ADVERTISEMENT

ಅರ್ಜುನ್‌ಗೆ ‘ಮೋಸ್ಟ್‌ ವಾಂಟೆಡ್‌’ ಆಸರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 19:49 IST
Last Updated 18 ಏಪ್ರಿಲ್ 2019, 19:49 IST
ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌ ಸಿನಿಮಾದ ಪೋಸ್ಟರ್‌
ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌ ಸಿನಿಮಾದ ಪೋಸ್ಟರ್‌   

ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದ ನಟ ಅರ್ಜುನ್‌ ಕಪೂರ್‌ ಬಾಲಿವುಡ್‌ನಲ್ಲಿ ಈಗಷ್ಟೇ ಕಾಲೂರುತ್ತಿರುವ ಯುವಕ. ಈಗಾಗಲೇ ಕೆಲವು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಇನ್ನೂ ಆರಕ್ಕೇರದಂತೆ– ಮೂರಕ್ಕಿಳಿಯದಂತೆ ಇದ್ದಾರೆ. ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ, ವಯಸ್ಸಿನಲ್ಲಿ ತನಗಿಂತ ಹಿರಿಯರಾಗಿರುವ ನಟಿ ಮಲೈಕಾ ಅರೋರಾ ಜೊತೆ ಸುತ್ತಾಡುತ್ತಾ ಸುದ್ದಿ ಮಾಡುತ್ತಿರುವ ಅರ್ಜುನ್‌ಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್‌ ಒಂದರ ಹಂಬಲ ಇತ್ತು. ‘ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌’ ಸಿನಿಮಾದ ಮೂಲಕ ಆ ಬ್ರೇಕ್‌ ಲಭಿಸಬಹುದು ಎಂಬ ನಿರೀಕ್ಷೆ ಈಗ ಅವರಲ್ಲಿ ಮೂಡಿದೆ.

ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದನ್ನು ನೋಡಿದ ಅನೇಕ ಸಿನಿಪ್ರಿಯರು, ‘ಅರ್ಜುನ್‌ ವೃತ್ತಿ ಜೀವನಕ್ಕೆ ಈ ಸಿನಿಮಾ ದೊಡ್ಡ ಮೆಟ್ಟಿಲಾಗುವುದು ಖಚಿತ’ ಎನ್ನುತ್ತಿದ್ದಾರೆ. ಭಾರತದ ಅತ್ಯಂತ ಅಪಾಯಕಾರಿ ಭಯೋತ್ಪಾದಕನನ್ನು ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆಯೇ ಸೆರೆಹಿಡಿಯಲು ಮುಂದಾಗುವ ‘ಪ್ರಭಾತ್‌’ ಎಂಬ ಯುವಕನ ಪಾತ್ರದಲ್ಲಿ ಅರ್ಜುನ್‌ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಥ್ರಿಲ್ಲರ್‌ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಬೆಂಗಳೂರು, ಮುಂಬೈ, ಹೈದರಾಬಾದ್‌, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 52 ಕಡೆ ಸರಣಿ ಬಾಂಬ್‌ ಸ್ಫೋಟಗಳನ್ನು ನಡೆಸಿದ, 433 ಜನರ ಸಾವಿಗೆ ಕಾರಣನಾದ ಭಯೋತ್ಪಾದಕನ ಉಲ್ಲೇಖ ಟ್ರೇಲರ್‌ನಲ್ಲಿದೆ. ಆದರೆ ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಬದಲಿಗೆ ಆತನನ್ನು ‘ಭಾರತದ ಒಸಾಮ’ ಎಂದು ಉಲ್ಲೇಖಿಸಲಾಗಿದೆ. ಹೀಗೆ ತೆರೆಯ ಮೇಲೆ ಸಿನಿಮಾದ ದೃಶ್ಯಗಳು ಮೂಡುತ್ತಿದ್ದರೆ, ಹಿನ್ನೆಲೆಯಲ್ಲಿ ‘ಆತ್ಮಕ್ಕೆ ಯಾವತ್ತೂ ಸಾವಿಲ್ಲ. ಶರೀರ ಮಾತ್ರ ನಾಶವಾಗುತ್ತದೆ. ನಾನು ಜನರನ್ನು ಕೊಲ್ಲುತ್ತಿಲ್ಲ, ಅವರನ್ನು ಬೇರೆ ಶರೀರಕ್ಕೆ ಕಳುಹಿಸುತ್ತೇನೆ... ಇದನ್ನು ನಾನು ಹೇಳುತ್ತಿಲ್ಲ... ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ...’ ಎಂಬ ಮಾತುಗಳು ಕೇಳಿಸುತ್ತವೆ.

