ADVERTISEMENT

ಧ್ರುವ ಸರ್ಜಾಗೆ ಜೋಗಿ ಪ್ರೇಮ್‌ ಆ್ಯಕ್ಷನ್‌ ಕಟ್‌!

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 7:31 IST
Last Updated 24 ಆಗಸ್ಟ್ 2021, 7:31 IST
ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್‌
ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್‌   

‘ಪೊಗರು’ ಚಿತ್ರದ ಬಳಿಕ ನಟ ಧ್ರುವ ಸರ್ಜಾ ಅವರು ನಿರ್ದೇಶಕ ಎ.ಪಿ.ಅರ್ಜುನ್‌ ನಿರ್ದೇಶನದ ‘ಮಾರ್ಟಿನ್‌’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ಈಗಾಗಲೇ ಗಾಂಧಿನಗರದಲ್ಲಿ ಸುದ್ದಿಯಾಗಿದೆ. ಇದಾದ ನಂತರದಲ್ಲಿ ಆ್ಯಕ್ಷನ್‌ ಪ್ರಿನ್ಸ್‌ನ ಮುಂದಿನ ಪ್ರೊಜೆಕ್ಟ್‌ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.

ಇದಕ್ಕೆ ಈಗ ಉತ್ತರ ದೊರೆತಿದ್ದು, ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಾಣದ ನಾಲ್ಕನೇ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕರಾಗಿ ಕಾಣಿಸಿಕೊಳ್ಳಲಿದ್ದು, ನಟ, ನಿರ್ದೇಶಕ ಜೋಗಿ ಪ್ರೇಮ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದು ಪ್ರೇಮ್‌ ಅವರ ನಿರ್ದೇಶನದ 9ನೇ ಚಿತ್ರವಾಗಿರಲಿದೆ. ಅರ್ಜುನ್‌ ನಿರ್ದೇಶನದ ‘ಅದ್ದೂರಿ’ ಮುಖಾಂತರ ಧ್ರುವ 2012ರಲ್ಲಿ ಚಂದನವನಕ್ಕೆ ಪ್ರವೇಶಿಸಿದ್ದರು. ಇದಾದ ನಂತರ ‘ಬಹದ್ಧೂರ್‌’, ‘ಭರ್ಜರಿ’, ‘ಪೊಗರು’ ಚಿತ್ರದಲ್ಲಿ ಧ್ರುವ ಮಿಂಚಿದ್ದರು. ‘ಮಾರ್ಟಿನ್‌’ ಬಳಿಕ ಇದು ಧ್ರುವ ಸರ್ಜಾ ಅವರ ಆರನೇ ಸಿನಿಮಾ ಆಗಿರಲಿದೆ. ‌

‘ಯುದ್ಧದಲ್ಲಿ ಹುತಾತ್ಮನಾದರೆ ಸ್ವರ್ಗವು ಆತನನ್ನು ಸ್ವಾಗತಿಸುತ್ತದೆ. ಯುದ್ಧದಲ್ಲಿ ಜಯಿಸಿದರೆ ಸಿಂಹಾಸನವು ಅವನಿಗಾಗಿ ಕಾಯುತ್ತದೆ. ಆದ್ದರಿಂದ ಯುದ್ಧ ಯಾವತ್ತೂ ಒಳ್ಳೆಯದೇ. ಯುದ್ಧ ಈಗ ಪ್ರಾರಂಭ’ ಎಂದು ಆಗಸ್ಟ್‌ 9ರಂದು ಈ ಸಿನಿಮಾದ ಕುರಿತು ಪ್ರೇಮ್‌ ಟ್ವೀಟ್‌ನಲ್ಲಿ ಹೇಳಿದ್ದರು. ‘ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ. ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ’ ಎಂದು ಪ್ರೇಮ್‌ ಮಂಗಳವಾರ(ಆ.24) ಟ್ವೀಟ್‌ ಮಾಡಿದ್ದಾರೆ. ‘ಶೀಘ್ರದಲ್ಲೇ ಶೀರ್ಷಿಕೆ ಅನಾವರಣಗೊಳಿಸಲಿದ್ದೇವೆ’ ಎಂದು ಚಿತ್ರತಂಡವು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.