ADVERTISEMENT

ಅರ್ಧ ಚಿತ್ರೀಕರಣ ಮುಗಿಸಿದ ‘ಹಾಫ್‌’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 10:56 IST
Last Updated 16 ಡಿಸೆಂಬರ್ 2020, 10:56 IST
ಹಾಫ್‌ ಚಿತ್ರದಲ್ಲಿ ಲೋಕೇಂದ್ರ ಸೂರ್ಯ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ
ಹಾಫ್‌ ಚಿತ್ರದಲ್ಲಿ ಲೋಕೇಂದ್ರ ಸೂರ್ಯ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ   

‘ಅಟ್ಟಯ್ಯ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ‘ಹಾಫ್’ ಚಿತ್ರವು ಮೊದಲ ಹಂತದ ಶೂಟಿಂಗ್‌ ಪೂರ್ಣಗೊಳಿಸಿದೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆಯನ್ನು ಲೋಕೇಂದ್ರ ಸೂರ್ಯ ನಿಭಾಯಿಸಿದ್ದಾರೆ.

ಮುಂದಿನ ಹಂತದ ಚಿತ್ರೀಕರಣವನ್ನು ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರೆಡೆ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.

ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರ ಸಾಹಸ ಸಂಯೋಜನೆ ಇರುವ ಈ ಚಿತ್ರದಲ್ಲಿ ಅದ್ಧೂರಿ ಪೈಟ್‌ಗಳಿವೆಯಂತೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಹದಿನೈದು ದಿನ ನಡೆದ ಚಿತ್ರೀಕರಣದಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ADVERTISEMENT

ಚಿತ್ರದಲ್ಲಿ ಅಪಹರಣ ಘಟನೆಯ ವೇಳೆ ನಡೆಯುವ ರೋಚಕ ಸನ್ನಿವೇಶಗಳ ದೃಶ್ಯಗಳನ್ನು ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನದಲ್ಲಿ ಚಿತ್ರಿಕರಿಸಲಾಗಿದೆ. ಸಹಕಲಾವಿದರು ಮತ್ತು ಸಾಹಸ ಕಲಾವಿದರು ಸೇರಿ ಸುಮಾರು 150ಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗಿಯಾಗಿದ್ದರು.

‘ಈವರೆಗೆ ಹೊಸಬರ ನೂರಾರು ಸಿನಿಮಾಗಳಿಗೆ ಸಾಹಸ ದೃಶ್ಯ ಸಂಯೋಜಿಸಿದ್ದೇನೆ. ಆದರೆ ಲೋಕೇಂದ್ರ ಅವರ ತಂಡದ ಕಾರ್ಯವೈಖರಿ ನೋಡಿದಾಗ ಇವರೆಲ್ಲರೂ ಹೊಸಬರೇ ಎನ್ನುವ ಅನುಮಾನ ಮೂಡಿತು. ಮಾಗಿದ ಕಲಾವಿದರು, ತಂತ್ರಜ್ಞರಿಂದ ಕೂಡಿದ ತಂಡವಿದು. ಒಂದು ದಿನದಲ್ಲಿ ಐವತ್ತೆರಡು ದೃಶ್ಯಗಳನ್ನು ಸರಾಗವಾಗಿ ಚಿತ್ರೀಕರಿಸಿದೆವು. ಇದೊಂದು ದಾಖಲೆಯೇ ಸರಿ ಎನಿಸಿತು’ ಎಂದು ಥ್ರಿಲ್ಲರ್‌ ಮಂಜು ಚಿತ್ರತಂಡವನ್ನು ಪ್ರಶಂಸಿಸಿದ್ದಾರೆ.

ವರ್ಡ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ʻರೆಡ್‌ ಅಂಡ್‌ ವೈಟ್‌ ಮ್ಯಾನ್‌ʼ ಎಂದು ದಾಖಲೆ ನಿರ್ಮಿಸಿರುವ ರೆಡ್‌ ಅಂಡ್‌ ವೈಟ್‌ ಸವೆನ್‌ ರಾಜ್‌ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಆಸಿಯಾ, ಅಥಿರಾ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್‌, ಮೋಹನ್‌ ನೆನಪಿರಲಿ ಅವರ ತಾರಾಗಣವಿದೆ.

ಮಲ್ಲಿಕಾರ್ಜುನ್‌ ಬಿ.ಆರ್. ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಋತು ಚೈತ್ರಾ ಅವರ ವಸ್ತ್ರಾಲಂಕಾರ ಹಾಫ್‌ ಚಿತ್ರಕ್ಕಿದೆ.

ಆರ್.ಡಿ. ಎಂಟರ್ ಪ್ರೈಸಸ್‌, ರಾಜು ಕಲ್ಕುಣಿ ಅವರ ಬ್ಯಾನರ್‌ ಅಡಿ ಡಾ. ಪವಿತ್ರ ಆರ್. ಪ್ರಭಾಕರ್‌ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.