ADVERTISEMENT

ಡಾಕ್ಟರೇಟ್‌ ಪಾರ್ಟಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:30 IST
Last Updated 21 ಫೆಬ್ರುವರಿ 2019, 19:30 IST
ಕರ್ನಾಟಕ ಚಲನಚಿತ್ರ ಅಕಾಡೆಮಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ.ಆರ್.ರಾಮದಾಸ್ ನಾಯ್ಡು ಅವರು ಮಾತನಾಡಿದರು. ಪತ್ರಕರ್ತ ಬಿ ಗಣಪತಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ Kannada Film Director P R Ramadas Naidu speaking at the "Belli Hejje" programme organised by Karnataka Chalanachitra Academy at Gandhi Bhavan in Bengaluru on Saturday. (Right) Journalist B Ganapathi seen. Photo by Satish Badiger
ಕರ್ನಾಟಕ ಚಲನಚಿತ್ರ ಅಕಾಡೆಮಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ.ಆರ್.ರಾಮದಾಸ್ ನಾಯ್ಡು ಅವರು ಮಾತನಾಡಿದರು. ಪತ್ರಕರ್ತ ಬಿ ಗಣಪತಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ Kannada Film Director P R Ramadas Naidu speaking at the "Belli Hejje" programme organised by Karnataka Chalanachitra Academy at Gandhi Bhavan in Bengaluru on Saturday. (Right) Journalist B Ganapathi seen. Photo by Satish Badiger   

ರಾಮದಾಸ ನಾಯ್ಡು, ಓಹ್‌ ಕ್ಷಮಿಸಿ, ಡಾ.ರಾಮದಾಸ್‌ ನಾಯ್ಡು ಸ್ನೇಹಿತರ ಮಧ್ಯೆ ಸಂತೋಷದಿಂದ ಬೀಗುತ್ತಿದ್ದರು. ಕನ್ನಡ ಚಿತ್ರರಂಗದ ಬಹುಮುಖ್ಯರೆಲ್ಲರೂ ಅಲ್ಲಿದ್ದರು. ಗಿರೀಶ್‌ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ಲಿಂಗದೇವರು ಹಳೆಮನೆ, ಬಸಂತ್‌ ಕುಮಾರ್‌ ಪಾಟೀಲ್‌, ಕೆ.ವೈ.ನಾರಾಯಣಸ್ವಾಮಿ ಮುಂತಾಗಿ. ಸಂತೋಷಕ್ಕೆ ಕಾರಣ– ರಾಮದಾಸ್‌ ನಾಯ್ಡು ಅವರು ಬರೆದ ‘ಕನ್ನಡ ಸಿನಿಮಾ ಚಾರಿತ್ರಿಕ ನೋಟ: ಜಾಗತಿಕ ಪ್ರೇರಣೆ ಮತ್ತು ಪ್ರಭಾವಗಳನ್ನು ಅನುಲಕ್ಷಿಸಿ’ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್‌ ಬಂದಿರುವುದು.

ಅದು ರಾತ್ರಿಯ ಪಾರ್ಟಿ. ಹಾಲ್‌ ಒಳಗೆ ಕಾಲಿಟ್ಟೊಡನೆ ಕಾಣಿಸಿದ್ದು ಪಾರ್ಟಿ ಮೂಡ್‌ನಲ್ಲಿದ್ದ ಡಾ.ಸಿದ್ದಲಿಂಗಯ್ಯ. (ಇತ್ತೀಚಿಗೆ ಪತ್ರಿಕೆಗಳಲ್ಲಿ ಸುದ್ದಿಯಾದ ‘ಡೆಲ್ಲಿ ಪಾರ್ಟಿ’ ಒಮ್ಮೆಲೆ ನೆನಪಾದದ್ದು ಸುಳ್ಳಲ್ಲ.) ಊಟ, ತಿಂಡಿ, ದ್ರವಾಹಾರದ ಮಧ್ಯೆಯೇ ಅಭಿನಂದನಾ ಭಾಷಣಗಳೂ ನಡೆದವು. ಮುಖ್ಯ ಭಾಷಣ ಸಿದ್ಧಲಿಂಗಯ್ಯ ಅವರದ್ದೇ. ಪಿಎಚ್‌ಡಿಗಳ ಕುರಿತು ಚಿತ್ರವಿಚಿತ್ರ ಘಟನೆಗಳನ್ನು ನೆನಪಿಸಿದ ಅವರು ಸಭಿಕರನ್ನು ಸಾಕಷ್ಟು ನಗಿಸಿದರು. ‘ನಮ್ಮ ಯೂನಿವರ್ಸಿಟಿಯಲ್ಲಿ ಪಿಎಚ್‌ಡಿ ಬಗ್ಗೆ ಸಾಕಷ್ಟು ದಂತಕಥೆಗಳೇ ಇವೆ. ಅದ್ಯಾರೋ ಒಬ್ರು ಬೈಗುಳಗಳ ಬಗ್ಗೆ ಪಿಎಚ್‌ಡಿ ಮಾಡಿದ್ರು. ಕೈಯಲ್ಲೊಂದು ಟೇಪ್‌ ರೆಕಾರ್ಡರ್‌. ಯಾರು ಎಲ್ಲೇ ಜಗಳ ಮಾಡಲಿ ಅಲ್ಲಿ ಹೋಗಿ ಟೇಪ್‌ ಆನ್‌ ಮಾಡಿ ರೆಕಾರ್ಡ್‌ ಮಾಡಿಕೊಳ್ಳೋವ! ಯಾರಾದರೂ ಜಗಳವಾಡಲಿ ಎಂದು ಅವರು ಸದಾ ಬಯಸುತ್ತಿದ್ದರು’ ಎಂದು ಶುರು ಮಾಡಿದರು ಸಿದ್ಧಲಿಂಗಯ್ಯ.

