ADVERTISEMENT

ಕೆಜಿಎಫ್‌ನಲ್ಲಿ ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಹೆಜ್ಜೆ ಹಾಕಿದ್ದೇನೆ: ತಮನ್ನಾ

ಸುಮನಾ ಕೆ
Published 14 ಸೆಪ್ಟೆಂಬರ್ 2018, 13:45 IST
Last Updated 14 ಸೆಪ್ಟೆಂಬರ್ 2018, 13:45 IST
ತಮನ್ನಾ
ತಮನ್ನಾ   

ಕೆಜಿಎಫ್‌, ಜಾಗ್ವಾರ್‌ ಸಿನಿಮಾದ ಹಾಡುಗಳಲ್ಲಿ ನಟಿಸಿದ್ದೀರಿ. ಅನುಭವ ಹೇಗಿತ್ತು?

ನನಗೆ ಡಾನ್ಸ್‌ ಅಂದ್ರೆ ತುಂಬ ಇಷ್ಟ. ‘ಜಾಗ್ವಾರ್‌’ನಲ್ಲಿ ನಾನು ನಿಖಿಲ್‌ ಕುಮಾರಸ್ವಾಮಿ ಜೊತೆ ನಟಿಸಿದ್ದೇನೆ. ರಾಮೋಜಿ ಫಿಲ್ಮ್‌ಸಿಟಿಯಲ್ಲಿ 8 ದಿನ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಈಗ ಯಶ್‌ ಜೊತೆ ‘ಕೆಜಿಎಫ್‌’ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದೇನೆ. ಎರಡೂ ಅದ್ಭುತ ಹಾಡುಗಳೇ. ಕೆಜಿಎಫ್‌ ಹಾಡಿನಲ್ಲಿ ವಿಭಿನ್ನವಾಗಿ, ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಈ ಹಿಂದೆನಾನು ಆ ರೀತಿ ಕಾಣಿಸಿಕೊಂಡಿಲ್ಲ. ಅದನ್ನು ಜನರು ಇಷ್ಟಪಡುತ್ತಾರೆ ಎಂಬ ಭರವಸೆ ಇದೆ. ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ.

ಮುಂಬೈ ಮೂಲದವರಾದರೂ,ದಕ್ಷಿಣ ಭಾರತ ಚಿತ್ರರಂಗದ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದೀರಿ?

ADVERTISEMENT

ನಾನು 2005ರಲ್ಲಿ ಹಿಂದಿ ಚಿತ್ರದ ಮೂಲಕ ಈ ಕ್ಷೇತ್ರಕ್ಕೆ ಪ್ರವೇಶಿಸಿದ್ದರೂ, ಹೆಚ್ಚು ಅವಕಾಶ ನೀಡಿದ್ದು ದಕ್ಷಿಣ ಭಾರತದ ಚಿತ್ರರಂಗ.ಬಾಲಿವುಡ್‌ನಲ್ಲಿ 3–4 ಸಿನಿಮಾಗಳಲ್ಲಿ ನಟಿಸಿದ್ದೇನಷ್ಟೇ. ದಕ್ಷಿಣ ಭಾರತ ಚಿತ್ರರಂಗ ನನ್ನ ಕರ್ಮಭೂಮಿ. ಮುಂಬೈನ ಜನರು ನನ್ನನ್ನು ದಕ್ಷಿಣ ಬಾರತದ ನಟಿ ಎಂದು ಗುರುತಿಸುತ್ತಾರೆ. ಇದು ನನಗೆ ವೈಯಕ್ತಿಕವಾಗಿ ಖುಷಿ ಸಂಗತಿ. ನಾನು ಮುಂಬೈನವಳಾದರೂ, ಇಲ್ಲಿಯ ಜನ ನನ್ನನ್ನು ತಮ್ಮವಳಾನ್ನಾಗಿ ಸ್ವೀಕರಿಸಿದ್ದಾರೆ. 14ನೇ ವಯಸ್ಸಿನಲ್ಲಿ ಸಿನಿಮಾ ಕ್ಷೇತ್ರಕ್ಕೆ ಬಂದೆ. ಈಗ ಆಚಾರ, ವಿಚಾರದಲ್ಲಿ ನಾನು ದಕ್ಷಿಣ ಭಾರತದವಳೇ ಆಗಿ ಹೋಗಿದ್ದೇನೆ. ನನ್ನ ಭಾಷೆಯ ಉಚ್ಚಾರವೂ ಇಲ್ಲಿಯದೇ ಆಗಿದೆ. ಜನ ಸ್ವೀಕರಿಸಿದ್ದರಿಂದ ಇದೆಲ್ಲಾ ಸಾಧ್ಯವಾಯಿತು.

