ಪ್ರೇಮಿಗಳ ದಿನದಂದು (ಫೆ.14) ಉಪೇಂದ್ರ ಅವರ ‘ಐ ಲವ್ ಯೂ’ ಚಿತ್ರ ತೆರೆಗೆ ಬರುತ್ತದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಏಪ್ರಿಲ್ ತಿಂಗಳ ಎರಡನೆಯ ವಾರದಲ್ಲಿ ಉಪೇಂದ್ರ ಅವರು ‘ಐ ಲವ್ ಯೂ’ ಹೇಳಲಿದ್ದಾರೆ. ಅಂದು ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಚಿತ್ರ ತಂಡ ಈಗ ಹೇಳುತ್ತಿದೆ.
ಈ ಬಗ್ಗೆ ಮಾಹಿತಿ ನೀಡಲು ಚಿತ್ರ ತಂಡವು ಈಚೆಗೆ ಮಾಧ್ಯಮಗಳ ಮುಂದೆ ಬಂದಿತ್ತು. ಚಿತ್ರದ ಬಿಡುಗಡೆ ತಡವಾಗಿರುವುದಕ್ಕೆ ಕಾರಣಗಳನ್ನು ಹೇಳಿದ ನಿರ್ಮಾಪಕ, ನಿರ್ದೇಶಕ ಆರ್. ಚಂದ್ರು ಅವರು, ‘ಎರಡು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಸಿನಿಮಾ ಬಿಡುಗಡೆಗೆ ಆತುರಪಡುವುದು ಬೇಡ ಎಂದು ಉಪೇಂದ್ರ ಅವರೇ ಸಲಹೆ ನೀಡಿದ್ದರು. ಟಾಲಿವುಡ್ನಲ್ಲಿ ಸುಮಾರು 250 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಶ್ರೇಯಸ್ ಮೀಡಿಯಾದವರು ಯೋಜನೆ ಹಾಕಿಕೊಂಡಿದ್ದಾರೆ. ಇಲ್ಲಿನ ವಿತರಕರೂ ‘ಬೇಗನೆ ಸಿನಿಮಾ ಕೊಡಿ’ ಎಂದು ಕೇಳುತ್ತಿದ್ದಾರೆ. ನಮ್ಮ ಕಡೆಯಿಂದ ತಾಂತ್ರಿಕ ಕೆಲಸಗಳು ತಡವಾಗುತ್ತಿವೆ. ಇದು ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಇಲ್ಲ. ಏಪ್ರಿಲ್ 12ರಂದು ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ’ ಎಂದರು.
ಈ ಸಿನಿಮಾದಲ್ಲಿ ಉಪೇಂದ್ರ ಅವರ ಮಿದುಳು ಹಾಗೂ ನಿರ್ದೇಶಕ ಆರ್. ಚಂದ್ರು ಅವರ ಹೃದಯ ಇದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿರುವ ಸೋನು ಗೌಡ ಅವರು ಟೀಸರ್ನಲ್ಲಾಗಲಿ ಪೋಸ್ಟರ್ಗಳಲ್ಲಾಗಲಿ ಕಾಣಿಸಿಕೊಂಡಿಲ್ಲ. ಆದರೆ ಎಲ್ಲ ಸುದ್ದಿಗೋಷ್ಠಿಗಳಲ್ಲೂ ಅವರು ಹಾಜರಾಗುತ್ತಿದ್ದಾರೆ. ‘ಅವರ ಪಾತ್ರ ವಿಶಿಷ್ಟವಾಗಿರುವುದರಿಂದ ಗೋಪ್ಯತೆ ಕಾಯ್ದುಕೊಳ್ಳಲಾಗುತ್ತಿದೆ’ ಎಂದು ಚಿತ್ರ ತಂಡ ಹೇಳುತ್ತಿದೆ.
‘ಯಾವ ಪೋಸ್ಟರ್ನಲ್ಲೂ ನಾನು ಕಾಣಿಸಿಕೊಂಡಿಲ್ಲ ಎಂಬುದು ನಿಜ. ಸಿನಿಮಾ ಬಿಡುಗಡೆ ಆದನಂತರ ನನ್ನ ಪಾತ್ರದ ಮಹತ್ವ ತಿಳಿಯಲಿದೆ. ವಿವರಗಳನ್ನು ತಿಳಿಯಬೇಕಾದರೆ ಚಿತ್ರಮಂದಿರಕ್ಕೇ ಬರಬೇಕು’ ಎಂದು ಸೋನುಗೌಡ ಕುತೂಹಲ ಹೆಚ್ಚುವಂತೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.