ADVERTISEMENT

ಹರಿದ ದಾರ; ಚುಚ್ಚಿದ ಸೂಜಿ- ಅಸಮಾಧಾನ ಹೊರಹಾಕಿದ ಹರಿಪ್ರಿಯಾ

ಇದು ಸೂಜಿದಾರ ಸಿನಿಮಾ ಬಿಡುಗಡೆ ನಂತರದ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 14:39 IST
Last Updated 14 ಮೇ 2019, 14:39 IST
ಹರಿಪ್ರಿಯಾ
ಹರಿಪ್ರಿಯಾ   

ಬೆಂಗಳೂರು: ‘ಸೂಜಿದಾರ’ ಸಿನಿಮಾ ನಿರ್ಮಾಣಕ್ಕೂ ಮೊದಲು ನಿರ್ದೇಶಕ ಮೌನೇಶ್‌ ಬಡಿಗೇರ್‌ ಅವರು ನನಗೆ ಹೇಳಿದ ಕಥೆಯೇ ಬೇರೆ. ಆದರೆ, ಅವರು ತೆರೆ ಮೇಲೆ ಪ್ರೇಕ್ಷಕರಿಗೆ ತೋರಿಸಿರುವ ಕಥೆಯೇ ಬೇರೆಯಾಗಿದೆ. ಇದರಿಂದ ನನಗೂ ಮತ್ತು ನನ್ನ ಅಭಿಮಾನಿಗಳಿಗೆ ತುಂಬಾ ನಿರಾಶೆಯಾಗಿದೆ ಎಂದು ನಟಿ ಹರಿಪ್ರಿಯಾ ಫೇಸ್‌ಬುಕ್‌ನಲ್ಲಿ ತೋಡಿಕೊಂಡಿರುವ ಅಸಮಾಧಾನ ಈಗ ವೈರಲ್‌ ಆಗಿದೆ.

ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಹೇಳಿರುವುದು ಇಷ್ಟು

‘ದಯವಿಟ್ಟು ನನ್ನನ್ನು ಕ್ಷಮಿಸಿ. ಮತ್ತೊಮ್ಮೆ ಕ್ಷಮಿಸಿಬಿಡಿ. ನನ್ನ ಅಭಿಮಾನಿಗಳು ಕಳೆದ ಭಾನುವಾರ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮನೆ ಹತ್ತಿರ ಬಂದಿದ್ದರು. ಆಗಸೂಜಿದಾರ ಸಿನಿಮಾದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸೂಜಿದಾರ ಸಿನಿಮಾದಲ್ಲಿ ನನ್ನಿಂದತುಂಬಾ ನಿರೀಕ್ಷೆ ಮಾಡಿದ್ದರಂತೆ. ಆದರೆ, ಸಿನಿಮಾ ನೋಡಲು ಆಗದೆ, ಚಿತ್ರಮಂದಿರದಿಂದಅರ್ಧಕ್ಕೆ ಎದ್ದು ಹೊರ ನಡೆದರಂತೆ...! ನಿಜ ಹೇಳಬೇಕೆಂದರೆ ನಿರ್ದೇಶಕರು ನನಗೆ ಹೇಳಿದ ಕಥೆ ಈ ರೀತಿ ಇರಲಿಲ್ಲ. ಅವರು ಕೆಲವು ಅನಗತ್ಯ ದೃಶ್ಯಗಳನ್ನು ಸಿನಿಮಾಕ್ಕೆ ಸೇರಿಸಿಕೊಂಡಿದ್ದಾರೆ... ಈ ಚಿತ್ರವನ್ನು ನಾನು ಮೊದಲು ನೋಡಿದಾಗನನಗೆ ತುಂಬಾ ನಿರಾಸೆಯಾಯಿತು. ಆದರೆ, ನಾನು ಮೌನವಾಗಿದ್ದೆ. ರಂಗಭೂಮಿ ತಂಡವೊಂದು ಪೂರ್ಣ ಪ್ರಮಾಣದ ಸಿನಿಮಾ ಮಾಡುವುದನ್ನಷ್ಟೇ ನಾನು ಬಯಸಿದ್ದೆ. ಆದರೆ, ಈಗ ಏನಾಗಿದೆ ನೋಡಿ.... ನಿಮ್ಮ ಬಳಿ ಕ್ಷಮೆಯಾಚಿಸುವೆ. ನನ್ನ ಕಡೆಯಿಂದ ಇಂತಹ ತಪ್ಪು ಮತ್ತೊಮ್ಮೆ ಮರುಕಳಿಸದು. ಮುಂದೆ ಬರುವ ನನ್ನ ಸಿನಿಮಾಗಳಲ್ಲಿ ನಿಮ್ಮನ್ನು ಖಂಡಿತಾ ರಂಜಿಸುವೆ’

