ADVERTISEMENT

‘ಗತವೈಭವ’ಕ್ಕೆ ಶಿವರಾಜ್‌ಕುಮಾರ್‌ ಸಾಥ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 22:28 IST
Last Updated 29 ಅಕ್ಟೋಬರ್ 2025, 22:28 IST
ಆಶಿಕಾ ರಂಗನಾಥ್‌, ದುಷ್ಯಂತ್‌ 
ಆಶಿಕಾ ರಂಗನಾಥ್‌, ದುಷ್ಯಂತ್‌    

ಸಿಂಪಲ್‌ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾ ನ.14ರಂದು ತೆರೆಕಾಣುತ್ತಿದ್ದು, ಚಿತ್ರದ ಎರಡನೇ ಹಾಡನ್ನು ನಟ ಶಿವರಾಜ್‌ಕುಮಾರ್‌ ಇತ್ತೀಚೆಗೆ ರಿಲೀಸ್‌ ಮಾಡಿದರು. 

‘ಶಿಪ್‌ ಸಾಂಗ್‌’ ಶೀರ್ಷಿಕೆಯ ಈ ಹಾಡನ್ನು ಪೋರ್ಚುಗಲ್‌ನಲ್ಲಿ ಹಡಗಿನಲ್ಲಿ ಶೂಟಿಂಗ್ ಮಾಡಲಾಗಿದೆ. ಸುನಿ ಅವರೇ ಬರೆದಿರುವ ಈ ಹಾಡನ್ನು ಕೈಲಾಶ್‌ ಖೇರ್, ಚೇತನ್ ನಾಯಕ್ ಹಾಗೂ ಚಿನ್ಮಯಿ ಎಲ್. ಹಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಒದಗಿಸಿದ್ದು, ಭೂಷಣ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಡಗಿನ ಮೇಲೆ ದುಶ್ಯಂತ್ ಹಾಗೂ ಆಶಿಕಾ ರಂಗನಾಥ್‌ ಹೆಜ್ಜೆ ಹಾಕಿದ್ದಾರೆ. 

ಎಲ್ಲಾ ಪ್ರಕಾರದ ಸಿನಿಮಾಗಳ ‍‍ಪ್ರಯೋಗ ಮಾಡಿರುವ ಸಿಂಪಲ್‌ ಸುನಿ, ಈ ಸಿನಿಮಾ ಮೂಲಕ ಪ್ರೇಮಕಥೆಯೊಂದನ್ನು ಸೈಂಟಿಫಿಕ್‌ ಥ್ರಿಲ್ಲರ್‌ ಮಾದರಿಯಲ್ಲಿ ತೆರೆಗೆ ತರುತ್ತಿದ್ದಾರೆ. ಫ್ಯಾಂಟಸಿ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ವಿಎಫ್‌ಎಕ್ಸ್‌ ಕಲಾವಿದನ ಪಾತ್ರದಲ್ಲಿ ದುಷ್ಯಂತ್‌ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಅವರೆತ್ತುವ ಅವತಾರಕ್ಕೆ ಪೂರಕವಾಗಿ ಆಶಿಕಾ ಕೂಡಾ ಹಲವು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ಹಾಡು ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ, ‘ಗತವೈಭವ ಶೂಟಿಂಗ್ ಸೆಟ್‌ಗೆ ಒಮ್ಮೆ ಹೋಗಿದ್ದೆ. ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಿದ್ದರೂ ಸಿನಿಮಾ ನೋಡುವಾಗ ಅದು ದೊಡ್ಡದಾಗಿ ಕಾಣಿಸುತ್ತದೆ.‌ ಅವರ ಚಿತ್ರಗಳಲ್ಲಿ ಕಮರ್ಷಿಯಲ್, ಜೀವನದ ಮೌಲ್ಯ, ಮೇಕಿಂಗ್ ಅದ್ಭುತವಾಗಿರುತ್ತದೆ. ಇಂದಿನ ಟ್ರೆಂಡ್‌ಗೆ ತಕ್ಕಂತೆ ಅಚ್ಚುಕಟ್ಟಾಗಿ ಸಿನಿಮಾ ಮಾಡುತ್ತಾರೆ. ಚಿತ್ರದ ಸಂಗೀತ ಹಾಗೂ ಛಾಯಾಚಿತ್ರಗ್ರಹಣ ಚೆನ್ನಾಗಿದೆ’ ಎಂದರು.

ಮಾತಾ ಮೂವಿ ಮೇಕರ್ಸ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ ಸಿನಿಮಾಗಿದೆ. ‘ಬಿಗ್‌ಬಾಸ್‌’ ಖ್ಯಾತಿಯ ಕಿಶನ್‌ ಬಿಳಗಲಿ ‘ಅನಾಮದೇವ’ ಎಂಬ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಪೋರ್ಚುಗಲ್‌ನಲ್ಲಿ ಈ ಹಾಡಿನ ಚಿತ್ರೀಕರಣವೇ ಭಿನ್ನವಾಗಿತ್ತು. ಹಡಗಿನಲ್ಲಿ ನಿಲ್ಲುವುದೇ ಕಷ್ಟ. ಅದರಲ್ಲಿಯೂ ಡ್ಯಾನ್ಸ್ ಮಾಡುವುದು ಇನ್ನೂ ಕಷ್ಟವೆನಿಸಿತು. ಹಡಗಿನಲ್ಲಿ ದುಶ್ಯಂತ್ ಹಾಡಿನ ಜೊತೆಗೆ ಆ್ಯಕ್ಷನ್ ಕೂಡ ಮಾಡಿರುವುದು ವಿಶೇಷ
–ಆಶಿಕಾ ರಂಗನಾಥ್‌ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.