ಕನ್ನಡ ಸಿನಿಮಾದಲ್ಲಿನಾಯಕಿಯಾಗಿ ಯಾವಾಗ ನಟಿಸುತ್ತೀರಿ?

ನಾನು ಪ್ರಯಾಣ ಸಂದರ್ಭದಲ್ಲಿ ತುಂಬ ಸಿನಿಮಾಗಳನ್ನು ನೋಡುತ್ತೇನೆ. ಎಲ್ಲಾ ಭಾಷೆಯ ಸಿನಿಮಾ ನೋಡುತ್ತೇನೆ. ಕನ್ನಡ ಸಿನಿಮಾಗಳನ್ನೂ ನೋಡುತ್ತಿರುತ್ತೇನೆ. ಸದ್ಯಕ್ಕೆ ಯಾವ ಕನ್ನಡ ಸಿನಿಮಾ ನೋಡಿಲ್ಲ. ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಅತ್ಯುತ್ತಮ ಕತೆ, ಚಿತ್ರಕತೆ, ಸಿನಿಮಾ ಸಿಕ್ಕರೆ ಕನ್ನಡದಲ್ಲಿ ನಟಿಸಲು ನಾನೂ ಸಿದ್ಧ. ಜಾಹೀರಾತೊಂದರಲ್ಲಿ ನಾನು ನಟ ಪುನೀತ್‌ ರಾಜ್‌ಕುಮಾರ್‌ ಅವರ ಜೊತೆ ನಟಿಸಿದ್ದೆ. ಯಶ್‌ ಅವರನ್ನು ‘ಕೆಜಿಎಫ್‌’ ಸಿನಿಮಾ ಶೂಟಿಂಗ್‌ನಲ್ಲಿ ಭೇಟಿಯಾಗಿದ್ದೆ. ಇಬ್ಬರ ಸ್ಕ್ರೀನ್‌ ಪ್ರೆಸೆನ್ಸ್‌ ನನಗೆ ತುಂಬ ಇಷ್ಟ. ಅವರಿಬ್ಬರ ಜೊತೆ ನಟಿಸುವ ಆಸೆ ಇದೆ.

‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಬಗ್ಗೆ ಹೇಳಿ

ಈ ಚಿತ್ರಸ್ವಾತಂತ್ಯ ಹೋರಾಟಗಾರ ‘ಸೈರಾ ನರಸಿಂಹ ರೆಡ್ಡಿ’ ಅವರ ಜೀವನ ಆಧಾರಿತವಾಗಿದೆ. ಇದರಲ್ಲಿ ಬಹುಭಾಷಾ ನಟ/ನಟಿಯರು ನಟಿಸಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಬ್ ಬಚ್ಚನ್, ಜಗಪತಿಬಾಬು, ನಯನತಾರಾ, ಕಿಚ್ಚ ಸುದೀಪ್, ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಇಂತಹ ಮಲ್ಟಿ ಸ್ಟಾರ್‌ ಚಿತ್ರದಲ್ಲಿ ನಟಿಸಲು ನನಗೆ ಖುಷಿಯಾಗುತ್ತಿದೆ. ಮತ್ತೊಂದು ಖುಷಿ ಅಂದ್ರೆ ಚಿರಂಜೀವಿ ಸರ್‌ ಜೊತೆ ನಟಿಸಲು ಅವಕಾಶ ದೊರೆತಿದ್ದಕ್ಕೆ. ಅವರು ಕಿರಿಯ– ಹಿರಿಯ ಎಂದು ಭೇದ ಮಾಡದೇ ಎಲ್ಲರಿಗೂ ತುಂಬ ಪ್ರೋತ್ಸಾಹ ನೀಡುತ್ತಾರೆ.

