ADVERTISEMENT

ಮತ್ತೊಂದು ‘ಅಮೃತವರ್ಷಿಣಿ’

ಪದ್ಮನಾಭ ಭಟ್ಟ‌
Published 10 ಅಕ್ಟೋಬರ್ 2018, 19:30 IST
Last Updated 10 ಅಕ್ಟೋಬರ್ 2018, 19:30 IST
‘ಅಮೃತವರ್ಷಿಣಿ’ ಚಿತ್ರದ ದೃಶ್ಯ
‘ಅಮೃತವರ್ಷಿಣಿ’ ಚಿತ್ರದ ದೃಶ್ಯ   

ದಿನೇಶ್ ಬಾಬು ಅವರ ನೆಚ್ಚಿನ ಶಿಷ್ಯ ಶಿವಪ್ರಭು ವಿಶಿಷ್ಟವಾದ ಗುರುಕಾಣಿಕೆ ಸಲ್ಲಿಸಲು ಸಜ್ಜಾಗಿದ್ದಾರೆ.ದಿನೇಶ್ ಬಾಬು ನಿರ್ದೇಶಿಸಿದ್ದ ‘ಅಮೃತವರ್ಷಿಣಿ’ 1997ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಈಗ ಶಿವಪ್ರಭು ಅದೇ ಶೀರ್ಷಿಕೆಯನ್ನಿಟ್ಟುಕೊಂಡು ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೇ ತಿಂಗಳ 19ಕ್ಕೆ ಚಿತ್ರದ ಮುಹೂರ್ತವೂ ನಡೆಯಲಿದೆ.

ಶಿವಪ್ರಭು

‘ಅಮೃತವರ್ಷಿಣಿ ಮತ್ತು ಸುಪ್ರಭಾತ ಈ ಎರಡೂ ನನ್ನ ನೆಚ್ಚಿನ ಸಿನಿಮಾಗಳು. ನಾನು ಮಾಡಿಕೊಂಡಿರುವ ಕಥೆಗೂ ಅಮೃತವರ್ಷಿಣಿ ಎಂಬ ಹೆಸರೇ ಸರಿಯಾಗಿ ಹೊಂದಿಕೊಳ್ಳುತ್ತದೆ. ಹಳೆಯ ಸಿನಿಮಾದ ಹೆಸರನ್ನೇ ಯಾಕೆ ಇಟ್ಟುಕೊಂಡಿರಿ ಎಂದು ಕೇಳುವವರೂ ಸಿನಿಮಾವನ್ನು ನೋಡಿದ ಮೇಲೆ ಇದೇ ಸರಿಯಾದ ಹೆಸರು ಎಂದು ಹೇಳುತ್ತಾರೆ’ ಎನ್ನುತ್ತಾರೆ ಶಿವಪ್ರಭು. ಇದೇ ಕಾರಣದಿಂದ ‘ತುಂತುರು ಅಲ್ಲಿ ನೀರ ಹಾಡು’ ಎಂಬ ಅಡಿಶೀರ್ಷಿಕೆಯನ್ನೂ ಇಟ್ಟುಕೊಂಡಿದ್ದಾರೆ.

‘ನನಗೆ ಹೊಡೆದು, ಬೈದು, ಕಾಸು ಕೊಟ್ಟು, ಊಟ ಕೊಟ್ಟು ತಿದ್ದಿದವರು ದಿನೇಶ್ ಬಾಬು. ಅವರ ಬಳಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಹಾಗಾಗಿ ಈಗ ನಾನು ಮಾಡುತ್ತಿರುವ ಸಿನಿಮಾ ಅವರಿಗೆ ನಾನು ನೀಡುವ ಗುರುಕಾಣಿಕೆ’ ಎಂದು ತುಸು ಭಾವುಕವಾಗಿಯೇ ನೆನೆಯುತ್ತಾರೆ ಶಿವಪ್ರಭು.

ADVERTISEMENT

‘ಪರಬ್ರಹ್ಮ’ ಚಿತ್ರ ನಿರ್ಮಿಸಿದ್ದ ಸುಂದರ್‌ ಜತೆಗೆ ಸ್ವತಃ ಶಿವಪ್ರಭು ಅವರೂ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅವರಿಗೆ ಹಲವು ಆಪ್ತಸ್ನೇಹಿತರ ಬೆಂಬಲವೂ ದೊರಕಿದೆ.

