ADVERTISEMENT

ಗೋವಾ ಸಿನಿಮೋತ್ಸವ ಉದ್ಘಾಟನೆ: ಸತ್ಯಜಿತ್‌ ರೇ ಸ್ಮರಣೆ

ನಟಿ ಹೇಮಮಾಲಿನಿ, ಸಿನಿಮಾ ಲೇಖಕ ಪ್ರಸೂನ್‌ ಜೋಷಿಗೆ ಪ್ರಶಸ್ತಿ

ಪ್ರೇಮಕುಮಾರ್ ಹರಿಯಬ್ಬೆ
Published 20 ನವೆಂಬರ್ 2021, 18:58 IST
Last Updated 20 ನವೆಂಬರ್ 2021, 18:58 IST
   

ಪಣಜಿ: ಬಹುಭಾಷಾ ನಟಿ ಹೇಮಮಾಲಿನಿ, ಸಿನಿಮಾ ಲೇಖಕ ಪ್ರಸೂನ್‌ ಜೋಷಿ ಅವರಿಗೆ ‘ದ ಫಿಲ್ಮ್‌ ಪರ್ಸನಾಲಿಟಿ ಆಫ್‌ ದ ಇಯರ್‌’ ಪ್ರಶಸ್ತಿ ವಿತರಣೆ. ಸತ್ಯಜಿತ್‌ ರೇ ಜನ್ಮ ಶತಮಾನೋತ್ಸವ ವರ್ಷದ ನೆನಪಿನಲ್ಲಿ ಜೀವಮಾನ ಸಾಧನೆಗಾಗಿ ನೀಡುವ ಪ್ರಶಸ್ತಿಯನ್ನು ಹಾಲಿವುಡ್‌ನ ಹಿರಿಯ ನಿರ್ದೇಶಕ ಮಾರ್ಟಿನ್‌ ಸೆರ್ಕೋಸಿ ಮತ್ತು ಹಂಗೇರಿಯ ನಿರ್ದೇಶಕ ಇಸ್ಟೆವನ್‌ ಝಾಬೊ ಅವರಿಗೆ ನೀಡಿದ್ದೇವೆ ಎಂದು ಪ್ರಕಟಿಸಿದ ಕ್ಷಣಗಳು ಇಂದು ಆರಂಭವಾದ 52ನೇ ಭಾರತದ ಅಂತರರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಪ್ರಮುಖ ಸಂಗತಿಗಳು.

ಸೆರ್ಕೋಸಿ ಮತ್ತು ಇಸ್ಟೆವನ್‌ ಝಾಬೊ ಸಮಾರಂಭಕ್ಕೆ ಬರಲಿಲ್ಲ. ಇಬ್ಬರೂ ಸಮಾರಂಭಕ್ಕಾಗಿ ಮಾಡಿ ಕಳುಹಿ
ಸಿದ್ದ ವಿಡಿಯೊ ತುಣುಕುಗಳನ್ನು ತೋರಿಸ
ಲಾಯಿತು. ಇಬ್ಬರೂ ಸತ್ಯಜಿತ್‌ ರೇ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಸಂತಸಪಟ್ಟರು.

ಸತ್ಯಜಿತ್‌ ರೇ ಸಿನಿಮಾ ಜಗತ್ತಿನ ಸಾರ್ವಕಾಲಿಕ ಪ್ರತಿಭಾವಂತ ನಿರ್ದೇಶಕರು. ತಾವೂ ಸೇರಿದಂತೆ ಜಗತ್ತಿನ ಅನೇಕರಿಗೆ ಅವರ ಪಥೇರ್‌ ಪಾಂಚಾಲಿ ಮತ್ತು ಇತರ ಸಿನಿಮಾಗಳು ಸ್ಫೂರ್ತಿಯಾಗಿದ್ದವು ಎಂದು ಹೇಳಿ ರೇ ಅವರನ್ನು ಸ್ಮರಿಸಿಕೊಂಡರು.

ADVERTISEMENT

ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಳ್ಳೈ ದೀಪ ಬೆಳಗಿಸಿ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಪ್ರಸಾರ ಖಾತೆ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌, ರಾಜ್ಯ ಸಚಿವ ಎಲ್‌. ಮುರುಗನ್‌, ಕೇಂದ್ರ ಇನ್ನೊಬ್ಬ ಸಚಿವ ಶ್ರೀಪಾದ ನಾಯಕ್‌, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ನಟಿ ಖುಷ್ಬೂ, ನಿರ್ದೇಶಕಿ ಮಂಜು ಬೋರಾ, ಮಧುರ್‌ ಭಂಡಾರ್ಕರ್‌, ಎ. ಕೆ. ಬೀರ್‌, ರವಿ ಕೊಟ್ಟಾರ್‌ಕರ್ ಮತ್ತಿತರರು ವೇದಿಕೆಯಲ್ಲಿದ್ದರು.

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಾತನಾಡಿ, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಗೋವಾ ವಿಮೋಚನೆಯ ಅರವತ್ತನೇ ವರ್ಷದ ಆಚರಣೆ ನೆನಪಿನಲ್ಲಿ ಗೋವಾದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

ಸಮಾರಂಭದಲ್ಲಿ ಸಲ್ಮಾನ್‌ ಖಾನ್‌, ರಣಬೀರ್‌ ಕಪೂರ್‌, ರಾಶಿ ಖನ್ನಾ ಸೇರಿದಂತೆ ಸಿನಿಮಾರಂಗದ ಅನೇಕ ಗಣ್ಯರು ಹಾಜರಿದ್ದರು. ಉದ್ಘಾಟನೆಯ ನಂತರ ಸ್ಪ್ಯಾನಿಶ್‌ ಚಿತ್ರ ‘ದ ಕಿಂಗ್‌ ಆಫ್‌ ಆಲ್‌ ದ ವರ್ಲ್ಡ್‌’ ಪ್ರದರ್ಶನವಾಯಿತು.

ಶುಕ್ರವಾರ ರಾತ್ರಿ, ಶನಿವಾರ ಮಧ್ಯಾಹ್ನ ಮತ್ತು ಸಂಜೆ ಸುರಿದ ಜಿಟಿಜಿಟಿ ಮಳೆ ಚಿತ್ರೋತ್ಸವದ ಸಡಗರ ಮತ್ತು ಸಂಭ್ರಮಕ್ಕೆ ಅಡ್ಡಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.