಪರೂಪದ ಸಮಯ. ನನ್ನ ಮಗ, ಮಗಳನ್ನು ಈ ಸಲ ಹೆಚ್ಚು ನೋಡಿದೆ. ಕಥೆಗಾರರೊಟ್ಟಿಗೆ ಫೋನಿನಲ್ಲೇ ಒಂದಿಷ್ಟು ಕಥೆಗಳನ್ನು ಕೇಳುತ್ತಿದ್ದೀನಿ. ಒಂದಿಷ್ಟು ಕಥೆಗಳಿಗೆ ಒಂದು ಸ್ಪಷ್ಟ ರೂಪ ಕೊಡಬೇಕಿತ್ತು. ಆ ಕೆಲಸವನ್ನು ಈಗ ಮಾಡುತ್ತಿದ್ದೇನೆ. ಮೊನ್ನೆಯಷ್ಟೇ ‘ಪ್ಯಾರಾಸೈಟ್‌’, ‘ಜೋಕರ್‌’ ಮತ್ತು ‘ಲವ್‌ ಮಾಕ್ಟೇಲ್‌’ ಸಿನಿಮಾಗಳನ್ನು ನೋಡಿದೆ. ಅಲ್ಲದೆ, ನೋಡಲೇಬೇಕಾಗಿದ್ದ ಸಿನಿಮಾಗಳ ವೀಕ್ಷಣೆಗೆ ಈ ಸಮಯ ಸದುಪಯೋಗ ಮಾಡಿಕೊಳ್ಳುತ್ತಿದ್ದೇನೆ.

ADVERTISEMENT

ಕೊರೊನಾ ತಂದಿರುವ ಬದಲಾವಣೆ ಏನು?

ಲ್ಯಾಂಡ್‌ಲೈನ್‌ ಫೋನ್‌ ಹೆಚ್ಚು ಬಳಕೆಯಲ್ಲಿದ್ದಾಗ, ಯಾರೆ ಕರೆ ಮಾಡಿದರೂ ‘ಹೇಗಿದ್ದೀರಿ?’ ಎಂದು ಮಾತು ಆರಂಭಿಸುತ್ತಿದ್ದರು. ಮೊಬೈಲ್‌ ಜಮಾನದಲ್ಲಿ ಜನರ ಮಾತಿನ ದಾಟಿಯೇ ಬದಲಾಗಿ, ಕರೆ ಮಾಡಿದಾಗ ‘ಎಲ್ಲಿದ್ದೀರಿ?’ ಎಂದು ಕೇಳುವುದುಲೋಕರೂಢಿಯಾಗಿತ್ತು. ಈಗ ಮೊಬೈಲ್‌ಗೆ ಕರೆ ಮಾಡಿದರೂ‘ಹೇಗಿದ್ದೀರಿ?’ ಎಂದು ಕಕ್ಕುಲತೆಯಿಂದ ಕೇಳುವ ಕಾಲ ಬಂದಿದೆ. ಈವರೆಗೆ ನಾವೆಲ್ಲ ಯಾವುದರ ಹಿಂದೆ ಓಡುತ್ತಿದ್ದೆವು, ಯಾಕೆ ಹಾಗೆ ಓಡುತ್ತಿದ್ದೆವು? ಎಂದು ಕೇಳಿಕೊಂಡರೆನಮ್ಮನ್ನು ಪರಿಸ್ಥಿತಿ ಮತ್ತು ಕಾಲವೇ ಆ ರೀತಿ ಹುಚ್ಚು ಕುದುರೆಯಂತೆ ಓಡಿಸುತ್ತಿತ್ತು ಎನಿಸುತ್ತದೆ. ಕೊರೊನಾ ಜನರ ಬದುಕಿನ ಆಲೋಚನೆ ಮತ್ತು ಆದ್ಯತೆಗಳನ್ನೇ ಬದಲಿಸುತ್ತಿದೆ. ಮುಂದಿನ ಬದುಕನ್ನು ಹೆಚ್ಚು ಮೌಲ್ಯಯುತವಾಗಿ ಕಳೆಯಬೇಕೆನ್ನುವ ಮಾತನ್ನು ತುಂಬಾ ಜನರ ಬಾಯಲ್ಲಿ ಕೇಳುತ್ತಿದ್ದೇನೆ. ಕೊರೊನಾ ನಂತರ ಪ್ರತಿ ಮನುಷ್ಯನಿಗೂ ಹೊಸ ಜೀವನ.

