ADVERTISEMENT

ಮಾನಸಿಕ ಖಿನ್ನತೆ ವಿರುದ್ಧ ಜಾಗೃತಿ: ದೀಪಿಕಾ ‘ ದುಬಾರಾಪೂಛೊ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 12:44 IST
Last Updated 3 ಜುಲೈ 2020, 12:44 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡ ನಂತರ ಮಾನಸಿಕ ಆರೋಗ್ಯ, ಖಿನ್ನತೆ ಬಗ್ಗೆ ಹೆಚ್ಚಿನ ನಟ– ನಟಿಯರು ಟ್ವೀಟ್‌, ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

ಈಗ ಆ ಸಾಲಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೂಡ ಇದ್ದಾರೆ. ಇತ್ತೀಚೆಗೆ ಅವರು ಮಾನಸಿಕ ಖಿನ್ನತೆಗೆ ಸಂಬಂಧಿಸಿಂತೆ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ಅದರಲ್ಲಿ ‘ನಾನೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಅಂಥ ಸಂದರ್ಭದಲ್ಲಿ ಇನ್ನೊಬ್ಬರ ಸಹಾಯ ಪಡೆಯುವುದು ತುಂಬ ಮುಖ್ಯ’ ಎಂದು ಹೇಳಿಕೊಂಡಿದ್ದರು.

ಈಗ ದೀಪಿಕಾ ‘ದುಬಾರಾಪೂಛೊ’ (dobarapoocho) ಎಂಬ ಅಭಿಯಾನ ಆರಂಭಿಸಿದ್ದಾರೆ. ಇದರ ಮೂಲಕ ಮಾನಸಿಕ ಸಮಸ್ಯೆ, ಖಿನ್ನತೆಯಿಂದ ಬಳಲುತ್ತಿರುವವರನ್ನು ಹೇಗೆ ಸಂತೈಸಬೇಕು. ಸ್ನೇಹಿತರು, ಪ್ರೀತಿಪಾತ್ರರು, ಅವರ ಮಾನಸಿಕ ಸ್ಥಿತಿಯನ್ನು ಹೇಗೆ ಅರ್ಥ ಮಾಡಿಕೊಂಡು ಸ್ಪಂದಿಸಬೇಕು ಎಂಬಂಥ ಹಲವು ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ADVERTISEMENT

ದೀಪಿಕಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ‘ವ್ಯಕ್ತಿಯೊಬ್ಬ ಬಾಹ್ಯವಾಗಿ ಆರೋಗ್ಯವಂತನಂತೆ ಕಂಡರೂ, ಆಂತರ್ಯದಲ್ಲಿ ಮಾನಸಿಕವಾಗಿ ಬಳಲುತ್ತಿರುವ ಸಾಧ್ಯತೆ ಇರುತ್ತದೆ. ಆತ್ಮೀಯರು ಅಂಥವರನ್ನು ಗುರುತಿಸಿ, ಅವರನ್ನು ಬೆಂಬಲಿಸಬೇಕು. ಅವರ ಮನಸ್ಸಿನ ನೋವನ್ನು ಆಲಿಸಬೇಕು. ಅವರಿಗೆ ಧೈರ್ಯ ತುಂಬಬೇಕು’ ಎಂದು ಹೇಳಿದ್ದಾರೆ.

ಕಳೆದ ವಾರವೂ ದೀಪಿಕಾ ಪಡುಕೋಣೆ ‘ಆತ್ಮಹತ್ಯೆ ತಡೆಗಟ್ಟುವಿಕೆ’ ಕುರಿತಾದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿ ದ್ದರು. ‘ಐದು ವರ್ಷದ ಹಿಂದೆ ನಾನು ಇಂತಹದೇ ಪರಿಸ್ಥಿತಿ ಎದುರಿಸಿದ್ದೆ. ಸುಶಾಂತ್‌ ಆತ್ಮಹತ್ಯೆಯಂತಹ ಪ್ರಕರಣಗಳು ನಮ್ಮ ಸಮಾಜದಲ್ಲಿ ಜನರು ಎದುರಿಸುತ್ತಿರುವ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿವೆ’ ಎಂದು ಹೇಳಿದ್ದರು.

ದೀಪಿಕಾ 2015ರಲ್ಲಿ ‘ಲಿವ್‌ ಲವ್‌ ಲಾಫ್‌’ ಎಂಬ ಪ್ರತಿಷ್ಠಾನವನ್ನು ಆರಂಭಿಸಿದ್ದು, ಇದರ ಮೂಲಕ ಯುವಜನತೆಗೆ, ಖಿನ್ನತೆಯಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.ದೀಪಿಕಾ ಕಾರ್ಯಕ್ಕೆ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಪ್ರಶಸ್ತಿ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.