ADVERTISEMENT

ತರುಣ್ ಕಿಶೋರ್ ನಿರ್ಮಾಣದ ಹೊಸ ಸಿನಿಮಾ ‘ಏಳುಮಲೆ’

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 0:53 IST
Last Updated 11 ಜುಲೈ 2025, 0:53 IST
ರಾಣಾ, ಪ್ರಿಯಾಂಕಾ 
ರಾಣಾ, ಪ್ರಿಯಾಂಕಾ    

‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್‌ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ಹೊಸ ಸಿನಿಮಾದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿತು. ಚಿತ್ರಕ್ಕೆ ‘ಏಳಮಲೆ’ ಎಂಬ ಟೈಟಲ್‌ ಇಡಲಾಗಿದ್ದು, ನಟ ಶಿವರಾಜ್‌ಕುಮಾರ್‌ ಸಮಾರಂಭದಲ್ಲಿ ಅತಿಥಿಯಾಗಿದ್ದರು. 

‘ಏಕ್‌ ಲವ್‌ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ನಟ ರಾಣಾ, ‘ಮಹಾನಟಿ’ ವಿಜೇತೆ ಪ್ರಿಯಾಂಕಾ ಆಚಾರ್‌ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌, ‘ತರುಣ್‌ ಹಾಗೂ ನಂದಕಿಶೋರ್‌ ನಿರ್ದೇಶನದಲ್ಲಿ ನಾನು ಸಿನಿಮಾ ಮಾಡಿಲ್ಲ. ಮುಂದೆ ಮಾಡಬೇಕು. ಕಥೆ ಸಿದ್ಧಪಡಿಸಿಕೋ ಡೇಟ್ಸ್‌ ಕೊಡುತ್ತೇನೆ ಎಂದು ತರುಣ್‌ಗೆ ಹೇಳಿದ್ದೇನೆ. ರಾಣಾ ಬಹಳ ಮುದ್ದಾದ ಹುಡುಗ. ‘ಏಳುಮಲೆ’ ಟೈಟಲ್‌ ಟೀಸರ್‌ ನೋಡಿಯೇ ಸಿನಿಮಾ ಮೇಲೆ ಭರವಸೆ ಮೂಡಿದೆ. ಪ್ರಿಯಾಂಕ ಅವರಿಗೆ ಇದು ಮೊದಲ ಸಿನಿಮಾ. ನಾನು ‘ಜನುಮದ ಜೋಡಿ’ ಸಿನಿಮಾ ಮಾಡುವಾಗ, ನಟಿ ಶಿಲ್ಪಾ ಅವರು ಏಕಾಏಕಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಈ ಸಿನಿಮಾಗೆ ನನಗೆ ಪ್ರಶಸ್ತಿ ಬರಲಿಲ್ಲ, ಆದರೆ ಶಿಲ್ಪಾಗೆ ರಾಜ್ಯ ಪ್ರಶಸ್ತಿ ಬಂತು. ಹೊಸಬರ ಸಿನಿಮಾಗಳು ಬರುತ್ತಿರಬೇಕು. ನಾವು ನಮ್ಮ ಗೀತಾ ಪಿಕ್ಚರ್ಸ್‌ನಿಂದ ‘ಪಬ್ಬಾರ್‌’ ಎನ್ನುವ ಸಿನಿಮಾ ಮಾಡುತ್ತಿದ್ದೇವೆ. ಇದರಲ್ಲೂ ಹೊಸಬರು ಇದ್ದಾರೆ. ಸಿನಿಮಾ ಹೇಗಾಗುತ್ತದೋ ಗೊತ್ತಿಲ್ಲ, ಆದರೆ ಪ್ರಯತ್ನ ಇರಲೇಬೇಕು’ ಎಂದರು.  