‘ಇನ್ನೊಬ್ಬರ ಪಿಎಚ್‌ಡಿ ವಿಷಯ– ಸಾಹಿತಿಗಳ ರೇಷ್ಮೆ ಬಟ್ಟೆ ಪ್ರೀತಿ! ಇದೇನ್ರೀ ಹೀಗಿದೆ ಸಬ್ಜೆಕ್ಟು ಅಂದರೆ, ಅವರದ್ದು ಅಧ್ಯಯನದ ವಿಷಯ ಸಿರಿಕಲ್ಚರ್‌. ಅದನ್ನು ಸಾಹಿತ್ಯಕ್ಕೆ ಲಿಂಕ್‌ ಮಾಡಬೇಕಿತ್ತು. ಸಾಹಿತಿಗಳಿಗೆ ಸನ್ಮಾನದಲ್ಲಿ ಹೊದಿಸುವ ರೇಷ್ಮೆ ಶಾಲಿನ ಬಗ್ಗೆಯೇ ಉದ್ದಕ್ಕೆ ಬರೆದಿದ್ದರು. ನನ್ನ ಪಿಎಚ್‌ಡಿ ವಿಷಯ ಗ್ರಾಮದೇವತೆಗಳು. ಯೂನಿವರ್ಸಿಟಿಯವರು ಕೊಟ್ಟ ಆ ಕಾಲದ ಮಿನೊಲ್ಟ ಕ್ಯಾಮೆರಾ ಇತ್ತು. ಗ್ರಾಮದೇವತೆಗಳಿಗೆ ಆವೇಶ ಬರುವಾಗ ಫೋಟೊ ತೆಗೆಯಲಿಕ್ಕೆಂದು ಒಮ್ಮೆ ಅದರ ಮುಂದುಗಡೆಯೇ ಬಗ್ಗಿ ನಿಂತು ಕ್ಲಿಕ್ಕಿಸುತ್ತಿದ್ದೆ. ಅದೇನಾಯ್ತೋ ಸಿಟ್ಟಿಗೆದ್ದ ದೇವರು ನನ್ನ ಕೈಯಿಂದ ಕ್ಯಾಮೆರಾ ಕಿತ್ತುಕೊಂಡು ಓಡಿದ. ಅವನ ಹಿಂದೆ ನಾನೂ ಓಡಿದೆ. ಕ್ಯಾಮೆರಾ ಯೂನಿವರ್ಸಿಟಿದ್ದು ಕಣ್ರೀ, ಹೇಗಾದ್ರೂ ಕೊಡಿಸಿ ಎಂದು ಊರವರಿಗೆ ದುಂಬಾಲು ಬಿದ್ದೆ. ನನ್ನ ಫಜೀತಿ ಅವತ್ತು ಯಾರಿಗೂ ಬೇಡ’ ಎಂದು ಸಿದ್ದಲಿಂಗಯ್ಯ ಹೇಳಿದಾಗ ಸಭೆಯಲ್ಲಿ ನಗುವೋ ನಗು.

ADVERTISEMENT

ಗೆಳೆಯರಿಗೆ ಅಭಿನಂದನೆ ಸಲ್ಲಿಸಿದ ನಾಯ್ಡು ಅವರು ಹೇಳಿದ್ದು– ‘ಈ ಪಿಎಚ್‌ಡಿ ಮುಗಿಸುವುದರಲ್ಲಿ ಜೀವ ಹೈರಾಣಾಗಿದೆ. ಇಷ್ಟು ಕಷ್ಟ ಪಡಬೇಕು ಅಂತ ಗೊತ್ತಿದ್ದರೆ ಇದೇ ಅವಧಿಯಲ್ಲಿ ಇನ್ನೆರಡು ಸಿನಿಮಾ ಮಾಡಬಹುದಿತ್ತು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.