ADVERTISEMENT

ಮೌನ ಮುರಿದ ಮೌನೇಶ್‌

‘ಸೂಜಿದಾರ ಸಿನಿಮಾ ಮಾಡುವಾಗ ನಟಿ ಹರಿಪ್ರಿಯಾ ಅವರಿಂದ ನಮಗೆ ಸರಿಯಾದ ಸಹಕಾರ ಸಿಕ್ಕಿಲ್ಲ. ಅಕ್ಟೋಬರ್‌ನಲ್ಲೇ ಸಿನಿಮಾ ಸಿದ್ಧವಾಗಿತ್ತು. ಆದರೆ, ಅವರು ಮೊಬೈಲ್‌ ಕರೆಯನ್ನೇ ಸ್ವೀಕರಿಸುತ್ತಿರಲಿಲ್ಲ. ಸಿನಿಮಾದ ಪ್ರಚಾರಕ್ಕೂ ಸರಿಯಾಗಿ ಬರಲಿಲ್ಲ. ಈಗ ಸಿನಿಮಾಬಿಡುಗಡೆಯಾದ ಮೂರು ದಿನಗಳ ನಂತರ ಇಂತಹ ಹೇಳಿಕೆ ನೀಡುವುದು ಬೇಸರ ಮತ್ತು ಹಾಸ್ಯಾಸ್ಪದ’ ಎಂದು ನಿರ್ದೇಶಕ, ರಂಗಕರ್ಮಿ ಮೌನೇಶ್‌ ಬಡಿಗೇರ್‌ ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆನ್ನುವ ಕಾರಣಕ್ಕೆ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ? ಸಿನಿಮಾ ಮಾಡುವ ಮೊದಲುಎರಡೂವರೆ ಗಂಟೆ ಇಡೀ ಸಿನಿಮಾ ಚಿತ್ರಕಥೆ ಹೇಳಿದ್ದೇನೆ. ಇಡೀ ಸಿನಿಮಾದ ಬೌಂಡೆಡ್‌ ಕಾಪಿ ಅವರ ಬಳಿ ಇದೆ. ಸ್ಕ್ರಿಪ್ಟ್‌ ಕೂಡ ಅವರ ಬಳಿಯೇ ಇದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿ ನೋಡಲಿ. ಅದು ಬಿಟ್ಟು ಇಂತಹ ಹೇಳಿಕೆ ನೀಡುವುದು ಶೋಭೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹರಿಪ್ರಿಯಾ ಅವರು ಸಿನಿಮಾ ಚಿತ್ರೀಕರಣದ ವೇಳೆ ನಮಗೆ ನೀಡಿದ್ದ ಡೇಟ್‌ಗಳಲ್ಲಿ ಮೂರು ದಿನಗಳ ಡೇಟ್‌ಗಳನ್ನುತಪ್ಪಿಸಿದರು. ಅವರು ಕೊಟ್ಟ ಸಮಯದಲ್ಲಿ ಎಷ್ಟು ಶೂಟಿಂಗ್‌ ಮಾಡಬಹುದು ಅಷ್ಟನ್ನು ಮಾಡಿದ್ದೇವೆ. ರಂಗಭೂಮಿಯ ತಂಡ ಬೆಂಬಲಿಸಲು ನಟಿಸಿದೆ ಎನ್ನುವ ಮಾತು ಹೇಳಿದ್ದಾರೆ. ನಾವೇನು ತರಬೇತಿಗಳಾ? ಅವರು ಫ್ರೀಯಾಗಿ ನಟಿಸಿದ್ದಾರೆಯೇ? ಕಮರ್ಷಿಯಲ್‌ ಸಿನಿಮಾಕ್ಕೆ ತೆಗೆದುಕೊಳ್ಳುವ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ. ನಟ ಪ್ರಕಾಶ್‌ ರೈ ಅವರು ಪಿ.ಶೇಷಾದ್ರಿಯವರ ‘ಅತಿಥಿ’ ಸಿನಿಮಾಕ್ಕೆ ಒಂದು ರೂಪಾಯಿ ಸಂಭಾವನೆ ಪಡೆದಿದ್ದರು. ಆ ರೀತಿಏನಾದರೂ ಹರಿಪ್ರಿಯಾ ನಟಿಸಿದ್ದರೆ,ಅವರ ಮಾತಿಗೆ ಅರ್ಥವಿರುತ್ತಿತ್ತು ಎಂದು ಹೇಳಿದ್ದಾರೆ.

ಸೂಜಿದಾರ ಸಿನಿಮಾದಲ್ಲಿ ಹರಿಪ್ರಿಯಾ ಜತೆಗೆ ನಟಿಸಿರುವ ಉಳಿದ ಕಲಾವಿದರ ಬಗ್ಗೆಯೂ ಮಾಧ್ಯಮಗಳಲ್ಲಿ ಸಮಾನ ಪ್ರಶಂಸೆ ಬರುತ್ತಿದೆ. ಈ ಚಿತ್ರದಲ್ಲಿನಬೇರೆಯ ಪಾತ್ರಗಳಿಗೆವಿಮರ್ಶೆಗಳಲ್ಲಿಯೂ ಶ್ಲಾಘನೆ ಸಿಗುತ್ತಿರುವುದರಿಂದ ಹರಿಪ್ರಿಯಾ ಅವರು ಅಹಂಗೆ ಪೆಟ್ಟು ಬಿದ್ದಿರಬಹುದು. ಹಾಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಕೆಲವು ನಿರ್ದೇಶಕರು ಕಡಿಮೆ ಬಟ್ಟೆ ತೊಡಿಸಿ, ಗ್ಲಾಮರಸ್ಸಾಗಿ ತೋರಿಸುವುದನ್ನು ಕಂಡಿದ್ದೇವೆ. ಆದರೆ, ನಾವು ಅವರೊಳಗಿನ ನಿಜವಾದ ಅಭಿನೇತ್ರಿಯನ್ನು ಉದ್ದೀಪನಗೊಳಿಸುವ ಕೆಲಸ ಮಾಡಿದೆವು. ರಂಗಭೂಮಿಯಲ್ಲೇ ಅದ್ಭುತವಾಗಿ ನಟಿಸುವ ನಟಿಯರೂ ಇದ್ದರು. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತ್ಯುತ್ತರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.