‘ಡೆಡ್ಲಿ ಸೋಮ’, ‘ಮಾದೇಶ’ ಖ್ಯಾತಿಯ ರವಿ ಶ್ರೀವತ್ಸ ನಿರ್ಮಾಣ ಹಾಗೂ ನಿರ್ದೇಶನದ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಹಾಡು ಹಾಗೂ ಟ್ರೇಲರ್‌ಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ನಟ ಉಪೇಂದ್ರ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡದ ಸದಸ್ಯರನ್ನು ಅಭಿನಂದಿಸಿದರು.
‘ನಾವು ಕಾಶೀನಾಥ್ ಸರ್ ಸ್ಕೂಲ್‌ನಿಂದ ಬಂದ ನಂತರ ನಮಗೆ ಇನ್ನೊಂದು ಸ್ಕೂಲ್ ಇದೆ ಅಂತ ಗೊತ್ತಾಯ್ತು. ಆ ಶಾಲೆಯಲ್ಲಿ ಇದ್ದವರೆಲ್ಲ ಈ ಸಿನಿಮಾ ತಂಡದಲ್ಲಿದ್ದಾರೆ. ರವಿ ಶ್ರೀವತ್ಸ ತುಂಬಾ ಭಾವುಕ ಜೀವಿ. ಅವರ ಸಿನಿಮಾ ಕೂಡ ಹಾಗೇ ಇರುತ್ತದೆ. ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಾನು ‘ಎ’ ಸಿನಿಮಾ ಮಾಡಿದಾಗಲೂ ಇಂದು ರವಿ ಶ್ರೀವತ್ಸ ಈ ಚಿತ್ರಕ್ಕಾಗಿ ಎದುರಿಸುತ್ತಿರುವ ಸನ್ನಿವೇಶಗಳನ್ನು ಎದುರಿಸಿದ್ದೆ. ತಂಡದಲ್ಲೊಂದು ಧನಾತ್ಮಕ ಶಕ್ತಿ ಕಾಣುತ್ತಿದೆ. ಶುಭವಾಗಲಿ’ ಎಂದರು ಉಪೇಂದ್ರ.
ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್‌ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಈ ಸಿನಿಮಾ ಸಿದ್ಧಗೊಂಡಿದೆ. ರವಿ ಶ್ರೀವತ್ಸ ಹಾಗೂ ಎಂ.ಎಸ್. ರಮೇಶ್ ಜತೆಗೂಡಿ ಚಿತ್ರಕಥೆ, ಸಂಭಾಷಣೆ ಹೆಣೆದಿದ್ದಾರೆ.
‘ವೈಲೆನ್ಸ್ ಆಗಿದೆ ಎಂಬ ಕಾರಣ ನೀಡಿ ನಮ್ಮ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ಬ್ಯಾನ್ ಮಾಡಿದ್ದಲ್ಲದೆ, ರಿವೈಸಿಂಗ್ ಸಮಿತಿ ಬಳಿ ಹೋಗಿ ಸೆನ್ಸಾರ್ ಮಾಡಿಸಿಕೊಳ್ಳಿ ಎಂದರು. ನಾವು ಕಷ್ಟಪಟ್ಟು ನಿರ್ಮಿಸಿದ ಸಿನಿಮಾನ ಸೆನ್ಸಾರ್ ಅಧಿಕಾರಿಗಳು ಪೂರ್ತಿ ವೀಕ್ಷಿಸದೆ ಬೇಜವಾಬ್ದಾರಿತನ ತೋರಿಸಿದ್ದಾರೆ. ಇದರಿಂದ ನನ್ನ ಮನಸಿಗೆ ತುಂಬಾ ನೋವಾಯಿತು. ನಂತರ ರಿವೈಸಿಂಗ್ ಕಮಿಟಿಗೆ ಹೋಗಿ ಚಿತ್ರವನ್ನು ಸೆನ್ಸಾರ್ ಮಾಡಿಸಿಕೊಂಡೆವು’ ಎಂದು ಆಕ್ರೋಶ ವ್ಯಕ್ತಪಡಿಸಿದರು ರವಿ ಶ್ರೀವತ್ಸ.
ಒರಟ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್.ಎನ್. ರೆಡ್ಡಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.