ADVERTISEMENT

ಕನ್ನಡ ಚಿತ್ರಗಳ ಪರ ದರ್ಶನ್‌ ಗಟ್ಟಿಧ್ವನಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 12:47 IST
Last Updated 4 ಫೆಬ್ರುವರಿ 2020, 12:47 IST
‘ಜಂಟಲ್‌ಮನ್’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮತ್ತು ಪ್ರಜ್ವಲ್‌ ದೇವರಾಜ್
‘ಜಂಟಲ್‌ಮನ್’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮತ್ತು ಪ್ರಜ್ವಲ್‌ ದೇವರಾಜ್   

ನಟ ದರ್ಶನ್ ಅವರ ಮಾತಿನ ವರಸೆ ಗಾಂಧಿನಗರದ ಉಳಿದ ನಟರಿಗಿಂತ ಭಿನ್ನ. ಪರಭಾಷೆಯ ಸಿನಿಮಾಗಳ ಮೇಲೆ ತೋರುವ ಪ್ರೀತಿಯು ಕನ್ನಡ ಸಿನಿಮಾಗಳ ಮೇಲೂ ಇರಲಿ ಎಂಬುದು ಅವರ ಮಾತಿನ ಹಿಂದಿರುವ ಕಳಕಳಿ. ಕನ್ನಡ ಚಿತ್ರಗಳ ಪರವಾಗಿ ಗಟ್ಟಿ ಧ್ವನಿ ಮೊಳಗಿಸುವಲ್ಲಿಯೂ ಅವರು ಹಿಂದಡಿ ಇಟ್ಟವರಲ್ಲ. ಮತ್ತೊಮ್ಮೆ ಅವರ ಈ ಮಾತಿಗೆ ಸಾಕ್ಷಿಯಾಗಿದ್ದು, ಜಡೇಶ್‌ಕುಮಾರ್‌ ನಿರ್ದೇಶನದ ಪ್ರಜ್ವಲ್‌ ದೇವರಾಜ್‌ ಮತ್ತು ನಿಶ್ವಿಕಾ ನಾಯ್ಡು ನಟನೆಯ ‘ಜಂಟಲ್‌ಮನ್’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ.

‘ಕನ್ನಡದಲ್ಲಿಯೂ ಒಳ್ಳೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕನ್ನಡಿಗರು ಅಂಡು ಬಗ್ಗಿಸಿಕೊಂಡು ಈ ಸಿನಿಮಾಗಳನ್ನು ನೋಡಿದಾಗಲಷ್ಟೇ ಕನ್ನಡ ಚಿತ್ರರಂಗದ ಉಳಿವು ಸಾಧ್ಯ’ ಎಂದು ಖಾರವಾಗಿಯೇ ಹೇಳಿದರು ದರ್ಶನ್. ‘ಪರಭಾಷೆಯ ಸಿನಿಮಾಗಳಿಗಷ್ಟೇ ಪ್ರೋತ್ಸಾಹ ಕೊಡಬೇಡಿ. ಕನ್ನಡ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿ. ತೆಲುಗು ಮತ್ತು ತಮಿಳಿನಲ್ಲಿ ದೊಡ್ಡ ದೊಡ್ಡ ಸಿನಿಮಾ ಮಾಡುತ್ತಾರೆಂದು ನನಗೂ ಹಲವರು ಹೇಳುತ್ತಾರೆ. ಕನ್ನಡಿಗರು ಈಗ ಎದ್ದೇಳುವ ಕಾಲ ಬಂದಿದೆ. ನಮ್ಮವರಿಗೆ ಬೆನ್ನುತಟ್ಟುವ‌‌ ಕೆಲಸ ಮಾಡುವ ತನಕ ನಾವು ಉದ್ಧಾರ ಆಗುವುದಿಲ್ಲ’ ಎಂದು ಮಾತು ವಿಸ್ತರಿಸಿದರು.