ADVERTISEMENT

ಚಿನ್ನಕ್ಕೆ ಕೊರತೆಯಿಲ್ಲ

‘ಒಂದು ಕಥೆ ಮೊದಲು ನಮ್ಮಲ್ಲಿ ಕುತೂಹಲ ಹುಟ್ಟಿಸಬೇಕು. ಆಗಷ್ಟೇ ನಿರ್ಮಾಣಕ್ಕೆ ಒಪ್ಪಲು ಸಾಧ್ಯ. ಪುನೀತ್‌ ಅವರು ‘ಕಾಟೇರ’ ಸಿನಿಮಾ ಸಂದರ್ಭದಲ್ಲಿ ನನ್ನ ನಿರ್ದೇಶನ ತಂಡದಲ್ಲಿದ್ದರು. ಇದೇ ಸಂದರ್ಭದಲ್ಲಿ ನನಗೆ ‘ಏಳುಮಲೆ’ಯ ಒನ್‌ಲೈನ್‌ ಹೇಳಿದ್ದರು. ಚಿತ್ರರಂಗ ಎನ್ನುವುದು ಚಿನ್ನದ ಗಣಿಗಾರಿಕೆ ಮಾಡಿದಂತೆ. ಕೆಲವೊಮ್ಮ ಬೇಗ ಚಿನ್ನ ಸಿಗುತ್ತದೆ, ಕೆಲವೊಮ್ಮೆ ವಿಳಂಬವಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಖಂಡಿತವಾಗಿಯೂ ಚಿನ್ನಕ್ಕೆ ಬರವಿಲ್ಲ. ಈಗಾಗಲೇ ಈ ಸಿನಿಮಾದ ಆಡಿಯೊ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ಶೀರ್ಷಿಕೆ ಬಿಡುಗಡೆ ಮುನ್ನವೇ ಕರ್ನಾಟಕದಾದ್ಯಂತ ಸಿನಿಮಾ ಖರೀದಿ ಆಗಿದೆ. ಇದರಿಂದ ಹೆಮ್ಮೆ ಇದೆ. ಒಳ್ಳೆಯ ಕಾಂಟೆಂಟ್‌ ಸಿನಿಮಾಗಳಿಗೆ ಖಂಡಿತಾ ಭವಿಷ್ಯವಿದೆ. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ನಡೆಯುವ ಕಥೆ ಇದು. ನೈಜ ಘಟನೆ ಹಾಗೂ ಕಾಲ್ಪನಿಕ ಕಥೆಯ ಸಮ್ಮಿಶ್ರಣವಿದು’ ಎಂದು ಸಿನಿಮಾ ಬಗ್ಗೆ ವಿವರಣೆ ನೀಡಿದರು ತರುಣ್‌.  

ಸಿನಿಮಾದಲ್ಲಿ ಟಿ.ಎಸ್‌. ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ನಟಿಸಿದ್ದಾರೆ. ಅದ್ವೈತ್‌ ಗುರುಮೂರ್ತಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್‌ ರಂಗಸ್ವಾಮಿ ಸಂಭಾಷಣೆ, ಡಿ. ಇಮ್ಮನ್‌ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್‌‌ ಆಗಲಿದೆ. ತರುಣ್‌ ಕಿಶೋರ್‌ ಸುಧೀರ್‌ ಹಾಗೂ ಅಟ್ಲಾಂಟಾ ನಾಗೇಂದ್ರ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 

ಕಾಡುವ ಸಿನಿಮಾಗಳ ಪಟ್ಟಿಗೆ

‘ಏಳುಮಲೆ’ ಸಿನಿಮಾ ಸೇರುತ್ತದೆ. ಮನಸ್ಸಿಗೆ ಹೃದಯಕ್ಕೆ ಸಿನಿಮಾ ಹತ್ತಿರವಾಗಬೇಕು. ದುಡ್ಡಿಗಿಂತ ಹೆಚ್ಚಾಗಿ ಪ್ರೇಕ್ಷಕರ ಮೆಚ್ಚುಗೆ ಇಂತಹ ಸಿನಿಮಾಗಳಿಗೆ ಬೇಕು.  –ಟಿ.ಎಸ್‌.ನಾಗಾಭರಣ ನಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.