ADVERTISEMENT

ಹಿಂದಿ ಕಿರುತೆರೆಯಿಂದ ಚಂದನವನದೆಡೆಗೆ..

ರೇಷ್ಮಾ
Published 19 ಜೂನ್ 2020, 16:37 IST
Last Updated 19 ಜೂನ್ 2020, 16:37 IST
ಕಿರಣ್‌ ರಾಜ್‌
ಕಿರಣ್‌ ರಾಜ್‌   

ಮೈಸೂರಿನ ಆ ಹುಡುಗ ನಿರ್ದೇಶಕನಾಗುವ ಕನಸಿನೊಂದಿಗೆ ತರಬೇತಿ ಸಲುವಾಗಿ ದೂರದ ಮುಂಬೈಗೆ ಪಯಣ ಬೆಳೆಸುತ್ತಾರೆ. ಫಿಲ್ಮ್‌ ಮೇಕಿಂಗ್‌ ಕೋರ್ಸ್‌ನಲ್ಲಿ ಡಿಗ್ರಿ ಪಡೆದ ನಂತರ ಹಿಂದಿ ಧಾರಾವಾಹಿಯಲ್ಲಿ ನಾಯಕವಾಗುವ ಅವಕಾಶ ಸಿಗುತ್ತದೆ. ‘ಕನ್‌ಫೆಷನ್‌ ಆಫ್‌ ಟೀನೇಜರ್‌‌’ ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಾರೆ. ಹೀಗೆ ಒಂದರ ಹಿಂದೆ ಒಂದರಂತೆ ಹಿಂದಿ ಧಾರಾವಾಹಿಗಳಲ್ಲಿ ನಟಿಸುವ ಇವರು ‘ಲೈಫ್‌ ಸೂಪರ್‌ ಗುರು’ ರಿಯಾಲಿಟಿ ಷೋದ ಮೂಲಕ ಕನ್ನಡಕ್ಕೆ ಮರಳುತ್ತಾರೆ. ಅವರೇ ಕಲರ್ಸ್‌ ಕನ್ನಡ ವಾಹಿನಿಯ ‘ಕನ್ನಡತಿ’ ಧಾರಾವಾಹಿಯ ಹರ್ಷ ಅಲಿಯಾಸ್‌ ಕಿರಣ್‌ರಾಜ್‌.

ಕಿರಣ್‌ ಬಾಲ್ಯದಲ್ಲಿ ನಟನಾಗಬೇಕು ಎಂದುಕೊಂಡವರಲ್ಲ. ರಂಗಭೂಮಿ ನಂಟು ಅವರಿಗಿಲ್ಲ. ಆದರೆ ನೃತ್ಯದ ಮೇಲೆ ಒಲವು. ಕಾಲೇಜು ದಿನಗಳಲ್ಲಿ ಡಿಜೆ ಹಾಗೂ ನೃತ್ಯ ಸಂಯೋಜನೆ ಮಾಡುತ್ತಿದ್ದರು. ಈ ಆಸಕ್ತಿಯೇ ನಟನೆಯತ್ತಲೂ ಮನಸ್ಸು ವಾಲುವಂತೆ ಮಾಡುತ್ತದೆ. ಆ ಕಾರಣಕ್ಕೆ ಕಾಲೇಜು ಮುಗಿಸಿದ ಮೇಲೆ ಫಿಲ್ಮ್‌ ಮೇಕಿಂಗ್ ಕೋರ್ಸ್ ಮಾಡಲು ಮುಂಬೈಗೆ ತೆರಳುತ್ತಾರೆ. ಇದರ ಜೊತೆಗೆ ಆ್ಯಕ್ಟಿಂಗ್‌ ಅಂಡ್‌ ವಾಯ್ಸ್‌ ಪ್ರೆಸೆಂಟೇಷನ್‌ನಲ್ಲಿ ಡಿಪ್ಲೊಮಾ ಪದವಿ ಕೂಡ ಪಡೆಯುವ ಇವರು ಸುದ್ದಿ ವಾಹಿನಿಯೊಂದರಲ್ಲಿ ಕೆಲ ದಿನಗಳ ಕಾಲ ಇಂಟರ್ನ್‌ಶಿಪ್‌ ಕೂಡ ಮಾಡುತ್ತಾರೆ.

’ಕನ್‌ಫೆಷನ್‌ ಆಫ್‌ ಟೀನೆರ್ಜ್‌ ಧಾರಾವಾಹಿ ಜೊತೆಗೆ ಹಿಂದಿಯ ‘ಲವ್‌ ಬೈ ಚಾನ್ಸ್’‌, ‘ಹೀರೋಸ್’‌, ‘ಯೇ ರಿಷ್ತಾ ಕ್ಯಾ ಕೇಲ್ತಾ ಹೆ’, ‘ಕ್ರೈಮ್‌‍ಪೆಟ್ರೋಲ್’‌, ‘ತು ಆಶಿಕಿ’, ’ಆಶಿಯಾನ’ ಧಾರಾವಾಹಿಗಳಲ್ಲೂ ನಟಿಸುತ್ತಾರೆ.

ADVERTISEMENT

ಕನ್ನಡ ಕಿರುತೆರೆಗೆ ಮರಳಿದ ಇವರು ‘ದೇವತೆ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತರಾಗುತ್ತಾರೆ. ನಂತರ ‘ಗುಂಡ್ಯಾನ ಹೆಂಡ್ತಿ’, ‘ಚಂದ್ರಮುಖಿ’, ’ಕಿನ್ನರಿ’ ಧಾರಾವಾಹಿಗಳಲ್ಲೂ ನಟಿಸುತ್ತಾರೆ. ಕಿನ್ನರಿಯ ನಕುಲ್‌ ಪಾತ್ರ ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಪಾತ್ರ ಎಂದರೆ ತಪ್ಪಾಗಲಿಕ್ಕಿಲ್ಲ.