ಹೊಸ ಸಿನಿಮಾ ಆಲೋಚನೆ ಹೊಳೆಯಿತಾ?

ಖಂಡಿತಾ! ಒಂದಿಷ್ಟು ಕ್ರಿಯೇಟಿವ್‌, ಒಂದಿಷ್ಟು ಕನ್‌ಸ್ಟ್ರಕ್ಟಿವ್‌, ಒಂದಿಷ್ಟು ಪ್ರಾಡಕ್ಟಿವ್‌ ಆಗಿ ಸಿನಿಮಾ ಮಾಡುವ ಆಲೋಚನೆ ಮತ್ತು ಯೋಜನೆ ಹೊಳೆಯಿತು. ಒಂದು ಆಲೋಚನೆ, ಕಥೆ ಹೊಳೆದ ತಕ್ಷಣ ಸಿನಿಮಾ ಆಗುವುದಿಲ್ಲ. ಅದಕ್ಕೊಂದಿಷ್ಟು ಕೃಷಿಯಾಗಬೇಕು. ಆ ಕೃಷಿಗಾರಿಕೆ ಈ ಅವಧಿಯಲ್ಲಿ ಆಯಿತು.ಒಂದು ಒಳ್ಳೆಯ ಕಥೆ ಚಿತ್ರ ಮಾಡುವ ಹಂತಕ್ಕೆ ಬಂದಿದೆ. ಹಾಗಂಥ ನನ್ನ ಕಾಮಿಡಿ ಜಾನರ್‌ ಬಿಟ್ಟು ಹೋಗಲಾರೆ.

ನಿರ್ದೇಶನ, ನಿರ್ಮಾಣ ಯೋಜನೆ ಏನಾಯಿತು?

ಆ ಕನಸುಗಳು ಹಾಗೆಯೇ ಇವೆ. ಹಾಗಂಥ ನಾನು ಒಬ್ಬ ಈ ಕೆಲಸಕ್ಕೆ ಕೈ ಹಾಕುವುದಿಲ್ಲ. ನಮ್ಮ ಟೀಮ್‌ ಇದೆ. ಸ್ನೇಹ ಬಳಗ ಸೇರಿಯೇ ಮಾಡುತ್ತೇವೆ. ಇದು ಸದ್ಯಕ್ಕಂತೂ ಇಲ್ಲ. ಮುಂದೆ ಆ ದಿನಗಳು ಬರಬಹುದು.ಈಗ ನಟನಾಗಿ ಮಾಡಬೇಕಿರುವುದು ತುಂಬಾ ಇದೆ.

‘ಅವತಾರ ಪುರುಷ’ ಯಾವಾಗ ತೆರೆಗೆ?

ಒಂದೆರಡು ಹಾಡು ಮತ್ತು ಒಂದಿಷ್ಟು ಟಾಕಿ ಭಾಗ ಮಾತ್ರ ಚಿತ್ರೀಕರಣಕ್ಕೆ ಬಾಕಿ ಇದೆ. ಕೊರೊನಾ ಲಾಕ್‌ ಡೌನ್‌ ಘೋಷಣೆಯಾಗದಿದ್ದರೆ ಈ ಚಿತ್ರವನ್ನು ಇದೇ ತಿಂಗಳು ತೆರೆಗೆ ತರುವ ಸಿದ್ಧತೆಯಲ್ಲಿದ್ದೆವು. ಈಗ ಇನ್ನೆರಡು ತಿಂಗಳು ಯೋಜನೆಯನ್ನು ಮುಂದೆ ಹಾಕಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.