ADVERTISEMENT

ಸಿಲಿಕಾನ್‌ ಸಿಟಿಯ ಅಪರಾಧ ಕಥಾನಕ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 19:45 IST
Last Updated 5 ಡಿಸೆಂಬರ್ 2019, 19:45 IST
ಅನಿತಾ ಭಟ್‌
ಅನಿತಾ ಭಟ್‌   

ಅದು ‘ಬೆಂಗಳೂರು 69’ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮತ್ತು ಕಲಾವಿದರಿಂದ ವೇದಿಕೆಯು ತುಂಬಿತ್ತು. ಎಂದಿನಂತೆ ಸಿನಿಮಾಗಳ ಬಿಡುಗಡೆಯಲ್ಲಿ ಆಗುತ್ತಿರುವ ತೊಂದರೆಯತ್ತಲೇ ಎಲ್ಲರ ಮಾತು ಹೊರಳಿತು.

ಬಳಿಕ ಮೈಕ್‌ ಕೈಗೆತ್ತಿಕೊಂಡ ನಿರ್ಮಾಪಕ ಜಾಕೀರ್ ಹುಸೇನ್‌ ಕರೀಂಖಾನ್‌, ‘ನನಗೆ ಕನ್ನಡಿಗರ ಮೇಲೆ ಅಪಾರ ಪ್ರೀತಿ. ದೂರದ ದುಬೈನಲ್ಲಿದ್ದರೂ ನಾಡಿಗೆ ಅಳಿಲು ಸೇವೆ ಮಾಡುವ ಆಸೆ. ಒಳ್ಳೆಯ ಸಿನಿಮಾ ಮಾಡಿರುವೆ. ನನ್ನನ್ನು ರಕ್ಷಿಸಬೇಕಾದ ಹೊಣೆ ಪ್ರೇಕ್ಷಕರಿಗೆ ಮೇಲಿದೆ’ ಎಂದು ಕೋರಿಕೆ ಮುಂದಿಟ್ಟರು.

ಇದನ್ನೂ ಓದಿ:‘ಲೇಡಿ ಡಾನ್‌’ ಅನಿತಾ ಭಟ್‌

ADVERTISEMENT

ಎರಡು ಹಾಡುಗಳ ಚಿತ್ರೀಕರಣ ಹೊರತುಪಡಿಸಿದರೆ ಚಿತ್ರದ ಉಳಿದ ಭಾಗದ ಶೂಟಿಂಗ್‌ ಪೂರ್ಣಗೊಂಡಿದೆ. ಸಸ್ಪೆನ್ಸ್, ಥ್ರಿಲ್ಲರ್‌ ಕಥೆ ಇದು. ಇಬ್ಬರು ಹುಡುಗರು ಶ್ರೀಮಂತ ಹುಡುಗಿಯನ್ನು ಅಪಹರಣ ಮಾಡುತ್ತಾರೆ. ಆ ಅಪಹರಣ ಏಕೆ ನಡೆಯುತ್ತದೆ ಎಂಬುದೇ ಚಿತ್ರದ ಕಥಾಹಂದರ.

ನಟಿ ಅನಿತಾ ಭಟ್‌ ಈ ಚಿತ್ರದ ಕೇಂದ್ರಬಿಂದು. ಬೋಲ್ಡ್‌ ಹಾಗೂ ಗ್ಲಾಮರಸ್‌ ಆಗಿ ಅವರು ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿನ ರೊಮ್ಯಾಂಟಿಕ್‌ ಹಾಡಿನಲ್ಲಿ ಅವರು ಮೈಚಳಿ ಬಿಟ್ಟು ಕುಣಿದಿದ್ದಾರಂತೆ. ಮೂರು ಪಾತ್ರಗಳ ಸುತ್ತವೇ ಈ ಸಿನಿಮಾದ ಕಥೆ ಸಾಗಲಿದೆ. ಶಫಿ ಈ ಸಿನಿಮಾದ ಹೀರೊ.

ಅಂದಹಾಗೆ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಕ್ರಾಂತಿ ಚೈತನ್ಯ. ‘ಎರಡು ಹಾಡುಗಳಿಗೆ ಲ್ಯಾಟಿನ್‌ ಅಮೆರಿಕದ ಅನಿಲಸ್‌ ನಿವಾನ ನೃತ್ಯ ಸಂಯೋಜಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.‌ ನಟ ಪವನ್‌ ಶೆಟ್ಟಿ, ‘ನಾನು ಖಳನಟನೋ ಅಥವಾ ಹೀರೊ ಆಗಿ ನಟಿಸಿದ್ದೇನೆಯೋ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು. ಏತಕ್ಕಾಗಿ ನಾಯಕಿಯ ಅಪಹರಣ ಮಾಡುತ್ತೇನೆ ಎಂಬುದು ಈ ಚಿತ್ರದ ಕೌತುಕ’ ಎಂದರು.

ವಿಕ್ರಂ ಮತ್ತು ಚಂದನಾ ದಂಪತಿ ಸಂಗೀತ ಸಂಯೋಜಿಸಿದ್ದಾರೆ. ಪರಮೇಶ್ ಸಿ.ಎಂ. ಅವರ ಛಾಯಾಗ್ರಹಣವಿದೆ. ಇದೇ ವೇಳೆ ಚಿತ್ರದ ಆಡಿಯೊ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.