ಬಳಿಕ ಅವರ ಮಾತು ಪಕ್ಕದಲ್ಲಿ ನಿಂತಿದ್ದ ನಟ ಸಂಚಾರಿ ವಿಜಯ್ ಅವರತ್ತ ಹೊರಳಿತು. ‘ಸಂಚಾರಿ ವಿಜಯ್‌ ದೊಡ್ಡ‌ನಟ. ಅವರು ನಟಿಸಿದ ‘ನಾನು ಅವನಲ್ಲ ಅವಳು’ ಸಿನಿಮಾ ನೋಡಿ ನಾನು ಫಿದಾ ಆದೆ. ಅಂತಹ ಸಿನಿಮಾ ಪರಭಾಷೆಯಲ್ಲಿ ನಿರ್ಮಾಣವಾದರೆ ನಾವು ಅವರಿಗೆ ಪ್ರೋತ್ಸಾಹ ನೀಡುತ್ತೇವೆ. ಜೊತೆಗೆ ದುಡ್ಡು ಕೊಟ್ಟು ಕಳುಹಿಸುತ್ತೇವೆ. ನಿಜವಾಗಿಯೂ ಇದು ಅಸಹ್ಯ ಅನಿಸುತ್ತದೆ. ನಮ್ಮವರ ಪ್ರತಿಭೆ ನೋಡಿಯೂ ಅವರನ್ನು ‌ದೂರ ಸರಿಸುವುದು ಸರಿಯಲ್ಲ’ ಎಂಬ ಅವರ ಮಾತಿನಲ್ಲಿ ವಿಷಾದವಿತ್ತು.

ADVERTISEMENT

ಇತ್ತೀಚೆಗೆ ತಮಿಳಿನ ನಟರೊಬ್ಬರ ಹೇಳಿಕೆ ಗಮನಿಸಿದೆ. ಇಲ್ಲಿ ಅವರ ಹೆಸರು ಪ್ರಸ್ತಾಪಿಸುವುದಿಲ್ಲ. ಅವರು ಸಂಚಾರಿ ವಿಜಯ್ ಅವರಷ್ಟು ದೊಡ್ಡನಟ ಕೂಡ ಅಲ್ಲ. ಅಂತಹವರಿಗೆ ಕನ್ನಡಿಗರು ಪ್ರೋತ್ಸಾಹ ‌ನೀಡುತ್ತಾರೆ. ಪತ್ರಿಕೆಗಳು ಪರಭಾಷೆಯ ಸಿನಿಮಾಗಳು, ಕಲಾವಿದರ ಬಗ್ಗೆ ಸಾಕಷ್ಟು‌ ಬರೆಯುತ್ತಿವೆ. ವಿದ್ಯುನ್ಮಾನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ, ನಮ್ಮಂತೆ ಅವರು‌ ನಿಮಗೆ ಸಂದರ್ಶನಕ್ಕೆ ಸಿಗುತ್ತಾರೆಯೇ’ ಎಂಬ ಪ್ರಶ್ನೆ ಮುಂದಿಟ್ಟರು.

ಗುರುದೇಶಪಾಂಡೆ ಒಬ್ಬ ನಿರ್ದೇಶಕರಾಗಿ ‘ಜಂಟಲ್‌ಮನ್‌’ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಮಾನವ‌ ಕಳ್ಳಸಾಗಣೆ ಮತ್ತು ಸ್ಲೀಪಿಂಗ್ ಬ್ಯೂಟಿ‌ ಸಿಂಡ್ರೋಮ್(ಹದಿನೆಂಟು ಗಂಟೆಗಳ ಕಾಲ ನಿದ್ದೆ‌ ಮಾಡುವ ರೋಗ) ವಿಷಯವಿಟ್ಟುಕೊಂಡು‌ ಈ ಚಿತ್ರ ನಿರ್ಮಿಸಲಾಗಿದೆ. ಇಂತಹ ಒಳ್ಳೆಯ ಸಿನಿಮಾಗಳಿಗೆ‌ ಕನ್ನಡಿಗರು ಪ್ರೋತ್ಸಾಹ‌ ನೀಡಬೇಕು ಎಂದು ಕೋರಿದರು ದರ್ಶನ್. ಈ ಚಿತ್ರ ಫೆ. 7ರಂದು ತೆರೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.