ADVERTISEMENT

ಐಫೋನ್‌ನಲ್ಲಿ ಸಿನಿಮಾ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 11:41 IST
Last Updated 26 ಜೂನ್ 2020, 11:41 IST
ಜೋಕರ್‌ ಸಿನಿಮಾದ ಸಿನಿಮಾಟೋಗ್ರಾಫರ್‌ ಲಾರೆನ್ಸ್‌ಶೇರ್‌ ಜೊತೆ ಕಲ್ಪಕ್‌
ಜೋಕರ್‌ ಸಿನಿಮಾದ ಸಿನಿಮಾಟೋಗ್ರಾಫರ್‌ ಲಾರೆನ್ಸ್‌ಶೇರ್‌ ಜೊತೆ ಕಲ್ಪಕ್‌   

ಅಮೆರಿಕದ ಲಾಸ್‌ಏಂಜಲೀಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಿನಿಮಾಟೊಗ್ರಾಫರ್‌‌‌ ಕಲ್ಪಕ್ ಪಾಠಕ್‌, ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಐಫೋನ್‌ನಲ್ಲಿ 90 ನಿಮಿಷದ ಕಲಾತ್ಮಕ ಸಿನಿಮಾವನ್ನು ಚಿತ್ರೀಕರಿಸಿ ಹೊಸ ಟ್ರೆಂಡ್‌ ಹುಟ್ಟು ಹಾಕಿದ್ದಾರೆ.

ಮುಂಬೈನ ಕಲ್ಪಕ್‌ ಪಾಠಕ್ ಅವರು ಈ ಕೊರೊನ – ಲಾಕ್‌ಡೌನ್ ಅವಧಿಯಲ್ಲಿ, ಐಫೋನ್‌ ಬಳಸಿ ‘ಅಮಿಸ್ಟ್‌ ಮೈ ಓನ್‌’ ಹೆಸರಿನ ಸಿನಿಮಾವನ್ನು ಚಿತ್ರೀಕರಿಸಿದ್ದಾರೆ.

ಫೋಟೊ ಜರ್ನಲಿಸ್ಟ್‌ ಆಗಿ ವೃತ್ತಿ ಅರಂಭಿಸಿದಕಲ್ಪಕ್, ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ತೆಗೆದ ಫೋಟೊಗಳಿಗೆ, ಆ ವರ್ಷದ ಫೋಟೊಜರ್ನಲಿಸ್ಟ್‌ ಪ್ರಶಸ್ತಿಗೂ ಭಾಜನರಾಗಿದ್ದರು.

ADVERTISEMENT

ಸಿನಿಮಾದಲ್ಲಿ ಆಸಕ್ತಿ ಹೊಂದಿದ್ದ ಕಲ್ಪಕ್‌,ಮುಂಬೈನ ಕೆಲವು ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಸಿನಿಮಾಟೊಗ್ರಫಿ ಅಧ್ಯಯನಕ್ಕೆಂದು ಲಾಸ್‌ಏಂಜಲೀಸ್‌ಗೆ ತೆರಳಿದ್ದರು. ಸದ್ಯ ಅಲ್ಲೇ ನೆಲೆಸಿದ್ದಾರೆ. ‘ದಿ ಬಿಗ್‌ ರಾಂಟ್’‌ ಸಿನಿಮಾದ ಮೂಲಕ ಪ್ರಸಿದ್ಧರಾದ ಕಲ್ಪಕ್‌ ಪಾಠಕ್, ‘ಬ್ಲಾಕ್‌ಔಟ್‌, ‘ಎನದರ್‌ ಟೈಮ್‌’ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಐಫೋನ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಸಿ ಸುದ್ದಿಯಲ್ಲಿದ್ದಾರೆ.

‘ಪ್ರಸ್ತುತ ಸನ್ನಿವೇಶದಲ್ಲಿ ಕಡಿಮೆ ಬಂಡವಾಳದ ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಐಫೋನ್‌ನಲ್ಲಿ ಸಿನಿಮಾ ಚಿತ್ರೀಕರಿಸುವುದು ಉತ್ತಮ ಉಪಾಯ‘ ಎನ್ನುವ ಪಾಠಕ್, ‘ಭವಿಷ್ಯದಲ್ಲಿ ಸಿನಿಮಾ ತಾಂತ್ರಿಕತೆಯಲ್ಲೂ ಬದಲಾವಣೆಯಾಗುತ್ತದೆ. ಕಡಿಮೆ ಬಜೆಟ್‌ನಲ್ಲಿ ಐಫೋನ್‌ನಲ್ಲೇಸಿನಿಮಾ ಚಿತ್ರೀಕರಣ ಮಾಡುವುದನ್ನು ನೋಡುತ್ತೀರಿ’ ಎಂದು ಹೇಳುತ್ತಾರೆ.

ವಿಶ್ವದೆಲ್ಲೆಡೆ ಕೊರೊನಾ ಸೋಂಕು ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ. ಕಲ್ಪಕ್‌ ಪಾಠಕ್ ಅವರಿಗೂ ಅದರ ಬಿಸಿ ತಟ್ಟಿದೆ. ಹಾಗಾಗಿಯೇ ಅವರು ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಬಂಡವಾಳ ಹೂಡಲಾಗದ ಕಾರಣ, ತಮ್ಮ ಸಿನಿಮಾವನ್ನು ಐಫೋನ್‌ನಲ್ಲೇ ಚಿತ್ರೀಕರಣ ಮಾಡಿದ್ದಾರೆ.

ಪಾಠಕ್‌, ಜನವರಿಯಲ್ಲಿ ‘ಅಮಿಸ್ಟ್‌ ಮೈ ಓನ್’‌ ಸಿನಿಮಾದ ಕೆಲಸ ಆರಂಭಿಸಿದ್ದರು. ಸಿನಿಮಾದ ಚಿತ್ರೀಕರಣ ಕೆಲಸ ಪೂರ್ಣಗೊಂಡಿದೆ. 2021ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

‘ಐಫೋನ್‌ನಲ್ಲಿ ಸಿನಿಮಾ ಚಿತ್ರೀಕರಿಸುವಾಗ ನಾವು ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ನಾವು ಹೊಸ ತಂತ್ರಜ್ಞಾನವನ್ನು ಉಪಯೋಗಿಸುವಾಗ ಇಂಥ ಸವಾಲುಗಳು ಸಾಮಾನ್ಯ. ಹಾಗಾಗಿ ಅವನ್ನೆಲ್ಲ ಪಕ್ಕಕ್ಕಿಟ್ಟು ಮುಂದುವರಿದೆ. ಇನ್ನು, ಸಿನಿಮಾ ಚಿತ್ರೀಕರಣದ ಆರಂಭದಲ್ಲಿ, ಟೀಕೆಗಳನ್ನೂ ಎದುರಿಸಬೇಕಾಯಿತು. ಆದರೆ ಇಂದು ಅನೇಕ ನಿರ್ದೇಶಕರು, ನಿರ್ಮಾಪಕರು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಲು, ನಾನು ಬಳಸಿದಂತಹ ಹೊಸ ತಂತ್ರಗಳನ್ನೇ ಬಳಸಲು ಯೋಚಿಸುತ್ತಿರುವುದು ಖುಷಿ ವಿಷಯ‘ ಎಂದು ಕಲ್ಪಕ್‌ ಪಾಠಕ್‌ ಹೇಳುತ್ತಾರೆ.

ಮೂಲ: ಇಂಡಿಯಾ ಟುಡೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.