ಉತ್ತರ ಕರ್ನಾಟಕದವರೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ‘ಹುಲಿಬೀರ’ ನವೆಂಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಈ ಹಿಂದೆ ‘ರಂಗ್‌ಬಿರಂಗಿ’ ಚಿತ್ರ ನಿರ್ದೇಶಿಸಿದ್ದ ಮದರಂಗಿ ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಯರ್ರಾಬಿರ್ರಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಂಜನ್ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ವೀರ ಸಮರ್ಥ ಸಂಗೀತ ಸಂಯೋಜನೆ, ಸನಾತನ ಛಾಯಾಚಿತ್ರಗ್ರಹಣವಿದೆ.
ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.ತುರುವೇಕೆರೆ ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಇದು ನನ್ನ ನಿರ್ದೇಶನದ ಐದನೇ ಚಿತ್ರ. ನಾಲ್ಕು ವರ್ಷಗಳ ಹಿಂದೆಯೇ ಈ ಚಿತ್ರ ಪ್ರಾರಂಭವಾಗಿತ್ತು. ‘ಹುಲಿಬೀರ’ ನಾಯಕನ ಹೆಸರು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲದಕ್ಕೂ ಧೈರ್ಯದಿಂದ ಮುನ್ನುಗ್ಗುವ ಹುಡುಗರನ್ನು ಈ ರೀತಿ ಕರೆಯುತ್ತಾರೆ. ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ ಮುಂದೆನಿಂತು ಕೆಲಸ ಮಾಡುತ್ತಾನೆ. ಹಳ್ಳಿಗಳಿಂದ ನಗರಕ್ಕೆ ಯುವಜನತೆಯ ವಲಸೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ’ ಎಂದಿದ್ದಾರೆ ಮದರಂಗಿ ಮಲ್ಲಿಕಾರ್ಜುನ.
ಬಾದಾಮಿ ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ಹಂತಗಳಲ್ಲಿ 51 ದಿನ ಈ ಚಿತ್ರದ ಚಿತ್ರೀಕರಣ ನಡೆದಿದೆ. ರಂಗಾಯಣ ರಘು ಅವರು ಗ್ರಾಮದ ಹಿರಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವೀಗ ಡಬ್ಬಿಂಗ್ ಹಂತದಲ್ಲಿದ್ದು ನವೆಂಬರ್ ವೇಳೆಗೆ ರಿಲೀಸ್ ಮಾಡುವ ಯೋಜನೆಯಿದೆ ಎಂದಿದೆ ಚಿತ್ರತಂಡ.
ಸಂಗೀತ ನಿರ್ದೇಶಕ ವೀರ್ ಸಮರ್ಥ ಮಾತನಾಡಿ ‘ಚಿತ್ರದಲ್ಲಿ ಜನಪದ, ಮಣ್ಣಿನ ಸೊಗಡಿನ ನಾಲ್ಕು ಹಾಡುಗಳು ಇವೆ. ನಿರ್ದೇಶಕರೇ ಎರಡು ಹಾಡುಗಳನ್ನು, ಶಿವು ಬೆರ್ಗಿ, ನಾಗೇಂದ್ರ ಪ್ರಸಾದ್ ಒಂದೊಂದು ಹಾಡು ಬರೆದಿದ್ದಾರೆ. ಸರಿಗಮಪ ಖ್ಯಾತಿಯ ಶಿವಾನಿ ಹಾಡೊಂದಕ್ಕೆ ದನಿಯಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.