ಶೆಫಾಲಿ ಜರಿವಾಲಾ
ಬೆಂಗಳೂರು: ರೂಪದರ್ಶಿ ಹಾಗೂ ನಟಿ ಶೆಫಾಲಿ ಜರಿವಾಲಾ ಅವರು ಕಳೆದ ಜೂನ್ 27 ರಂದು 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ಮುಂಬೈನಲ್ಲಿ ಅಂತ್ಯಕ್ರಿಯೆ ನಂತರದ ವಿಧಿವಿಧಾನಗಳನ್ನು ಪೂರೈಸಿರುವ ಶೆಫಾಲಿ ಕುಟುಂಬ ಇನ್ನೂ ಅವರ ಸಾವಿನ ಆಘಾತವನ್ನು ಅರಗಿಸಿಕೊಂಡಿಲ್ಲ. ಇದೇ ವೇಳೆ ಶೆಫಾಲಿ ಪತಿ, ನಟ ಪರಾಗ್ ತ್ಯಾಗಿ ಅವರು ಪತ್ನಿ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ಶೆಫಾಲಿ ನನ್ನ ಪ್ರೀತಿ ಅವಳು, ಅವಳು ಹೊರಗೆ ನೋಡುವುದಕ್ಕಿಂತಲೂ ಒಳಗೆ ಅದ್ಭುತವಾದ ವ್ಯಕ್ತಿತ್ವ ಹೊಂದಿದ್ದಳು ಎಲ್ಲರನ್ನೂ ಅತಿಯಾಗಿ ಪ್ರೀತಿಸುತ್ತಿದ್ದಳು, ಮಗಳಾಗಿ, ಪತ್ನಿಯಾಗಿ, ಗೃಹಿಣಿಯಾಗಿ ಅಮ್ಮನಾಗಿ, ಸಾಮಾಜಿಕ ಜೀವನದಲ್ಲಿ ದೊಡ್ಡ ವ್ಯಕ್ತಿತ್ವವಾಗಿ ಅವಳು ನಮ್ಮೊಂದಿಗೆ ಜೀವಿಸಿದ್ದಳು. ಶೆಫಾಲಿ ಮನಸ್ಸು, ದೇಹ ಹಾಗೂ ಆತ್ಮವನ್ನು ಅತ್ಯಂತ ಶಾಂತಚಿತ್ತದಿಂದ ನಿಭಾಯಿಸಿದ್ದು ಬೆರಗು ಮೂಡಿಸಿತ್ತು. ಅವಳ ಬಗ್ಗೆ ಎದ್ದ ಊಹಾಪೋಹಗಳ ಬಗ್ಗೆ ಮಾತನಾಡುವುದು ಸುಲಭ, ಆದರೆ ನಾವು ಅವಳ ಪ್ರಕಾಶಮಾನ ವ್ಯಕ್ತಿತ್ವವನ್ನು ನೆನೆಯಬೇಕಾಗಿದೆ. ಅವಳ ಚೈತನ್ಯವನ್ನು ನಾನು ಜೀವಂತವಾಗಿರಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ
ಗುಜರಾತ್ ಮೂಲದ ಶೆಫಾಲಿ, ಬಿಗ್ ಬಾಸ್, ಹಿಂದಿ ಕಿರುತೆರೆ, ಸಿನಿಮಾ ರಂಗ ಹಾಗೂ ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ್ದರು. ಉತ್ತರ ಪ್ರದೇಶ ಮೂಲದ ನಟ ಪರಾಗ್ ತ್ಯಾಗಿ ಅವರನ್ನು 2014ರಲ್ಲಿ ಎರಡನೇ ಮದುವೆಯಾಗಿದ್ದರು.
ಅವರ ಸಾವಿನ ನಂತರ, ‘ಶೆಫಾಲಿ ಕಡಿಮೆ ವಯಸ್ಸಿನವರಂತೆ ಕಾಣಲು ಔಷಧಿ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಅಡ್ಡಪರಿಣಾಮಗಳಿಂದ ಅವರ ಸಾವು ಸಂಭವಿಸಿದೆ’ ಎಂಬ ಮಾತುಗಳು ಕೇಳಿ ಬಂದಿದ್ದವು. ಅವರ ಸಾವಿನ ಬಗ್ಗೆ ಪ್ರಕರಣವೂ ದಾಖಲಾಗಿದೆ.
ವಿಶೇಷವೆಂದರೆ ಶೆಫಾಲಿ ಅವರು 2011 ರಲ್ಲಿ ಬಿಡುಗಡೆಯಾಗಿದ್ದ ಕನ್ನಡದ ಪುನೀತ್ ರಾಜ್‌ಕುಮಾರ್ ಅಭಿನಯದ ‘ಹುಡುಗರು’ ಸಿನಿಮಾದ ‘ತೊಂದ್ರೆ ಇಲ್ಲ ಪಂಕಜ’ ಹಾಡಿಗೆ ನೃತ್ಯ ಮಾಡಿ ಕನ್ನಡದಲ್ಲೂ ಜನಪ್ರಿಯ ಆಗಿದ್ದರು. 2002ರಲ್ಲಿ 'ಕಾಂಟಾ ಲಗಾ' ವಿಡಿಯೊ ಹಾಡಿನಲ್ಲಿ ಕಾಣಿಸಿಕೊಂಡ ಬಳಿಕ ಅವರ ಜನಪ್ರಿಯರಾದರು. ನಂತರ ಹಿಂದಿ ಬಿಗ್‌ಬಾಸ್ 13ರಲ್ಲಿ ಭಾಗವಹಿಸುವ ಮೂಲಕ ಮನೆಮಾತಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.