ADVERTISEMENT

ಎಲ್ಲ ಕನ್ನಡ ಚಿತ್ರಗಳಿಗೂ ತೆರಿಗೆ ವಿನಾಯಿತಿ ಕೊಡಿ: ನಿರ್ದೇಶಕ ಮಂಸೋರೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 13:27 IST
Last Updated 19 ಜೂನ್ 2022, 13:27 IST
ಮಂಸೋರೆ
ಮಂಸೋರೆ   

ಬೆಂಗಳೂರು: ಎಲ್ಲ ಕನ್ನಡ ಚಿತ್ರಗಳಿಗೂ ರಾಜ್ಯದಲ್ಲಿ ಶೇ 100ರಷ್ಟು ತೆರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ನಿರ್ದೇಶಕ ಮಂಸೋರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಚಾರ್ಲಿ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿ ರಾಜ್ಯದ ಸರಕು ಮತ್ತು ಸೇವಾ ತೆರಿಗೆ ರದ್ದು ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಆದೇಶ ಹೊರಡಿಸಿದ್ದರು. ಅದರ ಬೆನ್ನಲ್ಲೇ ಮಂಸೋರೆ ಅವರಿಂದ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಇದ್ದಂತೆ ತೆರಿಗೆ ವಿನಾಯಿತಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರದ ಪೂರ್ಣ ಪಾಠ ಇಲ್ಲಿದೆ.

ADVERTISEMENT

ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ.

ತಾವು ಕನ್ನಡ ಸಿನೆಮಾ, ‘ಚಾರ್ಲಿ777’ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ, ಸದರಿ ಸಿನೆಮಾಕ್ಕೆ ಶೇ100ರಷ್ಟು ಜಿಎಸ್‌ಟಿ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ ಏಳಿಗೆಗೆ ಇದು ಅತ್ಯವಶ್ಯಕ. ಜೊತೆಗೆ ಈ ಹಿಂದೆ ಯಾವುದೋ ಅನ್ಯ ಭಾಷೆಯ ಸಿನೆಮಾಕ್ಕೂ ಶೇ 100 ಜಿಎಸ್‌ಟಿ ತೆರಿಗೆ ವಿನಾಯಿತಿ ಕೊಟ್ಟಿದ್ದೀರಿ ಎಂದು ಯಾವುದೋ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು.

ಈಗ ಈ ಪತ್ರವನ್ನು ತಮಗೆ ಬರೆಯುತ್ತಿರುವುದರ ಕಾರಣವನ್ನು ಮೊದಲಿಗೆ ತಮಗೆ ವಿವರಿಸುತ್ತೇನೆ.
ತಾವು ಮುಖ್ಯಮಂತ್ರಿ ಆಗುವ ಮೊದಲು, ತಮ್ಮ ಬಿಜೆಪಿ ಸರ್ಕಾರ ಬರುವ ಮೊದಲು ಕನ್ನಡದ ಸಿನೆಮಾಗಳಿಗೆ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ (ಹೊರ ರಾಜ್ಯದಲ್ಲಿ ಚಿತ್ರೀಕರಣವಾಗುವುದಾದರೆ ಅದಕ್ಕೆ ಸೂಕ್ತ ಕಾರಣ ಕೊಡಬೇಕಿತ್ತು) ಎಲ್ಲಾ ಕನ್ನಡ ಸಿನೆಮಾಗಳಿಗೆ ಶೇ 100 ತೆರಿಗೆ ವಿನಾಯಿತಿ ಇತ್ತು ಎಂಬ ವಿಷಯ ತಮಗೆ ಗೊತ್ತಿತ್ತೇ?

ಕನ್ನಡದ ಸಿನೆಮಾಗಳಿಗೆ ಇದ್ದ ಈ ವಿನಾಯಿತಿಯನ್ನು ಕನ್ನಡಿಗರ ಕೈಯಿಂದ (ಕನ್ನಡದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದು ಕಿತ್ತುಕೊಂಡಿದ್ದು) ನಿಮ್ಮದೇ ಆದ ಬಿಜೆಪಿ ಸರ್ಕಾರ ಎಂಬುದು ನಿಮಗೆ ತಿಳಿದಿದೆಯೇ? ಅದು ಜಿಎಸ್‌ಟಿ ಎಂಬ ಹೆಮ್ಮಾರಿಯ ಹೆಸರಲ್ಲಿ ಎಂಬುದು ತಮಗೆ ತಿಳಿದಿದೆಯೇ?

ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರು ಕನ್ನಡ ಸಿನೆಮಾಗಳ ಮೇಲೆ ಮನರಂಜನಾ ತೆರಿಗೆ ವಿಧಿಸಲು ಹೋದಾಗ, ನಮ್ಮೆಲ್ಲರ ಪಾಲಿನ ಅಣ್ಣಾವ್ರು, ಡಾ.ರಾಜ್‌ಕುಮಾರ್‌ ಅವರು ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡಿದ್ದರು. ಆಗ ಮುಖ್ಯಮಂತ್ರಿಗಳೇ ಅಣ್ಣಾವ್ರ ಮನೆಗೆ ಹೋಗಿ ಅವರ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅವರ ಮನವೊಲಿಸಿ ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒಪ್ಪಿಸಿದರು. ಹಾಗು ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂತೆಗೆದುಕೊಂಡರು (ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ). ಅದೇ ಮುಂದೆ ಕನ್ನಡ ಹಾಗೂ ಕನ್ನಡ ನೆಲದಲ್ಲಿ ತಯಾರಾಗುವ ಎಲ್ಲಾ ಸಿನೆಮಾಗಳಿಗೂ ಶೇ 100 ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ಮಹಾನುಭಾವರ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಕಿತ್ತುಕೊಂಡಿದ್ದು ಜಿಎಸ್‌ಟಿ ನೆಪದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ತಮಗೆ ತಿಳಿದಿದೆಯೇ?

ಈಗ ವಾಪಸ್‌ ನಿಮ್ಮ ಆಡಳಿತದ ಸರ್ಕಾರದ ವಿಷಯಕ್ಕೆ ಬರುವುದಾದರೆ, ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ (777 ಚಾರ್ನಿ) ಕನ್ನಡ ಸಿನೆಮಾಕ್ಕೆ ಮಾತ್ರ ಶೇ 100 ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಆ ಹಣವನ್ನು ತಾವು ತಮ್ಮ ಜೇಬಿನಿಂದ ನೀಡುತ್ತೀದ್ದೀರಾ ಎಂದು ತಿಳಿಯಲು ಡಾ.ಬಿ.ಆರ್.ಅಂಬೇಡ್ಕರ್ ಸರ್ ಬರೆದಿರುವ, ಸಾಂವಿಧಾನಿಕ ಹಕ್ಕನ್ನು ಪಡೆದಿರುವ ಕರ್ನಾಟಕದ ಪ್ರಜೆಯಾಗಿ ಕೇಳಿತ್ತಿದ್ದೇನೆ. ದಯವಿಟ್ಟು ತಿಳಿಸಿ.

ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಉದಾ: ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಠಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾಗಳು ಇವೆ. ಜೊತೆಗೆ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಸಿನೆಮಾಗಳು ಅತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನೆಮಾಗಳು ಕಳೆದ ನಾಲ್ಲೈದು ವರ್ಷಗಳಲ್ಲೇ ಸಾಕಷ್ಟಿವೆ. ಅದು ಯಾವುದಕ್ಕೂ ನೀಡದ ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧವಾದದ್ದು ಎಂದು ತಮಗೆ ಮನವರಿಕೆ ಮಾಡಲು ಇಚ್ಚಿಸುತ್ತೇನೆ.

ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾರೊಬ್ಬ ನಿರ್ಮಾಪಕರು ಅಣ್ಣಾವ್ರ ಆಶಯ ಮೀರಿ, ಕನ್ನಡ ಚಿತ್ರರಂಗವನ್ನು ಹೊರಗಿಟ್ಟು, ಸ್ವಾರ್ಥಿಗಳಂತೆ ತಮ್ಮ ಸಿನೆಮಾಗೆ ಮಾತ್ರ ಶೇ 100 ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರರು, ತಮ್ಮಲ್ಲಿ ಬೇಡಿಕೊಳ್ಳಲಾರರು ಎಂದು ನನ್ನ ಬಲವಾದ ನಂಬಿಕೆ. ಇದು ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿರ್ಮಾಪಕರ, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಹಾಗೂ ನಮ್ಮ ನೆಚ್ಚಿನ ಅಣ್ಣಾವ್ರು ಡಾ.ರಾಜ್‌ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ, ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಸಿನೆಮಾಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುತ್ತೀರಾ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ.

ಸಿನೆಮಾ ನಿರ್ದೇಶಕ
ಮಂಸೋರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.