ನಿಮ್ಮ ನೆಚ್ಚಿನ ಚಿತ್ರ ಯಾವುದು?

ಒಬ್ಬ ನಟ/ ನಟಿಗೆ ಅವರು ನಟಿಸಿದ ಎಲ್ಲಾ ಚಿತ್ರಗಳು ಇಷ್ಟ. ಮಕ್ಕಳ ಹಾಗೇ. ಯಾವಾಗಲೂ ನೆನಪಿನಲ್ಲಿರುತ್ತವೆ. ಹೇಳಲೇಬೇಕು ಅಂದ್ರೆ ‘ಬಾಹುಬಲಿ’, ‘ಹ್ಯಾಪಿ ಡೇಸ್‌’ ಚಿತ್ರಗಳು ನನ್ನ ಹೃದಯಕ್ಕೆ ಹತ್ತಿರವಾದವು. ‘ದಟ್‌ ಈಸ್‌ ಮಹಾಲಕ್ಷ್ಮಿ’ ಚಿತ್ರದ ಮಹಾಲಕ್ಷ್ಮಿ ನನ್ನ ಇಷ್ಟದ ಪಾತ್ರ.

ನಿಮ್ಮ ಅಂದದ ಗುಟ್ಟೇನು?

ನಮ್ಮಮನೆಯಲ್ಲಿ ಅಜ್ಜಿ, ಅಮ್ಮ ಯಾವಾಗಲೂ ನೈಸರ್ಗಿಕ ಸೌಂದರ್ಯವರ್ಧಕಗಳನ್ನೇ ಬಳಸುತ್ತಿದ್ದರು. ಸಣ್ಣವಳಿದ್ದಾಗ ಅಮ್ಮನೇ ನನ್ನ ತಲೆಕೂದಲು, ಚರ್ಮದ ಕಾಳಜಿ ಮಾಡುತ್ತಿದ್ದರು. ಬಳಿಕ ಈ ವಿಧಾನಗಳನ್ನೆಲ್ಲಾ ಅಮ್ಮ ನನಗೆ ಹೇಳಿಕೊಟ್ಟರು. ಈ ಅಭ್ಯಾಸದಿಂದ ಯಾವಾಗಲೂ ಆಯುರ್ವೇದಿಕ್‌ ಉತ್ಪನ್ನಗಳನ್ನೇ ಬಳಸುತ್ತೇನೆ.ಈಗಿನ ಜೀವನ ಕ್ರಮ ತುಂಬ ಒತ್ತಡದಿಂದ ಕೂಡಿರುತ್ತದೆ. ಮಾಲಿನ್ಯ ಜಾಸ್ತಿ ಇದೆ. ಹಾಗಾಗಿ ಆಯುರ್ವೇದ ಚಿಕಿತ್ಸೆ ಉತ್ತಮ.ನಾನು ಸಾವಯವ ಸೌಂದರ್ಯ ಉತ್ಪನ್ನಗಳಾದ ಅರಿಶಿನದ ಫೇಸ್‌ವಾಶ್‌ ಬಳಸುತ್ತೇನೆ. ಆ್ಯಂಟಿ ಮಾರ್ಕ್‌ ಅರಿಶಿನ ಫೇಸ್‌ಕ್ರೀಂ ಬಳಸುತ್ತೇನೆ.ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಚರ್ಮ ಹಾಗೂ ತಲೆಕೂದಲಿನ ಕಾಳಜಿ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.