ಯಶಸ್‌ ಸೂರ್ಯ ಈ ಚಿತ್ರದ ನಾಯಕ. ಯಶಸ್‌ ಸೂರ್ಯ ಅವರಿಗೆ ಶಿವಪ್ರಭು ಹತ್ತು ವರ್ಷಗಳ ಹಿಂದೆಯೇ ಒಂದು ರೂಪಾಯಿ ಅಡ್ವಾನ್ಸ್‌ ಕೊಟ್ಟು ‘ನಿಮ್ಮ ಜತೆ ಒಂದು ಸಿನಿಮಾ ಮಾಡುತ್ತೇನೆ’ ಎಂದು ಮಾತುಕೊಟ್ಟಿದ್ದರಂತೆ. ಆದರೆ ಕಾಲ ಕೂಡಿಬಂದಿರಲಿಲ್ಲ. ಈಗ ಇಬ್ಬರೂ ಒಟ್ಟಾಗಿದ್ದಾರೆ. ಜತೆಗೆ ‘ಮಾರ್ಚ್‌ 22’, ‘ಕೃಷ್ಣ ತುಳಸಿ’ ಚಿತ್ರಗಳಲ್ಲಿ ನಟಿಸಿದ್ದ ಮೇಘಶ್ರೀ ನಾಯಕಿಯಾಗಿ ನಟಿಸಲಿದ್ದಾರೆ.

ಚಿತ್ರದ ಶೀರ್ಷಿಕೆಯನ್ನಷ್ಟೇ ಅಲ್ಲ, ಹಿಂದಿನ ಅಮೃತವರ್ಷಿಣಿ ಚಿತ್ರದ ಹಾಡುಗಳ ಟ್ಯೂನ್‌ ಅನ್ನೂ ಈ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಅಲ್ಲಲ್ಲಿ ಬಳಸಿಕೊಳ್ಳುವ ಯೋಚನೆಯೂ ಅವರಿಗಿದೆ. ಹಾಗೆಯೇ ಜೆಸ್ಸಿಗಿಫ್ಟ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಒಂದೊಂದು ಹಾಡೂ ಜನರಿಗೆ ಇಷ್ಟವಾಗುವಂತೆ ನೋಡಿಕೊಳ್ಳುವ ಮುತುವರ್ಜಿಯನ್ನೂ ನಿರ್ದೇಶಕರು ಅವರ ಹೆಗಲಿಗೇರಿಸಿದ್ದಾರೆ. ಒಟ್ಟಾರೆ ಅದೇ ಅಮೃತವರ್ಷಿಣಿಯ ನೆನಪಿನಲ್ಲಿ ಹೊಸ ರುಚಿಯ ಸಿನಿಮಾ ಮಾಡುವುದು ಅವರ ಉದ್ದೇಶ.

ಕಥೆ ಹೇಳಿದರೆ ಸ್ವಾರಸ್ಯ ಇರಲ್ಲ

ಇದು ಯಾವ ಬಗೆಯ ಚಿತ್ರ ಎಂದು ಕೇಳಿದರೆ ‘ಕಥೆ ಹೇಳಿದರೆ ಸ್ವಾರಸ್ಯ ಇರುವುದಿಲ್ಲ’ ಎಂದು ನಗುತ್ತಾರೆ. ‘ಲವ್‌ ಸ್ಟೋರಿಯಂತೂ ಹೌದು, ಜತೆಗೆ ಸಸ್ಪೆನ್ಸ್‌ ನಿರೀಕ್ಷೆ ಮಾಡುತ್ತೀರಾದರೆ ಅದೂ ಇದೆ, ಆ್ಯಕ್ಷನ್ ಬೇಕೆನ್ನುವವರಿಗೆ ನಾಲ್ಕು ಫೈಟ್‌ಗಳಿವೆ. ಮರ್ಡರ್ ಮಿಸ್ಟರಿಯ ಅಂಶಗಳನ್ನೂ ಒಳಗೊಂಡಿದೆ’ ಎಂದು ಭಿನ್ನ ಅಭಿರುಚಿಯ ಪ್ರೇಕ್ಷಕರನ್ನು ಒಟ್ಟಿಗೇ ಚಿತ್ರಮಂದಿರಕ್ಕೆ ಕರೆತರುವ ಯೋಚನೆಯನ್ನು ಹಂಚಿಕೊಳ್ಳುತ್ತಾರೆ.

ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರುಗಳಲ್ಲಿ 35 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಮಳೆ, ಮಂಜು, ಹಸಿರು ಈ ಚಿತ್ರದ ಹಿನ್ನೆಲೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಳ್ಳಲಿವೆಯಂತೆ.

‘ಚಿತ್ರದ ಮುಹೂರ್ತ ಸಮಾರಂಭದಲ್ಲಿ ದೊಡ್ಡದೊಂದು ಅಚ್ಚರಿ ಇರಲಿದೆ. ಅದು ಹಿಂದೆಂದೂ ಆಗದೇ ಇರುವ ರೀತಿಯ ಅಚ್ಚರಿ’ ಎಂದು ಕುತೂಹಲದ ಒಗ್ಗರಣೆ ಹಾಕುವ ಶಿವಪ್ರಭು ‘ಅಂಥದ್ದೇನು ಅಚ್ಚರಿ?’ ಎಂದರೆ ಕಾದುನೋಡಿ ಎಂದು ನಗುತ್ತಾರೆ ಶಿವಪ್ರಭು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.