ಚಿತ್ರಮಂದಿರಗಳಲ್ಲಿ ಶೇ 50 ಆಸನ ಭರ್ತಿಗಷ್ಟೇ ಸರ್ಕಾರ ಅವಕಾಶ ನೀಡಿರುವ ಕಾರಣ ಫೆ.4ರಂದು ಬಿಡುಗಡೆಯಾಗಬೇಕಿದ್ದ ನಟ ಶ್ರೀ ಮಹಾದೇವ್ ಹಾಗೂ ನಟಿ ಅದಿತಿ ಪ್ರಭುದೇವ ನಟಿಸಿರುವ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾವನ್ನು ಚಿತ್ರತಂಡವು ಮುಂದೂಡಿದೆ.
‘ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧದಿಂದಾಗಿ ಸಿನಿಮಾಗಳ ಕಲೆಕ್ಷನ್ ಮೇಲೆ ದೊಡ್ಡ ಹೊಡೆದ ಬೀಳಲಿದೆ. ಫೆ.4ರಂದು ನಮ್ಮ ಚಿತ್ರ ಬಿಡುಗಡೆಯಾಗುವುದಿಲ್ಲ. ಒಂದೊಳ್ಳೆಯ ಮನರಂಜನಾತ್ಮಕ ಚಿತ್ರವು ಸೋಲಬಾರದು ಎನ್ನುವುದು ನಮ್ಮ ಉದ್ದೇಶ. ಪ್ರೇಕ್ಷಕರಿಗೆ ಶೇ 100 ಮನರಂಜನೆಯನ್ನು ನಮ್ಮ ಸಿನಿಮಾ ನೀಡಲಿದೆ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುತ್ತೇವೆ. ಎಲ್ಲ ಪ್ರೇಕ್ಷಕರನ್ನು ತಲುಪುವ ಆಶಯ ನಮ್ಮದು’ ಎಂದಿದೆ ಚಿತ್ರತಂಡ.
‘ನಮ್ ಗಣಿ ಬಿಕಾಂ ಪಾಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪ್ರವೇಶಿಸಿದ ಅಭಿಷೇಕ್ ಶೆಟ್ಟಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಕಾಲೇಜು ಕಥೆಯಾಧಾರಿತ ಸಿನಿಮಾ ಇದಾಗಿದ್ದು, ಹಾಸ್ಯ, ಭಾವನಾತ್ಮಕತೆಯೂ ಸಿನಿಮಾದಲ್ಲಿದೆ. ಶ್ರೀ ಮಹಾದೇವ್, ಗಜ ಎಂಬ ಪಾತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಅದಿತಿ ಪ್ರಭುದೇವ ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ನಟಿಸಿದ್ದಾರೆ. ನಿರ್ದೇಶಕ ಅಭಿಷೇಕ್ ಶೆಟ್ಟಿ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯ ರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಊರೂಫ್ ಬ್ರೋ ಗೌಡ ಕೂಡ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.
ಬೃಂದಾವನ್ ಎಂಟರ್‌ಪ್ರೈಸಸ್ ಅಡಿಯಲ್ಲಿ ಯು.ಎಸ್.ನಾಗೇಶ್ ಕುಮಾರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಪ್ರದ್ಯುತನ್ ಸಂಗೀತ ನೀಡಿದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.