ADVERTISEMENT

ತರುಣ್ ಕಿಶೋರ್ ನಿರ್ಮಾಣದ ಏಳುಮಲೆ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 1:30 IST
Last Updated 2 ಸೆಪ್ಟೆಂಬರ್ 2025, 1:30 IST
ರಾಣಾ, ಪ್ರಿಯಾಂಕಾ 
ರಾಣಾ, ಪ್ರಿಯಾಂಕಾ    

‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್‌ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ‘ಏಳುಮಲೆ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾ ಸೆ.5ರಂದು ತೆರೆಕಾಣುತ್ತಿದೆ. 

ನಟರಾದ ಶರಣ್‌, ಡಾಲಿ ಧನಂಜಯ ಹಾಗು ನವೀನ್‌ ಶಂಕರ್‌ ಟ್ರೇಲರ್‌ ಬಿಡುಗಡೆ ಮಾಡಿದರು. ಈ ಟ್ರೇಲರ್‌ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದು ಆ್ಯಕ್ಷನ್‌, ಭಾವನಾತ್ಮಕ ಕಥೆ, ಪ್ರೀತಿ ಜೊತೆಗೆ ಥ್ರಿಲ್ಲಿಂಗ್‌ ಅಂಶಗಳನ್ನೂ ಒಳಗೊಂಡಿದೆ. ಸಿನಿಮಾದಲ್ಲಿ ‘ಏಕ್‌ ಲವ್‌ ಯಾ’ ಮೂಲಕ ಚಂದನವನ ಪ್ರವೇಶಿಸಿದ್ದ ನಟ ರಾಣಾ, ‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್‌ ಮುಖ್ಯಭೂಮಿಕೆಯಲ್ಲಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಧನಂಜಯ, ‘ಈ ರೀತಿಯ ಪ್ರೇಮಕಥೆಯನ್ನು ನೋಡದೆ ಬಹಳ ದಿನವಾಗಿದೆ. ಈ ತಂಡದಲ್ಲಿ ಪ್ರಾಮಾಣಿಕತೆ ಇದೆ. ಆ ಪ್ರಾಮಾಣಿಕತೆಯೇ ಈ ಸಿನಿಮಾವನ್ನು ಗೆಲ್ಲಿಸುತ್ತದೆ. ಸಿನಿಮಾವನ್ನೇ ನಂಬಿಕೊಂಡು ಸಿನಿಮಾದಿಂದ ದುಡಿದು ಮತ್ತೆ ಸಿನಿಮಾ ಮಾಡುವುದು ಸವಾಲು. ಇದನ್ನು ತರುಣ್‌ ಸಮರ್ಥವಾಗಿ ಮಾಡುತ್ತಿದ್ದಾರೆ’ ಎಂದರು. 

ADVERTISEMENT

‘ಒಬ್ಬ ನಿರ್ದೇಶಕನಾಗಿ ದುಡಿದು ಬಂದ ಹಣದಿಂದಲೇ ಸಿನಿಮಾ ಮಾಡುತ್ತೇನೆ. ಇಲ್ಲಿ ಅಟ್ಲಾಂಟಾ ನಾಗೇಂದ್ರ ನನಗೆ ಜೊತೆಯಾಗಿದ್ದಾರೆ. ಇದು ಸಂಪೂರ್ಣ ಪುನೀತ್ ಸಿನಿಮಾ. ಏಳುಮಲೆ ಸಿನಿಮಾವು ಪ್ರೀತಿಯೇ ಪರಮಶ್ರೇಷ್ಠ ಎಂದು ಹೇಳುತ್ತದೆ. ಇದನ್ನು ನಾವು ಥ್ರಿಲ್ಲರ್ ಮೂಲಕ ಹೇಳುತ್ತಿದ್ದೇವೆ. ಜನರಿಗೆ ಖಂಡಿತಾ ನಿರಾಶೆಯಾಗುವುದಿಲ್ಲ’ ಎನ್ನುತ್ತಾರೆ ತರುಣ್‌. 

ಜಗಪತಿ ಬಾಬು, ಟಿ.ಎಸ್‌. ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ‘ಏಳುಮಲೆ’ಯ ತಾರಾಬಳಗದಲ್ಲಿದ್ದಾರೆ. ಕರ್ನಾಟಕ - ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯನ್ನು ಹೊಂದಿರುವ ಈ ಸಿನಿಮಾಗೆ ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.