ADVERTISEMENT

ಗುಮ್ಟಿ: ಕುಡುಬಿ ಜನಾಂಗದ ಕಥೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:12 IST
Last Updated 24 ಜುಲೈ 2024, 16:12 IST
ಕುಡುಬಿ ನೃತ್ಯದ ದೃಶ್ಯ
ಕುಡುಬಿ ನೃತ್ಯದ ದೃಶ್ಯ   

‘ಮುಂಗಾರು ಮಳೆ’ ಚಿತ್ರದ ನಂತರ ಅದೇ ರೀತಿಯ ಹತ್ತಾರು ಚಿತ್ರಗಳು ಬಂದವು. ‘ಕಾಂತಾರ’ ಯಶಸ್ಸಿನ ನಂತರ ಆಯಾ ಪ್ರದೇಶದ ಸಂಪ್ರದಾಯ, ಆಚರಣೆಗಳನ್ನು ತೋರಿಸುವ ಚಿತ್ರಗಳು ಬರುತ್ತಲೇ ಇವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಗುಮ್ಟಿ’. ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ಈ ಹಿಂದೆ ‘ಇನಾಮ್ದಾರ್‌’ ಚಿತ್ರ ನಿರ್ದೇಶಿಸಿದ್ದ ಸಂದೇಶ್‌ ಶೆಟ್ಟಿ ಆಜ್ರಿ ಈ ಸಿನಿಮಾವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ‘ಉಡುಪಿ ಜಿಲ್ಲೆಯ ಮಂದಾರ್ತಿ ಭಾಗದಲ್ಲಿ ಪ್ರಮುಖವಾಗಿ ಕಂಡುಬರುವ ಕುಡುಬಿ ಜನಾಂಗದ ಕಥೆಯನ್ನು ಹೊಂದಿದೆ. ‘ಗುಮ್ಟಿ’ ಎಂಬುದು ಅವರು ಜನಪದ ಕಲೆಯಲ್ಲಿ ಬಳಸುವ, ಮಣ್ಣಿನ ಮಡಕೆಯಿಂದ ಮಾಡಿದ ವಾದ್ಯ. ಗೋವಾದಲ್ಲಿ ಪೋರ್ಚುಗೀಸರ ದಾಳಿಗೆ ತುತ್ತಾಗಿ ರಾಜ್ಯದೆಲ್ಲೆಡೆ ಬಂದು ನೆಲೆಸಿದ ಕುಡುಬಿ ಜನಾಂಗದ ಹೋರಾಟ, ಸಂಸ್ಕೃತಿ, ಸಂಪ್ರದಾಯಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ’ ಎಂದು ಚಿತ್ರದ ಕುರಿತು ವಿವರಿಸಿದರು ನಿರ್ದೇಶಕರು.

ವೈಷ್ಣವಿ ನಾಡಿಗ್‌ ನಾಯಕಿ, ವಿಕಾಸ್‌ ಶೆಟ್ಟಿ ಬಂಡವಾಳ ಹೂಡಿದ್ದಾರೆ. ‘ನಿರ್ಮಾಪಕರಿಗೆ ಕಾಂತಾರದಷ್ಟು ದೊಡ್ಡಮಟ್ಟದಲ್ಲಿಯೇ ಈ ಚಿತ್ರ ಮಾಡಬೇಕೆಂಬ ಹಂಬಲವಿತ್ತು. ಆದರೆ ಚಿತ್ರರಂಗದ ಪರಿಸ್ಥಿತಿ ಸರಿಯಿಲ್ಲ. ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ. ಹೀಗಾಗಿ 20 ದಿನಗಳ ಕಾಲ ಚಿತ್ರೀಕರಣ ನಡೆಸಿ, ಬಹಳ ಕಡಿಮೆ ಬಜೆಟ್‌ನಲ್ಲಿ ಚಿತ್ರವನ್ನು ಮುಗಿಸಿದ್ದೇವೆ. ನೈಜವಾದ ಕಥೆಯನ್ನು ಹೇಳುವ ಕಲಾತ್ಮಕ ಚಿತ್ರವಿದು. ಶೀಘ್ರದಲ್ಲಿ ತೆರೆಗೆ ಬರಲಿದೆ’ ಎಂದರು ಸಂದೇಶ್‌ ಶೆಟ್ಟಿ. 

ADVERTISEMENT

ಡೂಂಡಿ ಮೋಹನ್‌ ಸಂಗೀತ, ಅನೀಶ್‌ ಡಿಸೋಜ ಛಾಯಾಚಿತ್ರಗ್ರಹಣ, ಶಿವರಾಜ್‌ ಮೇಜು ಸಂಕಲನ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.