ಸಿನಿಮಾಗಳಲ್ಲೂ ನಟನೆ

ಕನ್ನಡದ ‘ಹುಲಿ’ ಸಿನಿಮಾದಲ್ಲಿ ಮೊದಲ ಬಾರಿ ಬಾಲನಟನಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ’ಮಾರ್ಚ್ 22’, ’ವಾಚ್‌ಮನ್‌’, ’ಅಸತೋಮಸದ್ಗಮಯ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಾರೆ. ಸದ್ಯಕ್ಕೆ ಕನ್ನಡದ ’ಜೀವ್ನಾ ನಾಟ್ಕ ಸ್ವಾಮಿ’ ಹಾಗೂ ತೆಲುಗಿನ ’ನುವ್ವೆ ನಾ ಪ್ರಾಣಂ’ ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ. ಇದಲ್ಲದೇ ಕನ್ನಡದಲ್ಲಿ 2 ಸಿನಿಮಾಗಳು ಹಾಗೂ ತೆಲುಗಿನ ಒಂದು ಸಿನಿಮಾಕ್ಕೆ ಸಹಿ ಹಾಕಿದ್ದು ಲಾಕ್‌ಡೌನ್ ಕಾರಣದಿಂದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು.ಇನ್ನೇನು ಶೂಟಿಂಗ್ ಆರಂಭವಾಗಬೇಕಿದೆ.

ಕನ್ನಡತಿ ಧಾರಾವಾಹಿ ಬಗ್ಗೆ

‘ಕನ್ನಡತಿ ಪರಮ್‌ ಸರ್‌ ಅವರ ಕನಸಿನ ಪ್ರಾಜೆಕ್ಟ್‌. ಧಾರಾವಾಹಿಯ ಹರ್ಷ ಪಾತ್ರ ನನಗೆ ಹೊಂದಿಕೆಯಾಗುತ್ತದೆ ಎಂಬುದು ಅವರ ತಲೆಯಲ್ಲಿ ಇತ್ತು ಅನ್ನಿಸುತ್ತದೆ. ಆ ಕಾರಣಕ್ಕೆ ನನಗೆ ಅವಕಾಶ ನೀಡಿದ್ದರು. ಈ ಧಾರಾವಾಹಿಯಲ್ಲಿ ನನ್ನದು ಮಹತ್ವಾಕಾಂಕ್ಷೆಯುಳ್ಳ ಯುವಕನ ಪಾತ್ರ. ಕಿನ್ನರಿ ಧಾರಾವಾಹಿ ಬಿಟ್ಟ ಮೇಲೆ ಮತ್ತೆ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದುಕೊಂಡಿದ್ದೆ. ಆದರೆ ಪರಮ್‌ ಸರ್‌ ಅವರೇ ಕಥೆ ಬರೆದಿರುವುದು ಎಂಬ ಕಾರಣಕ್ಕೆ ಮತ್ತೆ ಕಿರುತೆರೆಗೆ ಬಂದೆ’ ಎನ್ನುತ್ತಾ ಕನ್ನಡತಿಯ ಹಾದಿಯನ್ನು ವಿವರಿಸುತ್ತಾರೆ.

ಪ್ರತಿಭೆಯೇ ಆಧಾರ

ಸಿನಿಮಾ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬರುವ ನನ್ನಂಥವರಿಗೆ ಪ್ರತಿಭೆಯೇ ಆಧಾರ. ಕಿರುತೆರೆ, ಹಿರಿತೆರೆ ಯಾವುದೇ ಇರಲಿ ಜನರನ್ನು ರಂಜಿಸುವುದು ನನ್ನ ಕೆಲಸ. ಅದಕ್ಕೆ ವೇದಿಕೆ ಯಾವುದೇ ಇರಲಿ ಜನರನ್ನು ತಲುಪುವುದು ಮುಖ್ಯ. ನಮ್ಮನ್ನು ಜನ ಗುರುತಿಸುವುದು ಪ್ರತಿಭೆ ಹಾಗೂ ನಟನೆಯಿಂದ. ನಮ್ಮ ನಟನಾ ಸಾಮರ್ಥ್ಯವೇ ನಮ್ಮನ್ನು ಈ ‌ಕ್ಷೇತ್ರದಲ್ಲಿ ಉಳಿಸುವುದು ಎಂಬುದು ಇವರ ಅನುಭವದ ಮಾತು.

ಎನ್‌ಲೈಟ್ ಕಿರಣ್ ಫೌಂಡೇಶನ್‌

ಸಮಾಜಸೇವಾ ಮನೋಭಾವದ ಇವರು ಎನ್‌ಲೈಟ್‌ ಕಿರಣ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಆ ಮೂಲಕಆ ಮೂಲಕ ಬಡವರು, ವಿದ್ಯಾರ್ಥಿಗಳಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಲಾಕ್‌ಡೌನ್‌ ಆದಾಗ 2000ದಷ್ಟು ಮಂದಿಗೆ ಕಿಟ್‌ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ತಮ್ಮ ಫೌಂಡೇಶನ್‌ ವತಿಯಿಂದ ಮುಂದಿನ ದಿನಗಳಲ್ಲೂ ಸಹಾಯ ಮಾಡುತ್ತೇನೆ ಎನ್ನುವ ಇವರು ತಮ್ಮ ದುಡಿಮೆಯ ಶೇ 40 ರಷ್ಟನ್ನು ಫೌಂಡೇಶನ್‌ಗೆ ಮುಡಿಪಾಗಿಟ್ಟಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.