ಬೆಂಗಳೂರು: ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಬದುಕನ್ನು ಆಧರಿಸಿದ ಸಾಕ್ಷ್ಯಚಿತ್ರ 'ಗೌರಿ' ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಅಂತರರಾಷ್ಟ್ರೀಯ ಮಟ್ಟದ ಹಲವು ಸಿನಿಮೇಳಗಳಿಗೂ ಆಯ್ಕೆಯಾಗಿದೆ.
ಗೌರಿ ಅವರ ಸಹೋದರಿ, ನಿರ್ದೇಶಕಿ ಕವಿತಾ ಲಂಕೇಶ್ ಅವರು ನಿರ್ದೇಶಿಸಿದ ಸಾಕ್ಷ್ಯಚಿತ್ರವು ಟೊರೆಂಟೊ ವುಮೆನ್ಸ್ ಫಿಲ್ಮ್ ಫೆಸ್ಟಿವಲ್ 2022ರ 'ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ದಕ್ಷಿಣ ಏಷ್ಯಾದ ಫಿಲ್ಮ್ ಫೆಸ್ಟಿವಲ್‌ಗೆ ಗೌರಿ ಸಾಕ್ಷ್ಯಚಿತ್ರ ಆಯ್ಕೆಯಾಗಿದೆ. ಆ್ಯಮ್‌ಸ್ಟರ್‌ಡಾಂನ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರಗಳ ಹಬ್ಬ, ಸಂಡನ್ಸ್ ಫಿಲ್ಮ್ ಫೆಸ್ಟಿವಲ್ ಮತ್ತು ಇತರ ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗಳಿಗೂ ಆಯ್ಕೆಯಾಗಿದೆ.
ಭಾರತದಲ್ಲಿ ಪ್ರತಿದಿನವು ಪತ್ರಕರ್ತರು ಎದುರಿಸುತ್ತಿರುವ ಜೀವ ಬೆದರಿಕೆಗಳು, ದೈಹಿಕ ಮತ್ತು ಮಾನಸಿಕ ಹಿಂಸೆಗಳನ್ನು ಈ ಸಾಕ್ಷ್ಯಚಿತ್ರವು ಬಹಿರಂಗಪಡಿಸುತ್ತದೆ. ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 200ಕ್ಕೂ ಹೆಚ್ಚು ಇಂತಹ ದಾಳಿಗಳು ವರದಿಯಾಗಿವೆ. ಕಳೆದ ಒಂದು ದಶಕದಲ್ಲಿ 30 ಹತ್ಯೆಗಳು ನಡೆದಿವೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.
ನಂಬಿಕೆಗೆ ಆಘಾತವಾದ ಭಾವ ತೀವ್ರತೆಯಿಂದ ದಾಳಿಗಳು ನಡೆದಿವೆ ಎನ್ನಲಾಗುತ್ತದೆ. ಆದರೆ ಹತ್ಯೆಯ ಹಿಂದಿನ ಉದ್ದೇಶ ಬೇರೆಯದ್ದೇ ಆಗಿರುತ್ತದೆ. ಹತ್ಯೆ ಹಿಂದಿನ ಉದ್ದೇಶ ಬಹಳ ಕಳವಳಕಾರಿಯಾಗಿದೆ. ಭಾರತವು ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180ರ ಪೈಕಿ 150ನೇ ಸ್ಥಾನದಲ್ಲಿದೆ ಎಂದರು.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾಜರಾಜೇಶ್ವರಿ ನಗರದ ಅವರ ಮನೆಯ ಎದುರಲ್ಲೇ ದುಷ್ಕರ್ಮಿಗಳು ಬಹಳ ಸಮೀಪದಿಂದ ಗುಂಡು ಹಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.