ADVERTISEMENT

ಈ ಟ್ರೇಲರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ಅರ್ಜುನ್‌, ‘ಭಾರತದ ಒಸಾಮನನ್ನು ಸೆರೆಹಿಡಿಯುವ, ನಂಬಲಸಾಧ್ಯವಾದ ಸಾಹಸ ಕಥಾನಕ ಹೊಂದಿರುವ ಸಿನಿಮಾ ಇದು. ಗನ್‌ ಅಲ್ಲ ಗುಂಡಿಗೆಯೇ ಮುಖ್ಯವಾಗಿದ್ದ ಆಪರೇಶನ್‌ ಒಂದರ ಕಥೆ’ ಎಂಬ ಅಡಿಬರಹ ಕೊಟ್ಟಿದ್ದಾರೆ.

‘ಸತ್ಯ ಘಟನೆಯೊಂದರಿಂದ ಪ್ರೇರಣೆ ಪಡೆದ ಕಥೆ, ಭಾರತದ ಒಸಾಮನನ್ನು ನಾಶಮಾಡಿ, ದೇಶದ ನೂರು ಕೋಟಿ ಜನರನ್ನು ರಕ್ಷಿಸಿದ ಐವರು ಯುವಕರ ಕಥೆ’ ಎಂಬ ಸಾಲಿನ ಮೂಲಕ ಕಥೆಯ ಸಣ್ಣ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ ಅರ್ಜುನ್‌.

ಈ ಸಿನಿಮಾದ ಕೆಲವು ಪೋಸ್ಟರ್‌ಗಳು ಈಗಾಗಲೇ ವೈರಲ್‌ ಆಗಿವೆ. ಜನರ ಗುಂಪಿನ ಮಧ್ಯೆ ನುಸುಳಿಕೊಂಡಿರುವ ಅರ್ಜುನ್‌ ಅವರನ್ನು ತೋರಿಸುವ ಪೋಸ್ಟರ್‌ ಒಂದು ಪ್ರಚಾರ ಸಾಮಗ್ರಿಯ ಹೈಲೈಟ್‌ ಎನಿಸಿಕೊಂಡಿದೆ. ‘ಈ ಪೋಸ್ಟರ್‌ನಲ್ಲಿ ಅರ್ಜುನ್‌ ಅವರ ಕಣ್ಣುಗಳು ಮಾತನಾಡುತ್ತವೆ’ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ನಟ ವರುಣ್‌ ಧವನ್‌, ನಟಿ ಭೂಮಿ ಪೆಡ್ನೆಕರ್‌ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರ್ಜುನ್‌ ಅವರ ‘ಗರ್ಲ್‌ ಫ್ರೆಂಡ್‌’ ಎಂದು ಹೇಳಲಾಗುವ ಮಲೈಕಾ ಅರೋರಾ ಸಹ ಈ ಪೋಸ್ಟರ್‌ ಅನ್ನು ಮೆಚ್ಚಿಕೊಂಡಿದ್ದು, ‘ಬೆಂಕಿ ಎಮೋಜಿ’ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್‌ಕುಮಾರ್‌ ಗುಪ್ತಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾಯ್‌ಪೋಚೆ ಖ್ಯಾತಿಯ ನಟಿ ಅಮೃತಾ ಪುರಿ ಈ ಚಿತ್ರದಲ್ಲಿ ಅರ್ಜುನ್‌ಗೆ ನಾಯಕಿಯಾಗಿ ಕಾಣಿಸಲಿದ್ದಾರೆ. ಅಂದಹಾಗೆ ಮೇ 24ರಂದು ‘ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌’ನ ಬಿಡುಗಡೆ ದಿನಾಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.