Hari Hara Veera Mallu
ಹೈದರಾಬಾದ್: ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿನಯದ, ಐತಿಹಾಸಿಕ ಕಥೆ ಆಧಾರಿತ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು ಟ್ರೇಲರ್ ಬಿಡುಗಡೆಯಾಗಿದೆ.
ಟ್ರೇಲರ್ ಗಮನಿಸಿದಾಗ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ ಎಂದು ಪವನ್ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಇದೇ ಜುಲೈ 24ಕ್ಕೆ ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.
ವೀರ ಮಲ್ಲು ಅವತಾರದಲ್ಲಿರುವ ಪವನ್ ಕಲ್ಯಾಣ್ ಅವರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ಪವನ್ ಕಲ್ಯಾಣ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಪಾತ್ರಕ್ಕಾಗಿ ಪವನ್ ಕಲ್ಯಾಣ ಮಾರ್ಷಲ್ ಆರ್ಟ್ಸ್‌ನಲ್ಲಿ ತರಬೇತಿಯನ್ನೂ ಪಡೆದಿದ್ದಾರೆ ಎನ್ನಲಾಗಿದೆ.
‘ಹರಿ ಹರ ವೀರ ಮಲ್ಲು’ ಸಿನಿಮಾವನ್ನು ಕ್ರಿಶ್ ಜಗಲಾಮುಡಿ ಹಾಗೂ ಎ.ಎಂ. ಜ್ಯೋತಿ ಕೃಷ್ಣಾ ಅವರು ಜಂಟಿಯಾಗಿ ನಿರ್ದೇಶಿಸಿದ್ದು ಮೆಗಾ ಸೂರ್ಯ ಪ್ರೊಡಕ್ಷನ್ ನಿರ್ಮಿಸಿದೆ. ಈ ಚಿತ್ರ ಪಾರ್ಟ್ 1 ರೂಪದಲ್ಲಿ ಬರಲಿದ್ದು, ಪಾರ್ಟ್ 2 ಗೂ ತಯಾರಿ ನಡೆದಿದೆ.
ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸಲಿದ್ದಾರೆ. ಬಾಬಿ ದೇವೋಲ್, ನರ್ಗಿಸ್ ಫಕ್ರಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜನಸೇನಾ ಪಕ್ಷದ ರಾಜಕಾರಣದ ಜೊತೆ ಜೊತೆಗೆ ಡಿಸಿಎಂ ಆಗಿಯೂ ಸರ್ಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪವನ್ ಕಲ್ಯಾಣ್ ಅವರು ಸಿನಿಮಾಗಳಲ್ಲೂ ಅಭಿನಯಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.