ಸುಮಾರು 20 ವರ್ಷಗಳ ಹಿಂದೆ ತೆರೆಕಂಡಿದ್ದ ಎ.ಎಂ.ಆರ್.ರಮೇಶ್ ನಿರ್ದೇಶನದ ‘ಸೈನೈಡ್’ ಸಿನಿಮಾ ಮೇ 23ರಂದು ಮರುಬಿಡುಗಡೆಯಾಗಲಿದೆ.
ಅಕ್ಷಯ್ ಕ್ರಿಯೇಷನ್ಸ್‌ನಡಿ ಕೆಂಚಪ್ಪ ಗೌಡ ಹಾಗೂ ಎಸ್.ಇಂದುಮತಿ ನಿರ್ಮಿಸಿದ್ದ ಈ ಚಿತ್ರದಲ್ಲಿ ತಾರಾ, ರಂಗಾಯಣ ರಘು, ರವಿ ಕಾಳೆ, ಮಾಳವಿಕಾ, ಅವಿನಾಶ್, ಉಷಾ ಭಂಡಾರಿ ಮುಂತಾದವರು ಅಭಿನಯಿಸಿದ್ದರು. 2006 ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ನಡೆದ ಘಟನೆಯನ್ನು ಆಧರಿಸಿತ್ತು.
‘ಸೂಕ್ಷ್ಮವಾದ ವಿಷಯ ಕುರಿತು ಸಿನಿಮಾ ಮಾಡುವಾಗ ಆತಂಕವಿತ್ತು. ಆದರೆ ಬಿಡುಗಡೆ ಬಳಿಕ ಜನರು ಸಿನಿಮಾವನ್ನು ಸ್ವೀಕರಿಸಿದ ರೀತಿ ಕಂಡು ಆತಂಕ ದೂರವಾಯಿತು. ತಾರಾ ಅವರ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಿತ್ರವಿದು. ಈ ಚಿತ್ರವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ ಜೊತೆಗೆ ಹತ್ತು ನಿಮಿಷ ಸಿನಿಮಾ ಅವಧಿಯನ್ನು ಹೆಚ್ಚಿಸಿ ಮರು ಬಿಡುಗಡೆ ಮಾಡುತ್ತಿದ್ದೇವೆ. ತಮಿಳು ಆವೃತ್ತಿಗಾಗಿ ಚಿತ್ರೀಕರಣ ಮಾಡಿದ್ದ ದೃಶ್ಯಗಳನ್ನು ಕನ್ನಡಕ್ಕೆ ಸೇರಿಸಲಾಗಿದೆ. ‘ಸೈನೈಡ್’ ಚಿತ್ರದ ಪ್ರೀಕ್ವೆಲ್ ಬರಲಿದ್ದು, ಸ್ಕ್ರಿಪ್ಟ್ ಸಿದ್ಧವಾಗಿದೆ’ ಎಂದಿದ್ದಾರೆ ಎ.ಎಂ.ಆರ್. ರಮೇಶ್.
‘ನಾನು ಚಿತ್ರದಲ್ಲಿ ‘ಮೃದುಲ’ ಎಂಬ ಮುಗ್ಧ ಹೆಣ್ಣಿನ ಪಾತ್ರ ನಿರ್ವಹಿಸಿದ್ದೆ. ಇಪ್ಪತ್ತು ವರ್ಷಗಳ ಹಿಂದೆ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ‘ಮೃದುಲ’ ಅವರನ್ನು ಭೇಟಿ ಮಾಡಲು ಪ್ರಯತ್ನಪಟ್ಟಿದೆ. ಆದರೆ ಆಗಿರಲಿಲ್ಲ. ಅವರ ಸ್ವಭಾವವನ್ನು ಅವರ ಪತಿಯಿಂದ ತಿಳಿದುಕೊಂಡು ನಟಿಸಿದ್ದೆ. ಈ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಚಿತ್ರದ ತುಣುಕು ನೋಡಿ, ಚಿತ್ರವನ್ನು ವೀಕ್ಷಿಸುತ್ತೇನೆ ಎಂದಿದ್ದಾರೆ’ ಎಂದರು ನಟಿ ತಾರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.